ಆಪಾದಿಕ ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧನಕ್ಕೊಳಕಾಗಿ, ಜೈಲಿನಲ್ಲಿದ್ದಾಗ ನನಗೆ ಇನ್ಸುಲಿನ್ ಕೊಡದಿದ್ದರೆ ಜೈಲಿನಲ್ಲೇ ಸಾಯುತ್ತಿದ್ದೆ. ಜೈಲಿನಲ್ಲಿ ಇನ್ಸುಲಿನ್ ಕೊಡಲು ನಿರಾಕರಿಸಿ, ನನ್ನನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು ಎಂದು ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ಲೋಕಸಭಾ ಚುನಾವಣೆಯ ವಸ್ತಿಲಿನಲ್ಲಿ, ಮಾರ್ಚ್ 21ರಂದು ಬಂಧನಕ್ಕೊಳಗಾಗಿದ್ದ ಕೇಜ್ರಿವಾಲ್, ಆರು ತಿಂಗಳ ಕಾಲ ಸೆರೆವಾಸ ಅನುಭವಿಸಿ ಸೆಪ್ಟೆಂಬರ್ 13ರಂದು ಜಾಮೀನು ಪಡೆದು ಹೊರಬಂದಿದ್ದಾರೆ. ಜೈಲಿನಲ್ಲಿದ್ದಾಗ ತಮಗಾದ ಕಹಿ ಅನುಭವಗಳ ಬಗ್ಗೆ ಅವರು ಹೇಳಿಕೊಂಡಿದ್ದಾರ. ಅದರಲ್ಲಿ, ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವ ತಮಗೆ ಆರಂಭದಲ್ಲಿ ಇನ್ಸುಲಿನ್ ಕೊಡಲು ನಿಕಾರಿಸಲಾಗಿತ್ತು ಎಂದು ಆರೋಪಿಸಿದ್ದಾರೆ.
“ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗಿರುವ ಕಾರಣ ದಿನಕ್ಕೆ ನಾಲ್ಕು ಇನ್ಸುಲಿನ್ಗಳನ್ನು ನಾನು ತೆಗೆದುಕೊಳ್ಳಬೇಕು. ಇನ್ಸುಲಿನ್ ಕೊಡದಿದ್ದರೆ ಕಿಡ್ನಿಗಳು ಹಾಳಾಗುತ್ತಿದ್ದವು. ಮಾತ್ರವಲ್ಲದೆ, ಇನ್ಸುಲಿನ್ ಕೊರತೆಯ ಸಾವನ್ನಪ್ಪುವ ಸಾದ್ಯತೆಯೂ ಹೆಚ್ಚಾಗಿತ್ತು” ಎಂದು ಕೇಜ್ರಿವಾಲ್ ಹೇಳಿದ್ದಾರೆ.
“ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ಕಳೆದ 10 ವರ್ಷಗಳಲ್ಲಿ ನಮ್ಮ ಸರ್ಕಾರ ಹಲವಾರು ಅಭಿವೃದ್ದಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ನಾವು ಮಾಡುತ್ತಿರುವ ಅಭಿವೃದ್ಧಿ ಕೆಲಸಗಳನ್ನು ತಡೆಯಲು ನಮ್ಮನ್ನು ಬಿಜೆಪಿ ಜೈಲಿಗೆ ಕಳಿಸಿತ್ತು. ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ದೆಹಲಿಯಲ್ಲಿ ಜನರಿಗಾಗಿ ಕೆಲಸ ಮಾಡಿದ ಕಾರಣಕ್ಕೆ ನಮ್ಮನ್ನು ಜೈಲಿಗಟ್ಟಲಾಗಿತ್ತು. ಜನರ ಆಶೀರ್ವಾದದಿಂದ ಬದುಕಿ ಹೊರಬಂದಿದ್ದೇನೆ” ಎಂದು ಅವರು ಹೇಳಿದ್ದಾರೆ.
