ಆತ್ಮಸಾಕ್ಷಿಗಿಂತ ಅಧಿಕಾರವೇ ದೊಡ್ಡದು, ಪ್ರಾಮಾಣಿಕತೆಗಿಂತ ಪ್ರತಿಷ್ಠೆಯೇ ದೊಡ್ಡದು, ಅಂತಃಕರಣಕ್ಕಿಂತ ಅಹಂಕಾರವೇ ದೊಡ್ಡದು ಎನ್ನುವ ಮನಸ್ಥಿತಿ ಇರುವವರು ಈಗ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾರೆ. ಅದೇ ಕನ್ನಡಿಗರ ದೌರ್ಭಾಗ್ಯ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಅವರು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಕುಟುಕಿದ್ದಾರೆ.
ಎಕ್ಸ್ ತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, “ದಲಿತರಿಗೆ ಸೇರಬೇಕಾದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದಲ್ಲಿ ದೊಡ್ಡ ಭ್ರಷ್ಟಚಾರ ನಡೆದಿರುವಾಗ ‘ಆತ್ಮಸಾಕ್ಷಿ’ ಇರುವ ಯಾವ ಮುಖ್ಯಮಂತ್ರಿಯೂ ಒಂದು ಕ್ಷಣವೂ ತಮ್ಮ ಸ್ಥಾನದಲ್ಲಿ ಮುಂದುವರಿಯುವುದಿಲ್ಲ” ಎಂದಿದ್ದಾರೆ.
“ಪರಿಶಿಷ್ಟ ಪಂಗಡ ಸಮುದಾಯಗಳ ಕಲ್ಯಾಣಕ್ಕೆ ವಿನಿಯೋಗವಾಗಬೇಕಾಗಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಬಳ್ಳಾರಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹಣ, ಹೆಂಡ ಹಂಚಲು ಬಳಕೆಯಾಗಿದೆ ಎಂಬ ಆಘಾತಕಾರಿ ವಿಷಯ ಇ.ಡಿ. ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಬಹಿರಂಗವಾಗಿದೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪೊಲೀಸರಿಗೆ-ಸರ್ಕಾರಕ್ಕೆ ಸವಾಲಾಗಿರುವ ಸೈಬರ್ ಕ್ರೈಮ್
“ನಿಗಮದ ಹಣವನ್ನ ಮಾಜಿ ಸಚಿವ ಬಿ ನಾಗೇಂದ್ರ ಅವರು ತಮ್ಮ ಮನೆಯ ಕರೆಂಟ್ ಬಿಲ್ ಕಟ್ಟಲು, ವಾಹನಗಳಿಗೆ ಡೀಸೆಲ್ ತುಂಬಿಸಲು, ಕುಟುಂಬ ಸದಸ್ಯರಿಗೆ ವಿಮಾನ ಟಿಕೆಟ್ ಖರೀದಿಸಲು, ಮನೆ ಕೆಲಸದವರಿಗೆ ಸಂಬಳ ನೀಡಲೂ ಸಹ ಬಳಸಿದ್ದಾರೆ ಎಂಬ ವಿಷಯವೂ ಬೆಳಕಿಗೆ ಬಂದಿದ್ದು, ಇವುಗಳಿಗೆ ಸಾಕ್ಷಿ ಸಹ ಲಭ್ಯವಾಗಿದೆ” ಎಂದು ಜಾರಿ ನಿರ್ದೇಶನಾಲಯದ ವರದಿಯನ್ನು ಉಲ್ಲೇಖಿಸಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.