ಚಿಕ್ಕಮಗಳೂರಿನ 5 ಗ್ರಾಮಗಳು ಭೌಗೋಳಿಕವಾಗಿ ಅಪಾಯದಲ್ಲಿವೆ. ಗ್ರಾಮಗಳಲ್ಲಿ ಮತ್ತೆ ಭೂಕುಸಿತವಾಗುವ ಸಾಧ್ಯತೆಗಳು ಹೆಚ್ಚಾಗಿದೆ. ಆ ಗ್ರಾಮಗಳಲ್ಲಿರುವ ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂದು ‘ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ’ ಸೂಚನೆ ನೀಡಿದೆ.
ಜಿಯೋಲಾಜಿಕಲ್ ಸರ್ವೇ ತಂಡವು ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ಸಮೀಕ್ಷಾ ವರದಿ ಮತ್ತು ಶಿಫಾರಸುಗಳನ್ನು ಸಲ್ಲಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗುಡ್ಡೇತೋಟ, ಬಸರಿಕಟ್ಟೆ, ಶೃಂಗೇರಿ ತಾಲೂಕಿನ ಕೆರೆದಂಡೆ, ಕಳಸ ತಾಲೂಕಿನ ಸೋಮನಕಟ್ಟೆ, ಚನ್ನಹಡ್ಲು ಗ್ರಾಮಗಳು ಭೂಕುಸಿತದ ಅಪಾಯವನ್ನು ಎದುರಿಸುತ್ತಿವೆ ಎಂದು ಹೇಳಿದೆ.
2019ರಲ್ಲಿ ಸುರಿದ ಭಾರೀ ಮಳೆಯಿಂದಾಗಿ ಈ ಐದೂ ಗ್ರಾಮಗಳಲ್ಲಿ ಭೂಕುಸಿತವಾಗಿತ್ತು. ಈಗ ಜೋರು ಮಳೆಯಾದರೆ, ಮತ್ತೆ ಭೂಕುಸಿತವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಮುಂದಿನ ಮಳೆಗಾಲ ಆರಂಭವಾಗುವ ಮುನ್ನವೇ ಗ್ರಾಮಗಳ ಜನರನ್ನು ಸ್ಥಳಾಂತರ ಮಾಡಬೇಕು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಸಮೀಕ್ಷಾ ವರದಿಯನ್ನು ಆಧರಿಸಿ ಕ್ರಮ ಕೈಗೊಳ್ಳಲು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮುಂದಾಗಿದ್ದಾರೆ. ತ್ವರಿತ ಕ್ರಮಗಳನ್ನು ತೆಗೆದುಕೊಂಡು ಗ್ರಾಮಗಳ ಜನರನ್ನು ಸ್ಥಳಾಂತರಿಸುವಂತೆ ಆಯಾ ತಾಲೂಕು ಆಡಳಿತಗಳಿಗೆ ಸೂಚನೆ ನೀಡಿದ್ದಾರೆ.
“ಗ್ರಾಮಗಳ ಜನರಿಗೆ ಪುನರ್ವಸತಿ ಹಾಗೂ ಪರ್ಯಾಯ ವ್ಯವಸ್ಥೆ ಒದಗಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅಧಿಕಾರಿಗಳ ಅಭಿಪ್ರಾಯ, ಸಲಹೆಗಳನ್ನು ಪಡೆದು ತೀರ್ಮಾನ ಕೈಗೊಳ್ಳಲಾಗುವುದು. ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ವರದಿಯನ್ನು ಸರ್ಕಾರಕ್ಕೆ ಕಳುಹಿಸಿ ಚರ್ಚೆ ನಡೆಸಲಾಗುವುದು. ಸರ್ಕಾರದ ಸೂಚನೆ ಮೇರೆಗೆ ಕ್ರಮ ಕೈಗೊಳ್ಳಲಾಗುವುದು” ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.