ಆಪಾದಿತ ಅಬಕಾರಿ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಕೇಜ್ರಿವಾಲ್ ಅವರನ್ನು ಮಾರ್ಚ್ 21ರಂದು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಅವರು ಜಾಮೀನಿಗಾಗಿ ರೂಸ್ ಅವೆನ್ಯೂ ನ್ಯಾಯಾಲಯ ಮತ್ತು ದೆಹಲಿ ಹೈಕೋರ್ಟ್‌ಗೆ ಹಲವಾರು ಅರ್ಜಿಗಳನ್ನು ಸಲ್ಲಿಸಿದ್ದರು. ಆದರೆ, ನ್ಯಾಯಾಲಯಗಳು ಜಾಮೀನು ನೀಡಲು ನಿರಾಕರಿಸಿದ್ದವು. ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಚುನಾವಣೆಯ ಸಮಯದಲ್ಲೇ ಕೇಜ್ರಿವಾಲ್ ಬಂಧನ ಯಾಕೆ ಎಂದು ಪ್ರಶ್ನಿಸಿದ್ದ ಸುಪ್ರೀಂ ಕೋರ್ಟ್, ಮೇ 10 ರಂದು ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು. ಚುನಾವಣಾ ಪ್ರಚಾರದಲ್ಲಿ ಕೇಜ್ರಿವಾಲ್ ಭಾಗಿಯಾಗಲು ಅವಕಾಶ ನೀಡಿತ್ತು. ಅದಾದ ಬಳಿಕ, ಜೂನ್ 2ರಂದು ಕೇಜ್ರಿವಾಲ್ ಮತ್ತೆ ಜೈಲು ಸೇರಿಸಿದ್ದರು. ಅವರಿಗೆ ಜುಲೈನಲ್ಲಿ ಜಾಮೀನು ನೀಡಲಾಗಿತ್ತು.
ಆದರೆ, ಇ.ಡಿ ದಾಖಲಿಸಿದ್ದ ಪ್ರಕರಣದಲ್ಲಿ ಕೇಜ್ರಿವಾಲ್‌ಗೆ ಜಾಮೀನು ದೊರೆಯುತ್ತಿದ್ದಂತೆ, ಅವರನ್ನು ಸಿಬಿಐ ಬಂಧಿಸಿತ್ತು. ಹೀಗಾಗಿ, ಜಾಮೀನು ದೊರೆತರೂ ಕೇಜ್ರಿವಾಲ್ ಜೈಲಿನಿಂದ ಬಿಡುಗಡೆಯಾಗಲು ಸಾಧ್ಯವಾಗಿರಲಿಲ್ಲ. ಇನ್ನು, ಸಿಬಿಐ ದಾಖಲಿಸಿದ್ದ ಪ್ರಕರಣದಲ್ಲಿಯೂ ಸೆಪ್ಟೆಂಬರ್ 13ರಂದು ಸುಪ್ರೀಂ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಅಲ್ಲದೆ, ಸಿಬಿಐ ಕೇಂದ್ರ ಸರ್ಕಾರದ ‘ಪಂಜರದ ಗಿಳಿ’ಯಂತೆ ಕೆಲಸ ಮಾಡುತ್ತಿದೆ ಎಂದು ಛೀಮಾರಿಯನ್ನೂ ಹಾಕಿತ್ತು.
ಜಾಮೀನು ಪಡೆದು ಹೊರಬಂದ ಕೇಜ್ರಿವಾಲ್ ಸೆಪ್ಟೆಂಬರ್ 17ರಂದು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ತಮಗೆ ನ್ಯಾಯಾಲಯದಲ್ಲಿ ನ್ಯಾಯ ಮತ್ತು ತೀರ್ಪು ಸಿಕ್ಕಿದೆ. ಜನರಿಂದ ತೀರ್ಪು ಬೇಕು. ಹೀಗಾಗಿ, ಮುಂದಿನ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಜನರು ತಮ್ಮ ಪರವಾಗಿದ್ದೇವೆಂದು ತೀರ್ಪು ನೀಡುವವರೆಗೆ ನಾನು ಅಧಿಕಾರದಲ್ಲಿರುವುದಿಲ್ಲವೆಂದು ಕೇಜ್ರಿವಾಲ್ ಹೇಳಿದ್ದಾರೆ.