ಇಂಡಿಯನ್ ಡೆಂಟಲ್ ಅಸೋಸಿಯೇಷನ್‌ನಿಂದ ₹20 ಲಕ್ಷಕ್ಕೂ ಅಧಿಕ ಅವ್ಯವಹಾರ ನಡೆದಿದೆಯೆಂದು ಆರೋಪ ಮಾಡಿದ್ದು, ಐಡಿಎ ಆಯೋಜನೆ ಮಾಡಿದ್ದ ರಾಜ್ಯಮಟ್ಟದ ಸಭೆಯಲ್ಲಿ ಗಲಾಟೆ ಗದ್ದಲವಾಗಿರುವುದಾಗಿ ತಿಳಿದುಬಂದಿದೆ.
ಕ್ರಿಕೆಟ್ ಟೂರ್ನಮೆಂಟ್ ನಡೆಸುವ ಸಲುವಾಗಿ ಫಾರ್ಮಾ ಕಂಪನಿ ಹಾಗೂ ವೈದ್ಯರುಗಳಿಂದ ಕರ್ನಾಟಕದಾದ್ಯಂತ ದೇಣಿಗೆ ಪಡೆದು ನಂತರ ದೇಣಿಗೆಯ ದುರ್ಬಳಕೆಯಾಗಿರುವ ಕುರಿತು ಆರೋಪ ಕೇಳಿಬರುತ್ತಿದೆ.
ಐಡಿಎ ಸದಸ್ಯರೊಬ್ಬರು ಈದಿನ.ಕಾಮ್‌ನೊಂದಿಗೆ ಮಾತನಾಡಿ, “ಸ್ವತಃ ಐಡಿಎ ವಾಟ್ಸಾಪ್ ಗ್ರೂಪ್‌ನಲ್ಲಿ ಅವ್ಯವಹಾರ ಕುರಿತು ಚರ್ಚೆಯಾಗಿದ್ದು, ದೇಣಿಗೆಯ ಹಣದಲ್ಲಿ ಎಷ್ಟು ಖರ್ಚಾಗಿ ಎಷ್ಟು ಉಳಿದಿದೆ. ಏನಾದರೂ ಸಮಸ್ಯೆಗಳು ಇದ್ದಲಿ ಅಥವಾ ಬೇರೆ ಏನಾದರು ಆಗಿದ್ದಲ್ಲಿ ಮಾಹಿತಿ ನೀಡಿರೆಂದು ಐಡಿಎ ಸದಸ್ಯರು ಮಾಹಿತಿ ಕೇಳಿದಕ್ಕೆ ರಾಜ್ಯಾಧ್ಯಕ್ಷ ಡಾ. ಭರತ್ ಅವರು ನಾವು ಯಾವುದೇ ಮಾಹಿತಿ ನೀಡುವುದಿಲ್ಲವೆಂದು ಖಚಿತವಾಗಿ ಹೇಳಿದ್ದಾರೆ. ಅದರ ಸಲುವಾಗಿ ವೈದ್ಯ ಸದಸ್ಯರುಗಳು, ʼಮಾಹಿತಿ ನೀಡುವುದಿಲ್ಲವೆಂದು ಹೇಳುವುದಕ್ಕೆ ಬರುವುದಿಲ್ಲʼವೆಂದು ಪ್ರಶ್ನೆ ಮಾಡಿದ್ದಕ್ಕೆ ಆ ವೈದ್ಯರುಗಳನ್ನು ನಿಂದಿಸಿ, ಏಕವಚನದಿಂದ ಹಿಯಾಳಿಸಿದ್ದಾರೆ” ಎಂದು ಆರೋಪ ಮಾಡಿದ್ದಾರೆ.
