ಹವಾಮಾನ ಇಲಾಖೆ ಮುನ್ಸೂಚನೆ ಮೇರೆಗೆ ಅಧಿಕ ಮಳೆ ಬರುವ ಹಿನ್ನಲೆ ಜಿಲ್ಲೆಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ನಿಟ್ಟಿನಲ್ಲಿ ಗುಬ್ಬಿ ತಾಲ್ಲೂಕಿನಲ್ಲಿ ಮಳೆಯ ಆರ್ಭಟಕ್ಕೆ ಸಂಭವಿಸುವ ಅನಾಹುತಗಳಿಗೆ ಸ್ಪಂದಿಸಲು ಹಾಗೂ ಸಾರ್ವಜನಿಕರ ನೆರವಿಗೆ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ ಎಂದು ತಹಶೀಲ್ದಾರ್ ಬಿ.ಆರತಿ ತಿಳಿಸಿದರು.
ಗುಬ್ಬಿ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ತಾಲ್ಲೂಕು ಕಚೇರಿಯಲ್ಲಿ 08131-222234 ಸಂಖ್ಯೆಗೆ ನೆರೆ ಹಾವಳಿ ಬಗ್ಗೆ ಮಾಹಿತಿ ತಿಳಿಸಲು ಮನವಿ ಮಾಡಿದರು.
ಐದು ದಿನಗಳ ಕಾಲ ಮಳೆ ಬರುವ ಮಾಹಿತಿ ಹವಾಮಾನ ಇಲಾಖೆ ರವಾನಿಸಿದೆ. ಇದೇ ಆಧಾರದ ಮೇರೆಗೆ ಜಿಲ್ಲೆಯಲ್ಲಿ ಮಳೆ ಬರುವ ಹಿನ್ನಲೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ತಾಲ್ಲೂಕಿನಲ್ಲಿ ಸಹ ಅಧಿಕ ಮಳೆ ಬರುವ ನಿರೀಕ್ಷೆ ಇದ್ದು ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಶಾಲಾ ಮಕ್ಕಳ ಬಗ್ಗೆ ಪೋಷಕರು ಹಾಗೂ ಶಿಕ್ಷಕ ವರ್ಗ ನಿಗಾ ವಹಿಸಬೇಕಿದೆ. ಶಾಲೆಯ ಸಮೀಪದಲ್ಲೇ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಮಕ್ಕಳು ನೀರಿನ ರಭಸದ ಅರಿವು ಇಲ್ಲದೆ ನೀರಿನತ್ತ ಹೋಗುವ ಕಾರಣ ಹೆಚ್ಚಿನ ಗಮನಹರಿಸಬೇಕಿದೆ. ಈ ಜೊತೆಗೆ ಸಾರ್ವಜನಿಕರು ಅನಾವಶ್ಯಕ ಓಡಾಟ ನಿಲ್ಲಿಸಬೇಕು. ಹಳೇ ಮರದ ಕೆಳಗೆ ಹಾಗೂ ಪಾಳು ಮನೆಗಳ ಬಳಿ ನಿಲ್ಲಬಾರದು. ವಾಹನ ಸಂಚಾರ ಅನಾವಶ್ಯಕ ಮಾಡಬೇಡಿ ಎಂದು ಎಚ್ಚರಿಸಿದ ಅವರು ಎಲ್ಲೇ ಅನಾಹುತ ಸಂಭವಿಸಿದರೇ ತಕ್ಷಣ ತಾಲ್ಲೂಕು ಕಚೇರಿ ಸಹಾಯವಾಣಿಗೆ ತಿಳಿಸಲು ಮನವಿ ಮಾಡಿದರು.