ಬುಧವಾರ ಸಂಜೆಯಿಂದ ಪ್ರಾರಂಭವಾಗಿ ರಾತ್ರಿಯಿಡೀ ಸುರಿದ ಮಳೆಗೆ ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯಲ್ಲಿ ಅಪಾರ ಹಾನಿ ಸಂಭವಿಸಿದೆ.
ವಾಯುಭಾರ ಕುಸಿತದಿಂದ ಕಳೆದೆರಡು ದಿನಗಳಿಂದ ಮಳೆ ಸುರಿಯುತ್ತಿದೆ. ಆದರೆ ಬುಧವಾರ ಸಂಜೆಯಿಂದ ನಿರಂತರವಾಗಿ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು ಜನಜೀವನ ಅಸ್ಥವ್ಯಸ್ಥಗೊಂಡಿದೆ.
ದಾವಣಗೆರೆ ನಗರದ ಪಿಸಾಳೆ ಕಾಂಪೌಂಡ್‌ನ ಹತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಇಲ್ಲಿನ ನಿವಾಸಿಗಳು ಇಡೀ ರಾತ್ರಿ ಜಾಗರಣೆ ಮಾಡುವಂತಾಗಿದೆ. ಹಳೇ ಪಿಬಿ ರಸ್ತೆಯ ಪಕ್ಕದಲ್ಲೇ ಇರುವ ಪಿಸಾಳೆ ಕಾಂಪೌಂಡ್ ತಗ್ಗು ಪ್ರದೇಶದಲ್ಲಿ ಇರುವ ಕಾರಣ ಮಳೆ ನೀರು ವಸತಿ ಪ್ರದೇಶದೊಳಗೆ ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ. ಮನೆಯಲ್ಲಿರುವ ಸಾಮಗ್ರಿಗಳು, ದವಸ ಧಾನ್ಯಗಳು ಕೂಡ ನೀರುಪಾಲಾಗಿವೆ. ಮನೆಯಲ್ಲಿದ್ದ ನೀರನ್ನು ಹೊರ ಹಾಕುವ ಕೆಲಸವನ್ನು ಇಲ್ಲಿನ ಸ್ಥಳೀಯರು ಮಾಡುತ್ತಿದ್ದಾರೆ. ಬೈಕ್ ಗಳು ಕೂಡ ಮುಳುಗಡೆಯಾಗಿವೆ.

ಪಿಸಾಳೆ ಕಾಂಪೌಂಡ್‌ನಲ್ಲಿದ್ದ ನೀರನ್ನು ಪಾಲಿಕೆ ಸಿಬ್ಬಂದಿ ಹೊರ ಹಾಕುವಲ್ಲಿ ನಿರತರಾಗಿದ್ದಾರೆ. ಉಳಿದಂತೆ ನಗರದ ಹಲವು ಭಾಗದಲ್ಲಿಯೂ ಮಳೆನೀರು ಮನೆಗಳಿಗೆ ನುಗ್ಗಿದ್ದು ಹಾನಿ ಸಂಭವಿಸಿದೆ.
ಜಗಳೂರು ತಾಲೂಕಿನ ಹಿರೇಮಲ್ಲನಹೊಳೆ ಕೆರೆಯು ತುಂಬಿ ಕೋಡಿ ಹರಿದಿದ್ದು, ಕೆರೆ ಅಂಗಳಕ್ಕೆ ಹೊಂದಿಕೊಂಡಂತಿದ್ದ ಸುಮಾರು 35 ರಿಂದ 40 ಮನೆಗಳಿಗೆ ನೀರು ನುಗ್ಗಿದೆ. ಗ್ರಾಮದ ಸರ್ಕಾರಿ ಪಾಠಶಾಲೆಯಲ್ಲಿ ಗಂಜಿ ಕೇಂದ್ರ ತೆರೆದಿದ್ದು, ಸಂತ್ರಸ್ತ ಕುಟುಂಬಗಳಿಗೆ ಅಲ್ಲಿ ಆಶ್ರಯ ನೀಡಲಾಗಿದೆ. ಜಗಳೂರು ತಾಲೂಕಿನ ಬಹುತೇಕ ಕೆರೆಗಳಿಗೆ ಉತ್ತಮ ಮಳೆಯಿಂದ ನೀರು ಹರಿದಿದ್ದು ತುಂಬುವ ಹಂತದಲ್ಲಿವೆ.
ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಮೂರು ನಾಲ್ಕು ದಿನಗಳು ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ತಿಳಿಸಿದ್ದು, ಜನರು ಎಚ್ಚರಿಕೆ ವಹಿಸಲು ಜಿಲ್ಲಾಡಳಿತ ತಿಳಿಸಿದೆ.

