ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಹೊರಗುತ್ತಿಗೆ ನೌಕರರಿಗೆ ಬಾಕಿ ಇರುವ ವೇತನ ಪಾವತಿಸಲು ಒತ್ತಾಯಿಸಿ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘ (ರಿ) ದಿಂದ ಯಾದಗಿರಿ ಜಿಲ್ಲಾ ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಪತ್ರ ಸಲ್ಲಿಸಿ ಜಿಲ್ಲಾ ಕಾರ್ಯದರ್ಶಿ ರಾಮಲಿಂಗಪ್ಪ ಬಿ.ಎನ್ ಮಾತನಾಡಿ, “ಕಳೆದ ಸೆಪ್ಟೆಂಬರ್ ತಿಂಗಳ 30ನೇ ತಾರೀಖಿನಂದು ಸಂಘದಿಂದ ಪತ್ರ ಸಲ್ಲಿಸಿ ಬಾಕಿ ವೇತನ ಪಾವತಿ ಮಾಡಲು ಕೋರಿದ್ದರಿಂದ ಕಾಲೇಜ್ ಹಾಸ್ಟೆಲ್ ಕಾರ್ಮಿಕರಿಗೆ ಕೇವಲ 1 ತಿಂಗಳ ವೇತನ ಪಾವತಿ ಮಾಡಿದ್ದಾರೆ. ಇನ್ನುಳಿದ ಬಾಕಿ ವೇತನ ಪಾವತಿಸಲು ಪುನಃ ಕೋರಲಾಗಿದೆ. ಆದರೆ ವೇತನ ಪಾವತಿ ಮಾಡಲಿಲ್ಲ” ಎಂದು ಕಿಡಿಕಾರಿದರು.
“ಕಾರ್ಮಿಕರು ಮಹತ್ವದ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಪ್ರತಿ ತಿಂಗಳು 5ನೇ ತಾರೀಖಿನ ಒಳಗಾಗಿ ವೇತನ ಪಾವತಿಸುವಂತೆ ಇಲಾಖೆಯ ಆದೇಶವಿದ್ದರೂ ಸಮಯಕ್ಕೆ ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ. ಮೂರ್ನಾಲ್ಕು ತಿಂಗಳ ವೇತನ ಬಾಕಿ ಉಳಿಸಿಕೊಳ್ಳಲಾಗುತ್ತಿದೆ. ಕಾರ್ಮಿಕರು ದಿನ ನಿತ್ಯ ಹಾಸ್ಟೆಲ್ ಕೆಲಸಕ್ಕೆ ಹೋಗಿ ಬರಲು ಸಹ ಸಾಲದ ಮೊರೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಬೆಲೆ ಏರಿಕೆಯಂತಹ ಇಂತಹ ದಿನಗಳಲ್ಲಿ ದುಡಿದ ಹಣ ಕೈಗೆ ಸಿಗದೆ ಕಾರ್ಮಿಕರು ತಮ್ಮ ಜೀವನ ನಡೆಸಲು ಹೆಣಗಾಡುವಂತೆ ಆಗಿದೆ” ಎಂದು ನೋವು ತೋಡಿಕೊಂಡರು.

“ಸಕಾಲದಲ್ಲಿ ವೇತನ ಪಾವತಿಸಿ ಕಾರ್ಮಿಕರ ಸೇವೆಯನ್ನು ಗೌರವಿಸಬೇಕಾದ ಇಲಾಖೆ ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಮತ್ತೊಂದೆಡೆ ಕಾರ್ಮಿಕರಿಗೆ ಸಿಗಬೇಕಾದ ಶಾಸನಬದ್ಧ ಸೌಕರ್ಯಗಳು ಸಹ ಲಭಿಸುತ್ತಿಲ್ಲ. ಹಾಗಾಗಿ ಬಾಕಿ ವೇತನ ಕೂಡಲೇ ಪಾವತಿ ಮಾಡಿ ಮತ್ತು ಸೇವೆಯಿಂದ ನೋಟಿಸ್ ನೀಡದೆ ವಜಾ ಮಾಡಿರುವ ಕಾರ್ಮಿಕರನ್ನು ಪುನಃ ಸೇವೆಗೆ ನಿಯೋಜಿಸಿಕೊಳ್ಳಿ” ಎಂದು ಪಟ್ಟು ಹಿಡಿದು ಒತ್ತಾಯಿಸಲಾಯಿತು.
ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಬಂದ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು, ಸಹಾಯಕ ನಿರ್ದೇಶಕರು ಆಗಮಿಸಿ ನಿರಂತರವಾಗಿ ಚರ್ಚಿಸಿ, ಆದಷ್ಟು ಶೀಘ್ರವಾಗಿ ವೇತನ ಪಾವತಿ ಮಾಡುವ ಭರವಸೆ ನೀಡಿದರು. ಇನ್ನುಳಿದ ಸಮಸ್ಯೆಗಳ ಕುರಿತು ಎರಡು ದಿನದಲ್ಲಿ ಸಭೆ ಕರೆದು ಚರ್ಚೆ ಮಾಡಿ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಶರಣಪ್ಪ ಜಿ ತೆಳಿಗೇರಿಕರ್, ಮುಖಂಡರಾದ ಭೀಮಾಶಂಕರ ನಾಯ್ಕಲ್, ಶ್ರೀಕಾಂತ್ ಚಿಕ್ಕಮೇಟಿ, ಗಜಾನಂದ, ಆನಂದಪ್ಪ, ನರಸಪ್ಪ, ಸಿದ್ದಪ್ಪ, ಜಗದೇವಿ, ಶ್ರೀದೇವಿ, ಮಮ್ಮಾದೇವಿ, ಆಶಮ್ಮ, ಲಕ್ಷ್ಮೀ ಸೇರಿದಂತೆ ಅನೇಕ ಹಾಸ್ಟೆಲ್ ಹೊರಗುತ್ತಿಗೆ ನೌಕರರು ಉಪಸ್ಥಿತರಿದ್ದರು.
