ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಮಹತ್ವಾಕಾಂಕ್ಷಿ ಕಾವೇರಿ ಐದನೇ ಹಂತದ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಳವಳ್ಳಿ ತಾಲ್ಲೂಕಿನ ತೊರೆಕಾಡನಹಳ್ಳಿಯಲ್ಲಿ ಬುಧವಾರ ಲೋಕಾರ್ಪಣೆಗೊಳಿಸಿದರು.
ಜೈಕಾ(ಜಪಾನ್ ಇಂಟರ್ ನ್ಯಾಷನಲ್ ಕೋ ಅಪರೇಶನ್ ಏಜೆನ್ಸಿ) ಸಹಭಾಗಿತ್ವದಲ್ಲಿ 4,336 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಯೋಜನೆ ಇದಾಗಿದೆ. ಲೋಕಾರ್ಪಣೆಗೊಳಿಸಿದ ನೆನಪಿಗಾಗಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಜೊತಗೂಡಿ ಘಟಕದ ಆವರಣದಲ್ಲಿ ಸಸಿ ನೆಟ್ಟರು. ಈ ಸಂದರ್ಭದಲ್ಲಿ ತುಂಬಿದ ಕೊಡಗಳ ನೀರನ್ನು ಮುಖ್ಯಮಂತ್ರಿಗಳು ಕಾವೇರಿ ಮಾತೆಗೆ ಸಮರ್ಪಿಸಿದರು.
ಶಾಸಕರಾದ ನರೇಂದ್ರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಇಂಧನ ಸಚಿವ ಕೆ.ಜೆ.ಜಾರ್ಜ್, ಮಾಜಿ ಸಚಿವರಾದ ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು, ಶಾಸಕರಾದ ಎಸ್.ಆರ್. ವಿಶ್ವನಾಥ್ , ವಿಧಾನಸಭೆ, ವಿಧಾನಪರಿಷತ್ ಶಾಸಕರಾದ ಟಿ.ಎಂ.ನಾಗರಾಜು, ರವಿ, ದಿನೇಶ್ ಗೂಳಿಗೌಡ, ಸುದಾಮ್ ದಾಸ್, ಮಾದೇಗೌಡರು, ನಾಗರಾಜ್ ಯಾದವ್ ಹಾಗೂ ಜೈಕಾ ಪ್ರತಿನಿಧಿಗಳು, ಸಚಿವರುಗಳು,ಶಾಸಕರುಗಳು, ಚುನಾಯಿತ ಪ್ರತಿನಿಧಿಗಳು,ಅಧಿಕಾರಿಗಳು ಸೇರಿದಂತೆ ಅನೇಕರು ಇದ್ದರು.
ಯೋಜನೆಯ ಪಕ್ಷಿ ನೋಟ
ಬೆಳೆಯುತ್ತಿರುವ ಬೆಂಗಳೂರು ನಗರಕ್ಕೆ ಸಮರ್ಪಕ ನೀರು ಸರಬರಾಜು ಹಾಗೂ ಉತ್ತಮ ಕೊಳಚೆ ನೀರು ನಿರ್ವಹಣೆಯ ನಿಟ್ಟಿನಲ್ಲಿ ಹಂತಗಳಲ್ಲಿ ಅನೇಕ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಈ ಪೈಕಿ ಕಾವೇರಿ ಐದನೇ ಹಂತದ ಯೋಜನೆ ಒಂದು.
