- ಯಾವುದೇ ಪಕ್ಷಕ್ಕೂ ಬಹುಮತ ಬರುವುದಿಲ್ಲ. ಈ ಬಾರಿ ಮೈತ್ರಿ ಸರ್ಕಾರ: ಎಚ್‌ಡಿಕೆ
- ಸಿಂಗಾಪುರಕ್ಕೆ ತೆರಳುವ ಮುನ್ನ ರಾಜಕೀಯ ಬಾಗಿಲು ತೆರದಿಟ್ಟ ಕುಮಾರಸ್ವಾಮಿ
ಜೆಡಿಎಸ್ ಈ ಬಾರಿ 50 ಸ್ಥಾನಗಳನ್ನು ಗೆಲ್ಲಲಿದೆ. ಯಾವುದೇ ಪಕ್ಷಕ್ಕೂ ಬಹುಮತ ಬರುವುದಿಲ್ಲ. ತಮ್ಮ ಷರತ್ತು ಒಪ್ಪಿಕೊಳ್ಳುವ ಪಕ್ಷಕ್ಕೆ ನಾವು ಬೆಂಬಲ ನೀಡಲು ಸಿದ್ಧ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಬುಧವಾರ ರಾತ್ರಿ (ಮೇ.10) ಸಿಂಗಾಪುರಕ್ಕೆ ತೆರಳುವ ಮುನ್ನ ಈ ಮೇಲಿನ ಮಾತನ್ನು ಹೇಳಿದ್ದಾರೆ.
ಆ ಮೂಲಕ ನಾವು ಯಾವುದೇ ಪಕ್ಷದೊಂದಿಗೆ ರಾಜಿಗೆ ಮುಂದಾಗುವುದಿಲ್ಲ ಎಂದು ಚುನಾವಣೆ ಮೊದಲು ಹೇಳುತ್ತಿದ್ದ ಕುಮಾರಸ್ವಾಮಿ ಈಗ ಯೂಟರ್ನ್ ಹೊಡೆದಿದ್ದಾರೆ. ಮುಖ್ಯಮಂತ್ರಿ ಹುದ್ದೆಗೆ ಏರುವ ಹೆಬ್ಬಯಕೆಯನ್ನು ಬೆಂಬಲ ಕೊಡುವ ರೂಪದಲ್ಲಿ ಮುಂದಿಟ್ಟಿದ್ದಾರೆ. ಜೊತೆಗೆ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಮುಕ್ತ ಆಹ್ವಾನ ನೀಡಿದ್ದಾರೆ.
ಬಹುತೇಕ ಎಕ್ಸಿಟ್ ಪೋಲ್‌ಗಳು ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದ್ದರು ಬಹುಮತಕ್ಕೆ ಬೇಕಾದ 113 ಸ್ಥಾನಗಳನ್ನು ಕೊಟ್ಟಿಲ್ಲ. ಸಹಜವಾಗಿ ಈ ಬಾರಿಯೂ ಮೈತ್ರಿ ಸರ್ಕಾರವೇ ಅಸ್ತಿತ್ವಕ್ಕೆ ಬರಲಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿವೆ.
ಕಾಂಗ್ರೆಸ್ ನಾಯಕರು ಮಾತ್ರ ಈ ಬಾರಿ ಬಹುಮತ ಸಾಧಿಸಿಯೇ ಕಾಂಗ್ರೆಸ್ ಸರ್ಕಾರ ರಚನೆಯಾಗಲಿದೆ ಎಂಬ ಆತ್ಮವಿಶ್ವಾಸದ ಮಾತುಗಳನ್ನು ಆಡುತ್ತಿದ್ದಾರೆ. ಇತ್ತ ಬಿಜೆಪಿಯವರು ಬಹುಮತ ನಮಗೇ ಸಿಗುತ್ತೆ ಎನ್ನುವ ವಿಶ್ವಾಸದಲ್ಲಿದ್ದಾರೆ.
ಈ ನಡುವೆ ಬಿಜೆಪಿಯ ಆರ್ ಅಶೋಕ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತ, “ನಮ್ಮ ಪಕ್ಷ ಬಹುಮತ ಬರದೇ ಇದ್ದರೂ ಸರ್ಕಾರ ರಚನೆಗೆ ಬೇಕಾದ ಪ್ಲ್ಯಾನ್-ಎ, ಪ್ಲ್ಯಾನ್-ಬಿ, ಪ್ಲ್ಯಾನ್-ಸಿ ಯೋಜನೆಗಳು ಸಿದ್ಧವಾಗಿವೆ” ಎಂದು ಹೇಳಿಕೆ ನೀಡಿರುವುದು ಕುತೂಹಲ ಮೂಡಿಸಿದೆ.
ನಾಳೆ (ಮೆ 13) ಚುನಾವಣೆ ಫಲಿತಾಂಶ ಪ್ರಕಟವಾಗಲಿದ್ದು, ಎಲ್ಲ ಊಹಾಪೋಹಗಳಿಗೂ ತೆರೆಬಿದ್ದು, ಸ್ಪಷ್ಟ ಚಿತ್ರಣ ಸಿಗಲಿದೆ.