ಯುಬಿಡಿಟಿ ಉಳಿಸಲು ಹಾಗೂ ಶೇ.50ರಷ್ಟು ಪೇಮೆಂಟ್ ಕೋಟಾ ರದ್ದುಗೊಳಿಸುವಂತೆ ಆಗ್ರಹಿಸಿ ಎಐಡಿಎಸ್ಒ ಮೈಸೂರಿನ ಹಳೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ನಿತಿನ್ ಮಾತನಾಡಿ, “ಕಳೆದ ಒಂದು ತಿಂಗಳಿನಿಂದ, ದಾವಣಗೆರೆಯ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಕಾಲೇಜನ್ನು ಉಳಿಸಿಕೊಳ್ಳಲು ಹೋರಾಟ ನಡೆಸುವಲ್ಲಿ ನಿರತರಾಗಿದ್ದಾರೆ. ರಾಜ್ಯದ ಅತ್ಯಂತ ಹಳೆಯ ಕಾಲೇಜುಗಳಲ್ಲಿ ಒಂದಾದ ಹಾಗೂ ರಾಜ್ಯದ ಪ್ರಥಮ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಾದ ಯುಬಿಡಿಟಿಯಲ್ಲಿ ಶೇ.50ರಷ್ಟು ಪ್ರಮಾಣದ ಸೀಟುಗಳಲ್ಲಿ ಶುಲ್ಕ ಏರಿಕೆ ಮಾಡಿ, ವಿದ್ಯಾರ್ಥಿಗಳಿಂದ ₹97,000 ಪಡೆಯಲು ನಿರ್ಧರಿಸಲಾಗಿದೆ” ಎಂದರು.
“ಸರ್ಕಾರದ ದೇಣಿಗೆಯಿಂದ ನಡೆಯುವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಈ ಪ್ರಮಾಣದ ಶುಲ್ಕ ಪಡೆಯುವ, ನಿರ್ವಹಣಾ ಕೋಟಾದ ಸೀಟುಗಳ ಸಂಖ್ಯೆ ಇಲ್ಲ. ಸರ್ಕಾರಿ ಎಂಜಿನಿಯರಿಂಗ್ ಶುಲ್ಕವೇ ₹43,000ದಷ್ಟಿದ್ದು, ಈಗಾಗಲೇ ಬಡ ವಿದ್ಯಾರ್ಥಿಗಳಿಗೆ ಇದನ್ನು ಭರಿಸಲು ಕಷ್ಟಸಾಧ್ಯವಾಗಿದೆ. ಅಂತಹ ಸಂದರ್ಭದಲ್ಲಿ, ಸರ್ಕಾರಿ ಕಾಲೇಜೊಂದರಲ್ಲಿ ₹97,000 ಶುಲ್ಕ ಪಡೆಯುವುದು ವಿದ್ಯಾರ್ಥಿಗಳ ಮೇಲೆ ಬರೆ ಎಳೆದಂತಾಗಿದೆ” ಎಂದರು.
“ಬೆಂಗಳೂರಿನ ಪ್ರತಿಷ್ಠಿತ ಯುವಿಸಿಇ ಕಾಲೇಜು ಸೇರಿದಂತೆ ರಾಜ್ಯದ ಹಲವು ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕ ಏರಿಸುವ ಹಾಗೂ ಕಾಲೇಜು ನಿರ್ವಹಣೆಯ ಹಣವನ್ನು ವಿದ್ಯಾರ್ಥಿಗಳ ಶುಲ್ಕ ಪಡೆಯುವ ಪ್ರಯತ್ನಗಳು ನಡೆಯುತ್ತಿವೆ. ಇದು ಸಾರ್ವಜನಿಕ ಶಿಕ್ಷಣದ ಮೂಲ ಉದ್ದೇಶಕ್ಕೆ ವಿರುದ್ಧವಾದ ನಡೆಯಾಗಿದೆ” ಎಂದು ಕಿಡಿಕಾರಿದರು.
ಕಾರ್ಯದರ್ಶಿ ಸ್ವಾತಿ ಮಾತನಾಡಿ, “ಸರ್ಕಾರ, ರಾಜ್ಯದ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಹಾಗೂ ಜನರನ್ನೊಳಗೊಂಡಂತೆ, ರಾಷ್ಟ್ರೀಯ ಶಿಕ್ಷಣ ನೀತಿ-2020 ವಿರೋಧಿಸಿ ನಡೆಸಿದ “ಸಾರ್ವಜನಿಕ ಶಿಕ್ಷಣ ಉಳಿಸಿ” ಎಂಬ ಹೋರಾಟಕ್ಕೆ ಸ್ಪಂದಿಸಿ ರಾಜ್ಯದಲ್ಲಿ ಎನ್‌ಇಪಿ-2020 ಹಿಂಪಡೆದು ವಿದ್ಯಾರ್ಥಿಗಳ ಪರವಾದ ನಿಲುವನ್ನು ತಾಳಿದ್ದೀರಿ. ದೇಶದಲ್ಲಿಯೇ, ಶಿಕ್ಷಣ ವಿರೋಧಿ ಹಾಗೂ ಬಡಮಕ್ಕಳ ಕೈಯಿಂದ ಉನ್ನತ ಶಿಕ್ಷಣ ಕಸಿಯುವ ಎನ್‌ಇಪಿ-2020ನ್ನು ಹಿಂಪಡೆದ ಏಕೈಕ ರಾಜ್ಯ ಕರ್ನಾಟಕ” ಎಂದರು.