ಕಾವೇರಿ ನೀರು ಸರಬರಾಜು ಯೋಜನೆಯ 4 ನೇ ಘಟ್ಟ 2 ನೇ ಹಂತವನ್ನು ಪೂರ್ಣಗೊಳಿಸಿದ ನಂತರವೂ ಹೊಸದಾಗಿ ಬಿಬಿಎಂಪಿ ವ್ಯಾಪ್ತಿಗೆ ಸೇರಿಸಲ್ಪಟ್ಟ 110 ಹಳ್ಳಿಗಳಿಗೆ ನೀರು ಪೂರೈಸಲು ಮಂಡಳಿಗೆ ಕಷ್ಟವಾಗುತ್ತಿತ್ತು. ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳಿಗೆ ಸಮರ್ಪಕ ನೀರು ಪೂರೈಕೆ ಮಾಡಲು 2,200 ಎಂ.ಎಲ್.ಡಿ ನೀರಿನ ಅವಶ್ಯಕತೆಯಿದೆ. ಆದರೆ, ಪ್ರಸ್ತುತ ಇರುವ ನಾಲ್ಕೂ ಹಂತಗಳ ಮೂಲಕ ನಮಗೆ ಲಭ್ಯವಾಗುತ್ತಿರುವುದು ಕೇವಲ 1450 ಎಂ.ಎಲ್.ಡಿಗಳಷ್ಟು ಮಾತ್ರ.
ನಗರದ ನೀರಿನ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕಾವೇರಿ 5 ನೇ ಘಟ್ಟವನ್ನು 2 ಹಂತಗಳಲ್ಲಿ ಜಪಾನ್ ಇಂಟರ್‌ನ್ಯಾಷನಲ್ ಕೋ-ಆಪರೇಷನ್ ಏಜೆನ್ಸಿ – ಜೈಕಾ ಆರ್ಥಿಕ ನೆರವಿನಿಂದ 2014 ರಲ್ಲಿ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಮಹತ್ವಾಕಾಂಕ್ಷಿ, ಬೃಹತ್ ಹಾಗೂ ದೇಶದಲ್ಲೆ ಅತಿದೊಡ್ಡ ಯೋಜನೆಯನ್ನು ಅನುಷ್ಠಾನಗೊಳಿಸಲು 4,333 ಕೋಟಿ ರೂಪಾಯಿಗಳ ಯೋಜನಾ ವೆಚ್ಚವನ್ನು ನಿಗದಿಪಡಿಸಲಾಯಿತು. ಇದಕ್ಕೆ ಜಪಾನ್ ಇಂಟರ್ನ್ಯಾಷನಲ್ ಕೋಆಪರೇಷನ್ ಏಜೆನ್ಸಿ (JICA) ನಿಂದ ಹಣಕಾಸು ಬೆಂಬಲ ದೊರೆತಿದೆ.
ಕಾವೇರಿ 5ನೇ ಹಂತದ ಯೋಜನೆಯಿಂದ ಯಶವಂತಪುರ, ಬೆಂಗಳೂರು ದಕ್ಷಿಣ, ಬ್ಯಾಟರಾಯನಪುರ, ಟಿ.ದಾಸರಹಳ್ಳಿ, ಮಹದೇವಪುರ, ಯಲಹಂಕ, ರಾಜರಾಜೇಶ್ವರಿನಗರ ಹಾಗೂ ಬೊಮ್ಮನಹಳ್ಳಿ ವಲಯದ ವಿವಿಧ ಹಳ್ಳಿಗಳ ಮನೆ ಮನೆಗೂ ಸೇರಿದಂತೆ ಬೆಂಗಳೂರಿನ ಮೂಲೆ ಮೂಲೆಗೂ ಕಾವೇರಿ ನೀರು ಸರಬರಾಜು ಆಗಲಿದೆ.
ಇದುವರೆಗೆ ಪ್ರತಿ ತಿಂಗಳು ಬೆಂಗಳೂರಿನಲ್ಲಿ 1.58 ಟಿಎಂಸಿ ಕುಡಿಯುವ ನೀರು ಪೂರೈಕೆಯಾಗುತ್ತಿತ್ತು. ಕಾವೇರಿ 5ನೇ ಹಂತದ ಯೋಜನೆ ಅನುಷ್ಠಾನ ಬಳಿಕ ಮಾಸಿಕವಾಗಿ 2.4 ಟಿಎಂಸಿ ನೀರು ಸರಬರಾಜು ಆಗಲಿದೆ.