ಮರ್ಯಾದಾ ಪುರುಷೋತ್ತಮ ಶ್ರೀರಾಮನ ಅವತಾರ ಸೃಷ್ಟಿಕರ್ತ ಮಹರ್ಷಿ ವಾಲ್ಮೀಕಿ ಅವರ ಆದರ್ಶವನ್ನು ಪಾಲಿಸಿಕೊಂಡು ಬಂದ ಬಿಜೆಪಿ ಪಕ್ಷ ರಾಮ ರಾಜ್ಯದ ಕನಸು ಕಂಡಿದೆ ಎಂದು ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ತಿಳಿಸಿದರು.
ಗುಬ್ಬಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಎಸ್ಟಿ ಮೋರ್ಚಾ ಆಯೋಜಿಸಿದ್ದ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು ಹಿಂದುಳಿದ ಸಮುದಾಯ ನಾಯಕ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ಬೆನ್ನೆಲುಬಾಗಿ ನಿಂತಿದೆ ಎಂದರು.
ಬಿಜೆಪಿ ಸರ್ಕಾರ ಬಂದಾಗಲೆಲ್ಲಾ ವಾಲ್ಮೀಕಿ ನಾಯಕ ಸಮಾಜವನ್ನು ಮುಖ್ಯವಾಹಿನಿಗೆ ತರಲು ಸಾಕಷ್ಟು ಕಾರ್ಯಕ್ರಮ ನೀಡಿದೆ. ಜೊತೆಗೆ ಸಾಮಾಜಿಕ, ಶೈಕ್ಷಣಿಕ ಪ್ರಗತಿಗೆ ಯೋಜನೆಗಳ ಅನುಷ್ಠಾನ ಕೂಡಾ ಪ್ರಾಮಾಣಿಕವಾಗಿ ಮಾಡಿದೆ. ಈ ನಿಟ್ಟಿನಲ್ಲಿ ವಾಲ್ಮೀಕಿ ಸಮಾಜಕ್ಕೆ ರಾಜಕೀಯ ಶಕ್ತಿ ಅತ್ಯಗತ್ಯವಿದೆ ಎಂದರು.
ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ ಮಾತನಾಡಿ ಪಿತೃವಾಕ್ಯ, ಬಾತೃ ಪ್ರೇಮ, ಏಕ ಪತ್ನಿ ವೃತಸ್ಥ ಹೀಗೆ ನಾನಾ ಮಜಲುಗಳಲ್ಲಿ ಮನುಷ್ಯ ಕುಲ ಬದುಕುವ ಅಂಶ ಬರೆದಿರುವ ವಾಲ್ಮೀಕಿ ಅವರ ರಾಮಾಯಣ ನಮ್ಮ ಧರ್ಮ ಗ್ರಂಥವಾಗಿದೆ. ಮಹರ್ಷಿಗಳ ವಾಕ್ಯ ಪಾಲನೆ ಮಾಡುವ ಮೂಲಕ ಸಮಾಜದಲ್ಲಿ ಉತ್ತಮ ವಾತಾವರಣ ಸೃಷ್ಟಿಸೋಣ ಎಂದು ಕರೆ ನೀಡಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಚ್.ಟಿ.ಭೈರಪ್ಪ, ಪಪಂ ಸದಸ್ಯ ಜಿ.ಆರ್.ಶಿವಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಲಕ್ಷ್ಮಿರಂಗಯ್ಯ, ಎಸ್ಟಿ ಮೋರ್ಚಾ ಉಪಾಧ್ಯಕ್ಷ ಲಕ್ಷ್ಮಣ, ಕಾರ್ಯದರ್ಶಿ ಚೇತನ್ ನಾಯಕ್, ಖಜಾಂಚಿ ಮಂಜುನಾಥ್, ಕುಮಾರ್, ಬಿಲ್ಲೇಪಾಳ್ಯ ಮಂಜುನಾಥ್ ಇತರರು ಇದ್ದರು.