ತುಮಕೂರಿನ ಝೆನ್ ಟೀಮ್ ಗೆ 20 ವರ್ಷ ತುಂಬಿದ ಹಿನ್ನೆಲೆಯಲ್ಲಿ ಇದೇ ತಿಂಗಳ 18 ಮತ್ತು 19 ರಂದು ಎಂ.ಜಿ. ರಸ್ತೆಯ ಬಾಲಭವನದಲ್ಲಿ ನೀನಾಸಂ ನಾಟಕೋತ್ಸವವನ್ನು ಆಯೋಜಿಸಲಾಗಿದೆ.
18 ರಂದು ಶುಕ್ರವಾರ ಸಂಜೆ 6.45 ಕ್ಕೆ ಮಾಲತೀ ಮಾಧವ ನಾಟಕ ಪ್ರದರ್ಶನವಿದೆ. ಸಂಸ್ಕೃತ ನಾಟಕಕಾರ ಭವಭೂತಿಯ ಕೃತಿಯನ್ನು ಕೆ.ವಿ. ಅಕ್ಷರ ನಿರ್ದೇಶಿಸಿದ್ದಾರೆ.19 ರಂದು ಶನಿವಾರ ಸಂಜೆ 6.45 ಕ್ಕೆ ಅಂಕದ ಪರದೆ ನಾಟಕ ಪ್ರದರ್ಶನವಿದೆ.
ಅಭಿರಾಮ್ ಭಡ್ಕಮ್ಕರ್ ಅವರು ರಚಿಸಿರುವ ಈ ನಾಟಕವನ್ನು ಜಯಂತ ಕಾಯ್ಕಿಣಿ ಅನುವಾದಿಸಿದ್ದು ನಿರ್ದೇಶನವನ್ನು ವಿದ್ಯಾನಿಧಿ ವನಾರಸೆ ಮಾಡಿದ್ದಾರೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸಹಕಾರದಲ್ಲಿ ನಡೆಯುವ ನಾಟಕೋತ್ಸವಕ್ಕೆ ಉಚಿತ ಪ್ರವೇಶವಿದೆ ಎಂದು ಝೆನ್ ಟೀಮ್ ನ ಉಗಮ ಶ್ರೀನಿವಾಸ್ ತಿಳಿಸಿದ್ದಾರೆ.18 ರಂದು ನಾಟಕೋತ್ಸವದ ಉದ್ಘಾಟನೆಯನ್ನು ಕೈಗಾರಿಕೋದ್ಯಮಿ ಎಚ್.ಜಿ. ಚಂದ್ರಶೇಖರ್ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಯಾಗಿ ಚೇತನಕುಮಾರ್ ಎಂ.ಎನ್.ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತುಮಕೂರು ಹಾಗೂ ಸಮಾಜ ಸೇವಕ ಮತ್ತು ಕಾಂಗ್ರೆಸ್ ಮುಖಂಡ ಎಸ್.ಬಿ. ಶ್ರೀನಿವಾಸ್ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ವಹಿಸಲಿದ್ದಾರೆ.

ಅಕ್ಟೋಬರ್ 19 ಶನಿವಾರ ಸಮಾರೋಪ ಸಮಾರಂಭ ನಡೆಯಲಿದ್ದು ಮಹಾನಗರ ಪಾಲಿಕೆ ಆಯುಕ್ತರಾದ ಅಶ್ವಿಜಾ ಅವರು ಚಾಲನೆ ನೀಡಲಿದ್ದಾರೆ. ಸಮಾರೋಪ ಭಾಷಣ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀದೇವಿ ಶಿಕ್ಷಣ ಸಂಸ್ಥೆಯ ಡಾ. ಎಂ.ಆರ್. ಹುಲಿನಾಯ್ಕರ್ ವಹಿಸಲಿದ್ದಾರೆ
ಮಾಲತೀ ಮಾಧವ ನಾಟಕ ಪರಿಚಯ: ಕ್ರಿ.ಶ 8ನೇ ಶತಮಾನದ ಪ್ರಸಿದ್ಧ ಸಂಸ್ಕೃತ ನಾಟಕಕಾರ ಭವಭೂತಿಯ ಈ ಕೃತಿ ಮೇಲುನೋಟಕ್ಕೆ ಸರಳ- ಮಾಲತಿ ಮತ್ತು ಮಾಧವ ಎಂಬ ಪ್ರೇಮಿಗಳು ತಮ್ಮ ಮದುವೆಗೆ ಇರುವ ತೊಡಕುಗಳನ್ನೆಲ್ಲಾ ದಾಟಿ ಸಂಲಗ್ನಗೊಳ್ಳುವುದು ಜೊತೆಗೆ ಇನ್ನೆರೆಡು ಜೋಡಿ ಮದುವೆಗಳು ಸಂಭವಿಸುವುದು ಈ ಕಥೆಯ ತಿರುಳು, ಇಂತಹ ಅಸಂಭವನೀಯ ಸಂವಿಧಾನವನ್ನು ಹೆಣೆಯಲಿಕ್ಕೆ ಇಲ್ಲಿ ಕಾಮಂದಕಿ ಎಂಬ ಬೌದ್ಧ ಸನ್ಯಾಸಿನಿ ಮತ್ತವಳ ಶಿಷ್ಯರು ಕಾರಣರಾಗುತ್ತಾರೆ. ವೈರಾಗ್ಯಕ್ಕೆ ಮುಖ ಮಾಡಿರುವ ಸನ್ಯಾಸಿಗಳೇ ಸಂಸಾರಗಳನ್ನು ಕಟ್ಟುವ ಸೂತ್ರಧಾರರಾಗುವುದು ಈ ನಾಟಕದ ಮರ್ಮ.
ಅಂಕದ ಪರದೆ : 19 ರಂದು ತಮ್ಮ ಜೀವನದ ಕಡೆಯ ವರ್ಷಗಳನ್ನು ಕಳೆಯುತ್ತಿರುವ ಹಿರಿಯ ನಾಗರಿಕ ಒಂದು ಆಶ್ರಯ ಧಾಮದೊಳಗೆ ಈ ನಾಟಕ ಸಂಭವಿಸುತ್ತದೆ. ಆದರೆ ಇಲ್ಲಿರುವ ವ್ಯಕ್ತಿಗಳು ಬರೀದೆ ಬದುಕಿನ ಸಂಧ್ಯಾ ಕಾಲವನ್ನು ನೋವಿನಿಂದ ನೂಕುತ್ತಿರುವ ಹತಾಷರಲ್ಲ. ಹಲವು ಬಗೆಯಲ್ಲಿ ಕ್ರಿಯಾಶೀಲರು.ವೃದ್ದಾಪ್ಯವೆಂಬ ವಾಸ್ತವವು ರಂಗಭೂಮಿಯ ಭೂಮಿಕೆಗಳಾಗಿ ಪರಿವರ್ತನೆಯಾಗುವ ವಿಸ್ಮಯದ ದಿಕ್ಕಿಗೆ ನಾಟಕ ಮುನ್ನಡೆಯುತ್ತದೆ.