“ಒಬ್ಬ ವೈದ್ಯರನ್ನು ಐಡಿಎ ಸಿಒಸಿ ಸದಸ್ಯತ್ವದಿಂದ ತೆಗೆದುಹಾಕಿದ್ದು, ನಂತರ ಅವರನ್ನು ಸಿಒಸಿ ವಾಟ್ಸಾಪ್ ಗ್ರೂಪ್‌ನಿಂದಲೂ ರಿಮೂವ್ ಮಾಡಿದ್ದಾರೆ. ಅಸೋಸಿಯೇಷನ್ ಅವರು ಬಹಳ ವರ್ಷದಿಂದ ದೇಶಾದ್ಯಂತ ಕ್ರಿಕೆಟ್ ಆಯೋಜನೆ ಮಾಡಿ ನಡೆಸುತ್ತಿದ್ದಾರೆ. ಆದರೆ ಇದಕ್ಕೆ ಫಾರ್ಮಾ ಕಂಪೆನಿಗಳಿಂದ ದೇಣಿಗೆ ಸಂಗ್ರಹಣೆ ಮಾಡಿ ನಡೆಸುತ್ತಾರೆ. ಈ ಬಾರಿ ಇವರುಗಳು ಸಮಿತಿಯಲ್ಲರುವ ವೈದ್ಯರಿಂದಲೇ ಹಣ ಪಡೆಯುತ್ತಿದ್ದು, ಬ್ಯಾಂಕ್ವೆಟ್ ಹಾಲ್‌ಗೆ ಬರುವಾಗ ಊಟಕ್ಕೆ ₹5000 ಹಣ ನೀಡಬೇಕೆಂದು ಸೂಚಿಸಿದ್ದಾರೆ” ಎಂದು ಹೇಳಿದ್ದಾರೆ.
ಐಡಿಎ ಸದಸ್ಯ ವೈದ್ಯರುಗಳಿಗೆ ಒಬ್ಬಬರಿಗೆ ಊಟಕ್ಕೆ ₹5,000 ಅಷ್ಟೊಂದು ಹಣ ಬೇಕಾಗುತ್ತದಾ ಎಂಬ ಪ್ರಶ್ನೆ ಮೂಡಿದೆ.
ಹೆಸರು ಹೇಳಲಿಚ್ಚಿಸದ ವೈದ್ಯರೊಬ್ಬರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ವೈದ್ಯರುಗಳ ಹೆಸರು ಬಳಸಿ ಫಾರ್ಮಾ ಕಂಪೆನಿಯಿಂದ ದೇಣಿಗೆ ಪಡೆದು, ವೈದ್ಯರಿಂದಲೂ ಹಣ ಪಡೆಯುತ್ತಿದ್ದು ರಾಜ್ಯಾದ್ಯಂತ ₹20 ಲಕ್ಷಕ್ಕೂ ಅಧಿಕ ಹಣ ಪಡೆದಿದ್ದು, ಅವ್ಯವಹಾರ ನಡೆಸಲಾಗಿದೆ. ಅಲ್ಲದೆ ವೈದ್ಯರು ನೀವು ನಮಗೆ ಏನಾದದೂ ಕೊಡುಗೆ(ಸ್ಪಾನ್ಸರ್) ನೀಡಿದರೆ ಮಾತ್ರ ನಾವು ನಿಮ್ಮ ಮೆಡಿಸಿನ್‌ಗಳನ್ನು ರೋಗಿಗಳಿಗೆ ಬರೆದುಕೊಡುತ್ತೇವೆಂದು ಫಾರ್ಮಾ ಕಂಪೆನಿಗಳಿಗೆ ತಾಕೀತು ಮಾಡಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.
ವೈದ್ಯರಿಗೆ ಫಾರ್ಮಾ ಕಂಪೆನಿಗಳಿಂದ ದೇಣಿಗೆ ಬೇಕೇ ಹೊರತು ಇಲ್ಲಿಯ ಔಷಧಿ ಗುಣಮಟ್ಟ ಮುಖ್ಯವಾಗಿರುವುದಿಲ್ಲ. ಇವರಲ್ಲಿ ಜಗಳವಾದ ಕಾರಣ ಇದೀಗ ಇಲ್ಲಿರುವ ಸತ್ಯ ಆಚೆ ಬಂದಿದೆ. ಫಾರ್ಮಾ ಕಂಪೆನಿಗಳಿಗೆ ಲಕ್ಷಗಟ್ಟಲೆ ಆದಾಯ ಮಾಡಿಕೊಡಬೇಕೆಂದರೆ ಫಾರ್ಮಾ ಕಂಪನಿಗಳಿಂದ ದೇಣಿಗೆ ಬೇಕೇ ಬೇಕೆಂಬುದು ವೈದ್ಯರಲ್ಲಿ ಸರ್ವೇ ಸಾಮಾನ್ಯವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಿನ.ಕಾಮ್ ಐಡಿಎ ರಾಜ್ಯಾಧ್ಯಕ್ಷ ಡಾ. ಭರತ್ ಅವರನ್ನು ಸಂಪರ್ಕಿಸಿದಾಗ ಮಾತನಾಡಿ, ಮೊದಲಿಗೆ “ನನಗೆ ಅದರ ಕುರಿತು ಏನೂ ಗೊತ್ತಿಲ್ಲ. ಯಾವುದೇ ಮಾಹಿತಿ ಕೂಡ ಇಲ್ಲವೆಂದು ಹೇಳಿದ್ದು, ಬಳಿಕ ಅಸೋಸಿಯೇಷನ್‌ನಲ್ಲಿ ಅದರದ್ದೇ ಆದ ಆಡಿಟ್ ಇರುತ್ತದೆ. ಪಾರದರ್ಶಕತೆ ಮೂಲಕ ಪಾಸ್ ಮಾಡುತ್ತಾರೆ. ನಮ್ಮಲ್ಲಿ ಯಾವುದೇ ರೀತಿ ಸೆಲ್ಫ್ ಡ್ರಾಯಿಂಗ್ ಇರುವುದಿಲ್ಲ. ಡೆಂಟಲ್ ಅಸೋಸಿಯೇಷನ್‌ನ ಬೈಲಾ ಪ್ರಕಾರ ಚೆಕ್ ಮೂಲಕ ಹಣಕಾಸಿನ ವ್ಯವಹಾರ ನಡೆಯಲಿದೆ” ಎಂದು ಉತ್ತರಿಸಿದ್ದಾರೆ.
