ಮಳೆಯಿಂದ ಬೆಳೆಹಾನಿಯಾಗಿದ್ದು, ರೈತರಿಗೆ ಸೂಕ್ತ ಬೆಳೆಪರಿಹಾರ ನೀಡುವಂತೆ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, “ಹಾವೇರಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಹಾನಿಯಾಗಿದೆ. ಮನೆಗಳಿಗೆ ನೀರು ನುಗ್ಗಿದೆ. ಒಂದು ಮಗು ನೀರಿನಲ್ಲಿ ಕೊಚ್ಚಿಹೋಗಿ ಸಾವಿಗೀಡಾಗಿದೆ. ಎಲ್ಲ ತಾಲೂಕುಗಳಲ್ಲಿ ಬೆಳೆಹಾನಿಯಾಗಿದೆ. ರಾಜ್ಯ ಸರ್ಕಾರ ಕೂಡಲೇ ಬೆಳೆಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ನೀಡಬೇಕು” ಎಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
“ನಿರಂತರ ಮಳೆಯಿಂದಾಗಿ ಮನೆಗಳು ಬಿದ್ದಿದ್ದು, ಮನೆ ಕಳೆದುಕೊಂಡವರಿಗೆ ಕೂಡಲೇ ಪರಿಹಾರದ ಹಣ ಬಿಡುಗಡೆ ಮಾಡಬೇಕು. ಮನೆ ಕಳೆದುಕೊಂಡವರಿಗೆ ಸಾಂತ್ವನ ಕೇಂದ್ರ ತೆರೆದು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಹಲವು ಗ್ರಾಮಗಳ ಸಂಪರ್ಕ ರಸ್ತೆ ಕಳೆದು ಹೋಗಿದೆ. ಕೂಡಲೇ ಸಂಪರ್ಕ ಕಲ್ಪಿಸುವ ಕೆಲಸವನ್ನು ಆರ್‌ಡಿಪಿಆರ್ ಮತ್ತು ಪಿಡಬ್ಲ್ಯೂಡಿ ಇಲಾಖೆಗೆ ಸೂಚನೆ ನೀಡಬೆಕು” ಎಂದು ತಿಳಿಸಿದ್ದಾರೆ.
“ನಾನು ಈಗಾಗಲೇ ಹಾವೇರಿ ಜಿಲ್ಲಾಧಿಕಾರಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಅವರು ಕೂಡಲೇ ಕ್ರಮ ಕೈಗೊಳ್ಳುವ ವಿಶ್ವಾಸವಿದೆ. ಬರಗಾಲ ಸಂದರ್ಭದಲ್ಲಿ ರಾಜ್ಯ ಸರ್ಕಾರ ರೈತರಿಗೆ ಯಾವುದೇ ಪರಿಹಾರ ನೀಡಿಲ್ಲ. ಈಗಲೂ ಅದೇ ರೀತಿ ಮಾಡದೆ ರೈತರಿಗೆ ಕೂಡಲೇ ಬೆಳೆಹಾನಿ ಪರಿಹಾರ ಒದಗಿಸಬೇಕು. ರೈತರ ಹಿತ ಕಾಯಲು ರಾಜ್ಯ ಸರ್ಕಾರ ಕೇಂದ್ರದತ್ತ ನೋಡದೇ ಮೊದಲು ಪರಿಹಾರ ನೀಡಬೇಕು. ನಂತರ ಕೇಂದ್ರ ಸರ್ಕಾರದಿಂದ ಪರಿಹಾರ ಪಡೆಯಲು ಅವಕಾಶವಿದೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗುಬ್ಬಿ | ಅಧಿಕ ಮಳೆ ಹಿನ್ನಲೆ ಸಹಾಯವಾಣಿ ಕೇಂದ್ರ ಪ್ರಾರಂಭ : ತಹಶೀಲ್ದಾರ್ ಬಿ.ಆರತಿ.
“ರಾಜ್ಯದ ಮುಖ್ಯಮಂತ್ರಿಗಳು ಕೂಡಲೇ ಹಾವೇರಿ ಜಿಲ್ಲೆಯ ಪ್ರವಾಹ ಪರಿಸ್ಥಿತಿ ಬಗ್ಗೆ ಗಮನಹರಿಸಿ ಜಿಲ್ಲಾಧಿಕಾರಿ ಬಳಿ ಇರುವ ರಾಷ್ಟ್ರೀಯ ವಿಪತ್ತು ನಿರ್ವಹಣ ನಿಧಿಯಿಂದ ಕೂಡಲೇ ಹಣ ಬಿಡುಗಡೆಗೆ ಆದೇಶ ಮಾಡಬೇಕು. ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಬಾಲಕ ನಿವೇದನ್ ಕುಟುಂಬ ವರ್ಗಕ್ಕೆ ಪರಿಹಾರ ನೀಡಲು ಜಿಲ್ಲಾಧಿಕಾರಿಗೆ ಸೂಚನೆ ನೀಡಬೇಕು. ಈಗಾಲೇ ಮುಂಗಾರು ಕಳೆದುಕೊಂಡ ರೈತರಿಗೆ ಸಮಯ ವ್ಯರ್ಥ ಮಾಡದೇ ಪರಿಹಾರ ಕೈಗೊಳ್ಳಬೇಕು” ಎಂದು ಆಗ್ರಹ ಮಾಡಿದ್ದಾರೆ.