ಸಮುದಾಯ ಭವನ ನಿರ್ಮಾಣಕ್ಕೆ ಸ್ಥಳ ನೀಡಲು ಕೋರಿರುವ ವಾಲ್ಮೀಕಿ ನಾಯಕ ಸಮಾಜದವರು ಮಕ್ಕಳ ಶಿಕ್ಷಣಕ್ಕೆ ಅನುವು ಆಗುವ ವಸತಿ ನಿಲಯ ಕಟ್ಟಡ ಕಟ್ಟುವುದು ಸೂಕ್ತ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಸಲಹೆ ನೀಡಿದರು.
ಗುಬ್ಬಿ ಪಟ್ಟಣದ ಬಾಬು ಜಗಜೀವನ ರಾಂ ಭವನದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಮಾಜದ ಪರಿಕಲ್ಪನೆ ಅಂದಿನ ಕಾಲದಲ್ಲೇ ಯೋಚಿಸಿದ್ದ ಮಹರ್ಷಿ ವಾಲ್ಮೀಕಿ ಅವರ ರಾಮಾಯಣ ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಚಿತ್ರಣ ತಿಳಿಸಿದೆ. ಇದೇ ಮಾರ್ಗಾನುಸಾರ ಪ್ರಸ್ತುತ ಸಮಾಜದಲ್ಲಿ ಶೈಕ್ಷಣಿಕ ಪ್ರಗತಿ ಒಂದೇ ಮುಖ್ಯವಾಹಿನಿಗೆ ಬರಲು ಉತ್ತಮ ಮಾರ್ಗವಾಗಿದೆ. ಈ ನಿಟ್ಟಿನಲ್ಲಿ ಚಿಂತನೆ ಮಾಡಿ ಎಂದು ಕರೆ ನೀಡಿದರು.
ರಾಮಾಯಣ ನಮ್ಮ ಧರ್ಮ ಗ್ರಂಥವಾಗಿದೆ. ಅದರಲ್ಲಿನ ಸಾರ ಉತ್ತಮ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶನವಾಗಿದೆ. ವಾಲ್ಮೀಕಿ ಮಹರ್ಷಿಗಳ ಕೊಡುಗೆ ಅಪಾರ ಎಂಬುದು ಜಗತ್ತಿಗೆ ತಿಳಿದಿದೆ. ನಾಯಕ ಸಮಾಜದವರು ಎನ್ನುವ ಹೆಮ್ಮೆಯ ಜೊತೆಗೆ ಈ ಜನಾಂಗ ಸಮಾಜದಲ್ಲಿ ಮುಂದುವರೆಯಬೇಕಿದೆ. ಸರ್ಕಾರ ಕೂಡ ಅವರಿಗೆ ವಿಶೇಷ ಅನುದಾನ, ಕಾರ್ಯಕ್ರಮ, ಪ್ರೋತ್ಸಾಹ, ಸಬ್ಸಿಡಿ ನೀಡುತ್ತಿದೆ. ಇದನ್ನು ಬಳಸಿಕೊಂಡು ಮುಂದಿನ ಪೀಳಿಗೆಗೆ ಉತ್ತಮ ಶಿಕ್ಷಣ ನೀಡಿ ಮುಖ್ಯವಾಹಿನಿಗೆ ಬರಬೇಕು ಎಂದು ಕರೆ ನೀಡಿದರು.
ಉಪನ್ಯಾಸಕ ಲೋಕೇಶ್ ಮಾತನಾಡಿ ವಾಲ್ಮೀಕಿ ಮೂಲ ಬೇಡನಾಗಿ ನಂತರ ಮಹಾ ತಪಸ್ವಿಯಾದ ಕಥೆ ಸುಮಾರು 2500 ವರ್ಷಗಳ ಹಿಂದೆ ಎಂಬ ಉಲ್ಲೇಖವಿದೆ. ಆದರೆ ಸಂಸ್ಕೃತ ಭಾಷೆಯ ಕಲಿಕೆಗೆ ಅವಕಾಶ ಇಲ್ಲದ ಸಮಯದಲ್ಲಿ ಭಾಷೆಯನ್ನು ಕಲಿತು ಮಹಾ ಗ್ರಂಥ ರಚಿಸಿರುವುದು ಮಹಾ ತಪಸ್ವಿ ಎನ್ನುವುದಕ್ಕೆ ಸಾಕ್ಷಿಯಾಗಿದೆ. ವಲ್ಮೀಕ ಎಂದರೆ ಹುತ್ತ ಎನ್ನುವ ಅರ್ಥವಿದೆ. ತಪಸ್ಸು ಮಾಡುವ ಮಹರ್ಷಿಗಳ ಸುತ್ತ ಬೆಳೆದ ಹುತ್ತದಿಂದಾಗಿ ವಾಲ್ಮೀಕಿ ಹೆಸರು ಬಂತು ಎಂಬ ಅವರ ಚರಿತೆಯಲ್ಲಿ ಬರುತ್ತದೆ. ಅವರ ರಚಿತ ರಾಮಾಯಣ ಅದ್ಬುತ ಎನಿಸಿದೆ. ರಾಮನ ಪಾತ್ರ ಸೇರಿದಂತೆ ಎಲ್ಲಾ ಪಾತ್ರಗಳು ಸಹ ಒಂದೊಂದು ಮಹತ್ವ ಅಂಶ ತಿಳಿಸಿದೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಪಪಂ ಅಧ್ಯಕ್ಷೆ ಮಂಗಳಮ್ಮ, ಉಪಾಧ್ಯಕ್ಷೆ ಮಮತಾ, ಸದಸ್ಯರಾದ ಜಿ.ಎನ್.ಅಣ್ಣಪ್ಪಸ್ವಾಮಿ, ಜಿ.ಆರ್.ಶಿವಕುಮಾರ್, ಶಶಿಕುಮಾರ್, ಮಹಮದ್ ಸಾದಿಕ್, ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಅಡವೀಶಯ್ಯ, ನರಸಿಂಹಮೂರ್ತಿ, ರಾಮಚಂದ್ರಪ್ಪ, ಸಣ್ಣರಂಗಯ್ಯ, ವಾಲ್ಮೀಕಿ ನಾಯಕ ಮಹಿಳಾ ಘಟಕದ ಅಧ್ಯಕ್ಷೆ ಸೌಭಾಗ್ಯಮ್ಮ, ರಾಘವೇಂದ್ರ, ಚೇಳೂರು ಶಿವನಂಜಯ್ಯ, ತಾಪಂ ಇಓ ಶಿವಪ್ರಕಾಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ವೀಣಾ ಸೇರಿದಂತೆ ಎಲ್ಲಾ ಇಲಾಖಾಧಿಕಾರಿಗಳು ಹಾಜರಿದ್ದರು.