ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಮಹಿಳೆ, ಪಾತ್ರೆಯಲ್ಲಿ ಮೂತ್ರ ಮಾಡಿ, ಆಹಾರಕ್ಕೆ ಬೆರೆಸುತ್ತಿದ್ದ ಪ್ರಕರಣ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಬೆಳಕಿಗೆ ಬಂದಿದೆ.
ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಈ ಪ್ರಕರಣಕ್ಕೆ ಕೆಲ ಮಾಧ್ಯಮಗಳು ಕೋಮು ಬಣ್ಣ ಬಳಿದಿದ್ದು, ಆಕೆ ಮುಸ್ಲಿಂ ಎಂದು ಬಿಂಬಿಸಿವೆ. ಇದೀಗ, ಆಕೆ ಮುಸ್ಲಿಂ ಅಲ್ಲವೆಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಮಹಿಳೆ ಉದ್ಯಮಿಯ ಮನೆಯಲ್ಲಿ ಕೆಲಸ ಮಾಡಲು ಆರಂಭಿಸಿದ ಬಳಿಕ, ಉದ್ಯಮಿಯ ಇಡೀ ಕುಟುಂಬವು ಯಕೃತ್ತಿಗೆ ಸಂಬಂಧಿಸಿದ ಕಾಯಿಲೆಗೆ ತುತ್ತಾಗಿದೆ. ಏನೋ ತಪ್ಪಾಗುತ್ತಿದೆ ಎಂದು ಅನುಮಾನಿಸಿದ್ದ ಕುಟುಂಬವು ಅಡುಗೆ ಮನೆಗೆ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದು, ಬಳಿಕ ಕೆಲಸದಾಕೆಯ ಕೃತ್ಯ ಬೆಳಕಿಗೆ ಬಂದಿದೆ.
ಸಂತ್ರಸ್ತ ಕುಟುಂಬವು ಗಾಜಿಯಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿ ಮಹಿಳೆ ರೀನಾಳನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮಹಿಳೆ ಹಲವು ವರ್ಷಗಳಿಂದ ಈ ಕೃತ್ಯ ಎಸಗಿದ್ದಾಳೆ ಎಂದು ಕುಟುಂಬವು ಆರೋಪಿಸಿದೆ.
”ರಿಯಲ್ ಎಸ್ಟೇಟ್ ಉದ್ಯಮಿಯು ಕುಟುಂಬವು ಕ್ರಾಸಿಂಗ್ ರಿಪಬ್ಲಿಕ್ ಪ್ರದೇಶದ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದೆ. ಅವರ ಮನೆಯಲ್ಲಿ ಗಾಜಿಯಾಬಾದ್‌ನ ಶಾಂತಿನಗರ ನಿವಾಸಿ ರೀನಾ ಸುಮಾರು 8 ವರ್ಷಗಳಿಂದ ಕೆಲಸ ಮಾಡುತ್ತಿದ್ದಳು. ಆಕೆ ಉದ್ಯಮಿಯ ಮನೆಯಲ್ಲಿ ಅಡುಗೆ ಮಾಡುವ, ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದಳು” ಎಂದು ಪೊಲೀಸರು ತಿಳಿಸಿದ್ದಾರೆ.