“ಇದೀಗ ಎನ್‌ಇಪಿ-2020ರ ಭಾಗವೇ ಆಗಿರುವ, ಸರ್ಕಾರಿ ಶಿಕ್ಷಣ ಸಂಸ್ಥೆಗಳ ಶುಲ್ಕ ಏರಿಕೆ, ಅನುದಾನ ಕಡಿತ ಹಾಗೂ ವಿದ್ಯಾರ್ಥಿಗಳ ಶುಲ್ಕದಲ್ಲಿ ಕಾಲೇಜು ನಿರ್ವಹಣೆ ಇವುಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತಿರುವುದು ಅತ್ಯಂತ ವಿಷಾದನೀಯ” ಎಂದು ಬೇಸರ ವ್ಯಕ್ತಪಡಿಸಿದರು.
“ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಆತಂಕದಲ್ಲಿದ್ದಾರೆ. ರಾಜ್ಯದ ಹೆಮ್ಮೆಗೆ ಪಾತ್ರವಾದ ಯುಬಿಡಿಟಿಯಲ್ಲಿ ಇನ್ಮುಂದೆ ಬಡಕುಟುಂಬದ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಅಧ್ಯಯನ ನಡೆಸಲು ಸಾಧ್ಯವಾಗುವುದಿಲ್ಲ. ಜತೆಗೆ ರಾಜ್ಯದ ಹಲವು ಎಂಜಿನಿಯರಿಂಗ್ ಕಾಲೇಜು ಹಾಗೂ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳು ಇದೇ ಸ್ಥಿತಿಯನ್ನು ತಲುಪುತ್ತಿರುವುದು ನೋವಿನ ಸಂಗತಿಯಾಗಿದೆ. ಈ ಹಿನ್ನಲೆಯಲ್ಲಿ, ಜನರ ನೋವಿನ ಕೂಗಿಗೆ ಸ್ಪಂದಿಸಿ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಮೇಲಿನ ಪ್ರಹಾರವನ್ನು ತಡೆಗಟ್ಟಲು, ರಾಜ್ಯದ ವಿದ್ಯಾರ್ಥಿ ಸಮುದಾಯದ ಪರವಾಗಿ ಸರ್ಕಾರ ನಿರ್ಧಾರ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಜಾತಿ ಗಣತಿ ವರದಿ ಜಾರಿಗೆ ಶೋಷಿತ ಸಮುದಾಯಗಳ ಒಕ್ಕೂಟ ಆಗ್ರಹ
“ಯುಬಿಡಿಟಿ ಕಾಲೇಜಿನಲ್ಲಿ ಶೇ.50ರಷ್ಟು ಹೆಚ್ಚುವರಿ ಶುಲ್ಕವನ್ನು ಕೈಬಿಡಬೇಕು ಹಾಗೂ ಈ ವರ್ಷ ಪಡೆದಿರುವ ಹೆಚ್ಚುವರಿ ಹಣವನ್ನು ಹಿಂದಿರುಗಿಸಬೇಕು. ಮೈಸೂರು ಜಿಲ್ಲೆಯಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಬೇಕು. ರಾಜ್ಯದ ಎಲ್ಲ ಸರ್ಕಾರಿ ಹಾಗೂ ವಿವಿಯ ಅಡಿಯಲ್ಲಿ ಬರುವ ಎಂಜಿನಿಯರಿಂಗ್ ಕಾಲೇಜುಗಳ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ನೀಡಬೇಕು ಹಾಗೂ ಕಾಲೇಜು ನಿರ್ವಹಣೆಯ ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನು ಸರ್ಕಾರ ವಹಿಸಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಐಡಿಎಸ್ಒ ಮೈಸೂರು ಜಿಲ್ಲಾ ಪದಾಧಿಕಾರಿಗಳಾದ ಚಂದನ, ಹೇಮಾ, ಚಂದ್ರಿಕಾ, ದಿಶಾ, ಅಂಜಲಿ, ಅಭಿಷೇಕ್, ಬೀರಪ್ಪ ಸೇರಿದಂತೆ ಹಲವು ಕಾಲೇಜಿನ ವಿದ್ಯಾರ್ಥಿಗಳು ಇದ್ದರು.