ಜಲಸಂಪನ್ಮೂಲ ಇಲಾಖೆಯಲ್ಲಿ 2013 ರಿಂದ 2024 ರವರಗೆ ನಡೆದಿರುವ ಅಭಿವೃದ್ಧಿ ಕಾಮಗಾರಿಗಳಲ್ಲಿನ ಸಾವಿರಾರು ಕೋಟಿ ರೂಪಾಯಿ ಪಾವತಿಸಿರುವ ಕಳಪೆ ಕಾಮಗಾರಿಗಳ ತನಿಖೆ ನಡೆಸಲು ಪ್ರಾಮಾಣಿಕ ನಿವೃತ್ತ ನ್ಯಾಯ ಮೂರ್ತಿಗಳ ಸಮಿತಿ ರಚನೆ ಮಾಡಿ ವರದಿ ಪಡೆದು ನಂತರ ಎಸ್‌ಐಟಿ ಟೀಮ್ ರಚನೆ ಮಾಡುವಂತೆ ಬಿಜೆಪಿ ಮುಖಂಡ ಜಿ ದೇವರಾಜೇಗೌಡ ಆಗ್ರಹಿಸಿದ್ದಾರೆ.
ಹಾಸನ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಈ ಹಿಂದಿನ ಸರ್ಕಾರದ ಕೆಲ ಸಚಿವರುಗಳು ಸರ್ಕಾರದ ಬೊಕ್ಕಸವನ್ನು ಲೂಟಿ ಮಾಡಿದ್ದಾರೆಂದು ತಮ್ಮ ಸಚಿವ ಸಂಪುಟದ ಸಹದ್ಯೋಗಿಗಳೊಂದಿಗೆ ಕೆಲವು ಮಹತ್ತರವಾದ ತೀರ್ಮಾನಗಳನ್ನು ಕೈಗೊಂಡಿದ್ದೀರ. ಅದೇ ರೀತಿ 2013 ರಿಂದ 2024 ರವರಗೆ ಯಾವುದೇ ಸರ್ಕಾರವಿದ್ದರೂ ಕೂಡ ನಿರ್ಭಯವಾಗಿ ಜಲಸಂಪನ್ಮೂಲ ಇಲಾಖೆಯಲ್ಲಿನ ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ಬರುವ ಹೇಮಾವತಿ ಎಡದಂಡೆ ನಾಲೆ ಹಾಗೂ ಬಲದಂಡೆ ನಾಲೆ ಆಧುನೀಕರಣ ಕಾಮಗಾರಿಯ ಸುಮಾರು ₹2,300 ಕೋಟಿ ಮತ್ತು ಫಂಡ್ ಡೈವರ್ಷನ್ ಮಾಡಿದ್ದಾರೆ” ಎಂದು ಆರೋಪಿಸಿದರು.
“ಜಿಲ್ಲೆಯ ಇತರೆ ಅಭಿವೃದ್ಧಿ ಕಾಮಗಾರಿಯಲ್ಲಿ ಸುಮಾರು ₹5,600 ಕೋಟಿ ಹಾಗೂ ಇದೇ ಇಲಾಖೆಯಲ್ಲಿನ ವಿಶ್ವೇಶ್ವರಯ್ಯ ಜಲ ನಿಗಮದಲ್ಲಿನ ಎತ್ತಿನಹೊಳೆ ಯೋಜನೆಯ ಕಾಮಗಾರಿಯಲ್ಲಿನ ಕೇವಲ ₹8,325.50 ಸರ್ಕಾರದಿಂದ ಅನುಮೋದನೆ ಪಡೆದು ಟೆಂಡರ್ ಕರೆದು ನಂತರ ಆ ಕಾಮಗಾರಿಯ ಮೊತ್ತವನ್ನು ₹26,000 ಕೋಟಿಗೆ ಏರಿಸಿ ಈಗಾಗಲೇ ₹17,000 ಕೋಟಿ ಹಣ ಪಾವತಿಸಿರುವ ಬಗ್ಗೆ ಸ್ವತಃ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೇ ಈ ಯೋಜನೆಯ ಉದ್ಘಾಟನೆಯ ಸಮಯದಲ್ಲಿ ಘೋಷಣೆ ಮಾಡಿದ್ದರು” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಜಾತಿ ಗಣತಿ ವರದಿ ಜಾರಿಗೆ ಶೋಷಿತ ಸಮುದಾಯಗಳ ಒಕ್ಕೂಟ ಆಗ್ರಹ
“₹17,000 ಕೋಟಿ ಕಾಮಗಾರಿಯ ಬಿಲ್ ತನಿಖೆ ಹಾಗೂ ರಾಜ್ಯದ ಉದ್ದಗಲಕ್ಕೂ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಈ 10 ವರ್ಷಗಳಲ್ಲಿ ಕೆಆರ್‌ಡಿಸಿಎಲ್(ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ)ನಿಂದ ಲೆಕ್ಕಕ್ಕೆ ಸಿಗದಷ್ಟು ಕೋಟಿ ರೂ.ಗಳ ಹಣ ವ್ಯಯಮಾಡಿರುವ ಬಗ್ಗೆ ತಮ್ಮ ಸರ್ಕಾರಕ್ಕೆ ಮಾಹಿತಿ ಇದ್ದು, ಆದ ಕಾರಣ ಕಳಂಕರಹಿತ ಮುಖ್ಯಮಂತ್ರಿಗಳಾದ ತಾವು ಮತ್ತು ತಮ್ಮ ಮಂತ್ರಿಮಂಡಲ ಉತ್ತಮ ತೀರ್ಮಾನ ತೆಗೆದುಕೊಂಡು ಒಬ್ಬ ಪ್ರಾಮಾಣಿಕ ನಿವೃತ್ತ ನ್ಯಾಯಮೂರ್ತಿಗಳ ಸಮಿತಿ ರಚನೆ ಮಾಡಿ ಅವರಿಂದ ವರದಿ ಪಡೆದು, ನಂತರ ತಮ್ಮ ಅಧೀನದಲ್ಲಿರುವ ಎಸ್‌ಐಟಿ ತನಿಖಾ ತಂಡ ರಚಿಸಿ ಈ ಕಾಮಗಾರಿಗಳಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಹಣ ಲಪಟಾಯಿಸಿರುವವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು” ಎಂದು ಬಿಜೆಪಿ ಮುಖಂಡ ಒತ್ತಾಯಿಸಿದರು.