ರಾಜ್ಯ ಸರ್ಕಾರ ಸ್ಥಾಪಿಸಲ್ಪಟ್ಟ ಕರ್ನಾಟಕ ಒನ್ ಸೇವಾ ಕೇಂದ್ರ ಜನಸಾಮಾನ್ಯರಿಗೆ ಅನುಕೂಲವಾಗಲಿದೆ ಎಂದು ಕಡೂರು ಶಾಸಕ ಕೆ ಎಸ್ ಆನಂದ್ ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕು ಕಚೇರಿ ಮುಂಭಾಗದಲ್ಲಿ ನೂತನವಾಗಿ ಕರ್ನಾಟಕ ಒನ್ ಸಮಗ್ರ ನಾಗರಿಕ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
“ಸೇವೆಗಳನ್ನು ಒಂದೇ ಸೂರಿನಡಿ ಲಭ್ಯವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕರ್ನಾಟಕ ಒನ್ ಸೇವಾ ಕೇಂದ್ರ ಸ್ಥಾಪಿಸಿ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
“ಕರ್ನಾಟಕ ಒನ್ ಪೋರ್ಟಲ್ ಒಂದು ಆನ್‌ಲೈನ್ ಪ್ಲಾಟ್‌ಫಾರ್ಮ್ ಆಗಿದ್ದು, ಎಲ್ಲ ಸೇವೆಗಳು ಒಂದೇ ಸೂರಿನಡಿ ಲಭ್ಯವಾಗುವ ನಿಟ್ಟಿನಲ್ಲಿ ಹಾಗೂ ನಾಗರಿಕ-ಕೇಂದ್ರಿತ ಸೇವೆಗಳನ್ನು ಸುಲಭಗೊಳಿಸಲು ರಾಜ್ಯ ಸರ್ಕಾರದಿಂದ ಕರ್ನಾಟಕ ಒನ್ ಸ್ಥಾಪಿಸಲ್ಪಟ್ಟಿದ್ದು, ಎಲ್ಲ ಸೇವೆಗಳನ್ನು ಪ್ರವೇಶಿಸಲು ಜನರು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದು” ಎಂದು ತಿಳಿಸಿದರು.
“ಕರ್ನಾಟಕ ಒನ್ ರಾಜ್ಯ ಸರ್ಕಾರದ ಹಲವಾರು ಸೇವೆಗಳನ್ನು ತಲುಪಿಸಲು ಉದ್ದೇಶಿಸಿದ್ದು, ಆನ್‌ಲೈನ್ ಪೋರ್ಟಲ್‌ನಲ್ಲಿ ಆಧಾರ್ ಸೇವೆಗಳು, ಆರೋಗ್ಯ ಇಲಾಖೆ ಸೇವೆ, ಚುನಾವಣಾ ಆಯೋಗದ ಸೇವೆಗಳು, ನಾಡಕಚೇರಿ ಸೇವೆ, ಇ-ಸ್ಟಾಂಪಿಂಗ್, ಪುರಸಭೆಯ ಸಹಕಾರ ಸೇವೆಗಳು, ಆಹಾರ ಮತ್ತು ನಾಗರಿಕ ಸರಬರಾಜು ಸೇವೆಗಳು ಲಭ್ಯವಾಗಲಿವೆ. ಅನೇಕ ಸರ್ಕಾರಿ ಇಲಾಖೆಗಳು ಮತ್ತು ಖಾಸಗಿ ಕಂಪನಿಗಳ ಸೇವೆಗಳನ್ನು ಒಂದೇ ಪೋರ್ಟಲ್‌ನಲ್ಲಿ ಲಭ್ಯಾಗುತ್ತಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ
ಪುರಸಭೆ ಸದಸ್ಯೆ ಜ್ಯೋತಿ ವೆಂಕಟೇಶ್ ಮಾತನಾಡಿ “ನಿಗದಿತ ಸಮಯದ ಮಿತಿಯೊಳಗೆ ದಾಖಲೆಗಳನ್ನು ತಲುಪಿಸಲಾಗುತ್ತದೆ ಹಾಗೂ ಸರ್ಕಾರ ನೀಡುವ ಬಹುತೇಕ ಸೇವೆಗಳಿಗೆ ಯಾವುದೇ ಹೆಚ್ಚುವರಿ ಶುಲ್ಕವಿರುವುದಿಲ್ಲ. ಸರ್ಕಾರಿ ಕಚೇರಿ ಹಾಗೂ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಸೌಲಭ್ಯಕ್ಕೂ ಕರ್ನಾಟಕ ಒನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲದೇ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಬಸ್ ಪಾಸ್‌ಗಳಿಗೆ ಅರ್ಜಿ ಹಾಕಬಹುದು” ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲೇಶ್, ಕರ್ನಾಟಕ ಒನ್ ಸೇವಾ ಕೇಂದ್ರದ ಮಾಲೀಕ ಡಿ ವಿ ಗೌತಮ್, ಜಿ ಪಂ ಮಾಜಿ ಸದಸ್ಯರು, ತಾ ಪಂ ಹಾಗೂ ಪುರಸಭೆಯ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಕಾಂಗ್ರೆಸ್ ಮುಖಂಡರು ಇದ್ದರು.