“ಎಲ್ಲ ವ್ಯವಹಾರವೂ ಕಮಿಟಿಯಲ್ಲಿ ನಿರ್ಧಾರವಾಗತ್ತದೆ. ಸಹಿ ಮಾಡುವ ಅಧಿಕಾರ ಒಬ್ಬರಿಗೇ ಇರುವುದಿಲ್ಲ. 15 ಮಂದಿ ಇರುವ ಒಂದು ಇಸಿ ಕಮಿಟಿ ಇದೆ. ಅದರ ಪ್ರಕಾರ ವ್ಯವಹಾರ ನಡೆಯುತ್ತದೆ. ವೈದ್ಯರೇ ಹಣ ಹಾಕಿಕೊಂಡು ಎಲ್ಲ ಆಯೋಜನೆ ಮಾಡಿದ್ದೇವೆ. ಊಟದ ಖರ್ಚು ನಮ್ಮ ನಮ್ಮ ಹಣದಲ್ಲೇ ಮಾಡುತ್ತೇವೆ. ಯಾವುದೇ ರೀತಿಯ ಅವ್ಯವಹಾರವೂ ನಡೆದಿಲ್ಲ. ಯಾವುದೇ ಗಲಾಟೆಯೂ ನಡೆದಿಲ್ಲ” ಎಂದು ಸತ್ಯದ ತಲೆಯಮೇಲೆ ಹೊಡೆದಂತೆ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಗ್ರೇಟರ್ ರಾಜಾಸೀಟ್ ಅಕ್ರಮ; ಲೋಕಾಯುಕ್ತ ತನಿಖಾಧಿಕಾರಿಯಿಂದ ವಿಚಾರಣೆ
“ಫಾರ್ಮಾ ಕಂಪೆನಿ ಹೆಡ್ ಆಫೀಸ್ ಮುಂಬೈನಲ್ಲಿದ್ದು, ನಮ್ಮ ಡೆಂಟಲ್ ಅಸೋಸಿಯೇಷನ್ ಅದರೊಂದಿಗೆ ಟೈಅಪ್ ಆಗಿದೆ. ಶಿಕ್ಷಣದ ಉದ್ದೇಶದಿಂದ ಫಾರ್ಮಾ ಕಂಪನಿಗಳಿಂದ ಹಣ ಪಡೆಯುತ್ತೇವೆ. ಕಮ್ಯೂನಿಟಿ ಓರಿಯೆಂಟಲ್ ಕಾರ್ಯಕ್ರಮ, ಸಾಮಾಜಿಕ ಕಾರ್ಯಕ್ರಮಗಳಿಗೆ ಹಣ ಪಡೆಯುತ್ತೆವೆ” ಎಂದು ಜಾಣ್ಮೆಯ ಉತ್ತರ ನೀಡಿದರು.
ಐಡಿಎ ಆಂತರಿಕ ಕಚ್ಚಾಟದಿಂದ ಬಹಳಷ್ಟು ವಿಚಾರಗಳು ಹೊರಬಂದಿದ್ದು, ಇದರ ಕುರಿತಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಸತ್ಯಾಸತ್ಯತೆಗಳು ಹೊರಬರಬೇಕಿದೆ.