ದೂರುದಾರರ ಪ್ರಕಾರ, ಕೆಲವು ತಿಂಗಳುಗಳಿಂದ ಅವರ ಕುಟುಂಬದ ಸದಸ್ಯರು ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದರು. ಆರಂಭದಲ್ಲಿ ಸೋಂಕು ತಗುಲಿದೆ ಎಂದು ಭಾವಿಸಿ ವೈದ್ಯರನ್ನು ಸಂಪರ್ಕಿಸಿದ್ದರು. ಆದರೆ, ಶಾಶ್ವತ ಪರಿಹಾರ ದೊರೆತಿರಲಿಲ್ಲ. ಒಬ್ಬರ ನಂತರ ಮತ್ತೊಬ್ಬರಂತೆ ಇಡೀ ಕುಟುಂಬವೇ ಯಕೃತ್ತಿನ ಕಾಯಿಲೆಗೆ ತುತ್ತಾದಾಗ, ಕುಟುಂಬವು ಏನೋ ಅಚಾತುರ್ಯ ನಡೆಯುತ್ತಿದೆ ಎಂದು ಅನುಮಾನಿಸಿದೆ. ಅಡುಗೆ ಕೋಣೆಗೆ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದೆ. ಬಳಿಕ, ಆರೋಪಿ ರೀನಾ ಪಾತ್ರೆಯಲ್ಲಿ ಮೂತ್ರ ಮಾಡಿ, ಅದರಲ್ಲಿ ಗೋಧಿ ಹಿಟ್ಟು ಕಲಸಿ ಚಪಾತಿ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಆರೋಪಿ ರೀನಾಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಆಕೆ ಯಾವ ಕಾರಣಕ್ಕೆ ಇಂತಹ ಕೃತ್ಯ ಎಸಗುತ್ತಿದ್ದಳು ಮತ್ತು ಎಷ್ಟು ದಿನಗಳಿಂದ ಈ ಕೃತ್ಯ ಎಸಗಿದ್ದಾಳೆ ಎಂಬ ಬಗ್ಗೆ ಇನ್ನೂ ಬಾಯಿಬಿಟ್ಟಿಲ್ಲ.
ಇನ್ನು, ಈ ಪ್ರಕರಣಕ್ಕೆ ಕೆಲ ಮಾಧ್ಯಮಗಳು ಕೋಮು ಬಣ್ಣ ಬಳಿಯಲು ಯತ್ನಿಸಿವೆ. ಆರೋಪಿ ರೀನಾ ಹಿಂದು ಮಹಿಳೆಯೇ ಆಗಿದ್ದರೂ, ಆಕೆಯನ್ನು ಮುಸ್ಲಿಂ ಎಂದು ಬಿಂಬಿಸಿವೆ. ಆಕೆ ತಲೆಗೆ ಬಟ್ಟೆ ಸುತ್ತಿಕೊಂಡಿರುವ ಕಾರಣ, ಆಕೆ ಹಿಜಾಬ್ ಧರಿಸಿದ್ಧಾಳೆ. ಆಕೆ ಮುಸ್ಲಿಂ ಎಂದು ಮಾಧ್ಯಮಗಳು ವರದಿ ಮಾಡಿವೆ. ಆ ಮೂಲಕ ಪ್ರಕರಣಕ್ಕೆ ಕೋಮು ಆಯಾಮ ನೀಡಿವೆ. ಕೋಮು ದ್ವೇಷ ಪ್ರಚೋದಿಸಲು ಯತ್ನಿಸಿವೆ. ಆದರೆ, ಆಕೆ ಮುಸ್ಲಿಂ ಅಲ್ಲ, ಹಿಂದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ದೇಶದ ಸುದ್ದಿ ಮಾಧ್ಯಮಗಳ ಮಾಲೀಕರು ಮತ್ತು ಪತ್ರಕರ್ತರು ಶೇ. 80 ಭಾಗ ಹಿಂದೂಗಳು. ಅದರಲ್ಲೂ ಈಗ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೇರಿದ ನಂತರ, ಅವರಲ್ಲಿ ಹೆಚ್ಚಿನವರು ಗೋದಿ ಮೀಡಿಯಾ ಆಗಿ ಪರಿವರ್ತನೆ ಹೊಂದಿದ್ದಾರೆ. ಹಾಗಾಗಿ ಅವರು ಪ್ರತಿಯೊಂದು ಸುದ್ದಿಯಲ್ಲೂ ಮುಸ್ಲಿಂ ಹುಡುಕುತ್ತಾರೆ. ಸಿಗದಿದ್ದರೆ ಅದನ್ನೇ ತಿರುಚುತ್ತಾರೆ. ಅಂಥದ್ದೇ ಒಂದು ಉತ್ತರ ಪ್ರದೇಶದ ರೀನಾ ಕೇಸ್. ಸದ್ಯ ಸೋಷಿಯಲ್ ಮೀಡಿಯಾಗಳ ಮೂಲಕ ಸತ್ಯ ಹೊರಬಂದಿದೆ. ಪೊಲೀಸರೂ ಕ್ರಮ ಕೈಗೊಂಡಿದ್ದಾರೆ.