ತಮ್ಮ ಖಾಸಗಿ ಸಮಯವನ್ನು ವಿಡಿಯೋ ಮಾಡಿಟ್ಟುಕೊಂಡಿದ್ದ ಸರ್ಕಾರಿ ಅಧಿಕಾರಿಯೊಬ್ಬ ತನ್ನ ಪತ್ನಿಗೆ ನಿರಂತರವಾಗಿ ಬ್ಲ್ಯಾಕ್‌ಮೇಲ್ ಮಾಡಿರುವ ಪ್ರಕರಣ ರಾಯಚೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಮಾನ್ವಿ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ಸರ್ಕಾರಿ ಅಧಿಕಾರಿಯಾಗಿರುವ ತನ್ನ ಪತಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
ಇಂಧನ ಇಲಾಖೆಯಲ್ಲಿ ಮೇಲ್ವಿಚಾರಕ ಅಧಿಕಾರಿ ಕಾರ್ಯ ನಿರ್ವಹಿಸುತ್ತಿರುವ ಗುರುರಾಜ್ ಎಂಬಾತನ ವಿರುದ್ಧ ಆತನ ಪತ್ನಿ ದೂರು ದಾಖಲಿಸಿದ್ದಾರೆ. “ಆತ ನನಗೆ ಗೊತ್ತಿಲ್ಲದಂತೆ ನಮ್ಮಿಬ್ಬರ ಖಾಸಗಿ ಕ್ಷಣಗಳನ್ನು ವಿಡಿಯೋ ಮಾಡಿಕೊಟ್ಟುಕೊಂಡಿದ್ದಾನೆ. ತನ್ನ ವಿರುದ್ಧ ಮಾತನಾಡಿದರೆ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ” ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.
ಮಹಿಳೆಗೆ ಆರೋಪಿ ಗುರುರಾಜ್ ಮ್ಯಾಟ್ರಿಮೋನಿಯಲ್ಲಿ ಪರಿಚಿತನಾಗಿದ್ದ. ಸಭ್ಯನಂತೆ ನಡೆದುಕೊಳ್ಳುತ್ತಿದ್ದ. ಆತನನ್ನು ನಂಬಿದ ಮಹಿಳೆ ಇತ್ತೀಚೆಗೆ ಆತನೊಂದಿಗೆ ವಿವಾಹವಾಗಿದ್ದರು. ಆದರೆ, ವಿವಾಹವಾದ ಬಳಿಕ ಆತನ ವಿಕೃತಿ ಬಗ್ಗೆ ಮಹಿಳೆಗೆ ಗೊತ್ತಾಗಿದೆ. ಆತ ತಮ್ಮ ಖಾಸಗಿ ಕ್ಷಣಗಳ ವಿಡಿಯೋವನ್ನು ತನ್ನ ಕಾರು ಚಾಲಕನೂ ಸೇರಿದಂತೆ ಹಲವರಿಗೆ ತೋರಿಸಿದ್ದಾನೆ ಎಂದೂ ಮಹಿಳೆ ಆರೋಪಿಸಿದ್ದಾರೆ.
ಮಾತ್ರವಲ್ಲದೆ, ಹಲವಾರು ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಯುವತಿಯರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶಗಳನ್ನು ಕಳಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.