2024-25 ನೇ ಸಾಲಿನ ಡಾ.ಬಿ.ಆರ್.ಅಂಬೇಡ್ಕರ್ ಕುರಿತಾದ ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ ಅಕ್ಟೋಬರ್ 15 ರಿಂದ ನೋಂದಣಿ ಆರಂಭವಾಗಿದ್ದು ಫೆ.28 ನೊಂದಣಿ ಕೊನೆ ದಿನಾಂಕವಾಗಿರುತ್ತದೆ. ಇದಕ್ಕಾಗಿ ಆರು ಲಕ್ಷ ಬಹುಮಾನ ಇಡಲಾಗಿದೆ. ಆಸಕ್ತರು ಭಾಗವಹಿಸಿ ಬಹುಮಾನ ಗೆಲ್ಲಬಹುದು ಎಂದು ದಲಿತ ವಿದ್ಯಾರ್ಥಿ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಶ್ರೀನಾಥ ಪೂಜಾರಿ ಹೇಳಿದರು.
ವಿಜಯಪುರ ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ನಾವು ಅಂಬೇಡ್ಕರ್ ಅವರ ವಿಚಾರಧಾರೆಗಳು, ಅವರ ವ್ಯಕ್ತಿತ್ವ ಹಾಗೂ ಭಾರತಕ್ಕೆ ಸಂವಿಧಾನ ಸಿದ್ಧಪಡಿಸಲು ಅವರು ಹಾಕಿರುವ ಶ್ರಮವನ್ನು ಹಿಗೆ ಅವರ ಜೀವನದ ಬಗ್ಗೆ ಸಾರ್ವಜನಿಕರಲ್ಲಿ, ಅದರಲ್ಲೂ ಯುವ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ, ಹಮ್ಮಿಕೊಳ್ಳುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆನ್ಲೈನ್ ಮಾದರಿಯಲ್ಲಿ ನಡೆಸಲಾಗುತ್ತಿದ್ದು, 125 ಅಂಕಗಳನ್ನು ಹೊಂದಿರಲಿವೆ. 100 ಪ್ರಶ್ನೆಗಳು ಕೇವಲ ಅಂಬೇಡ್ಕರ್ ಪ್ರಶ್ನೆಗಳಾಗಿದ್ದರೆ ಇನ್ನುಳಿದ 25 ಪ್ರಶ್ನೆಗಳು ಸಂವಿಧಾನದ ಕುರಿತಾಗಿವೆ. ಅದರಂತೆ ಪ್ರತಿ ನಾಲ್ಕು ತಪ್ಪು ಉತ್ತರಗಳಿಗೆ 1 ಸರಿ ಅಂಕವನ್ನು ಕಡಿತಗೊಳಿಸಲಾಗುತ್ತದೆ ಎಂದು ವಿವರಿಸಿದರು.
ಈ ವರ್ಷ 6 ಲಕ್ಷ ಬಹುಮಾನದ ಮೊತ್ತ ಇಡಲಾಗಿದ್ದು, ಪ್ರಥಮ ಬಹುಮಾನ 3 ಲಕ್ಷ, ದ್ವಿತೀಯ ಬಹುಮಾನ 2 ಲಕ್ಷ ಹಾಗೂ ತೃತೀಯ ಬಹುಮಾನ 1 ರೂಪಾಯಿ ನೀಡಲಾಗುತ್ತದೆ. ಈ ಕೆಳಕಂಡ ಈಮೇಲ್ WW.mydvp.org ಹಾಗೂ 9380678859 ಮೊಬೈಲ್ ಸಂಖ್ಯೆಗೆ ಕರೆ ಮಾಡಿ ನೋಂದಣಿ ಮಾಡಿಕೊಳ್ಳಬಹುದು ಎಂದು ಹೇಳಿದರು.
ಪರೀಕ್ಷೆ ಬರೆಯಲು ಎಲ್ಲಾ ಜಾತಿ, ಧರ್ಮಕ್ಕೆ ಸೇರಿದವರಿಗೆ ಅವಕಾಶ ನೀಡಲಾಗಿದೆ. ನಿರ್ದಿಷ್ಟ ಜಾತಿ, ಧರ್ಮಕ್ಕೆ ಮೀಸಲಿರಿಸದೇ ಸಮಾಜದ ಎಲ್ಲ ಧರ್ಮದ ಯುವಕರು-ಯುವತಿಯರು ಬರೆಯಬಹುದಾಗಿದೆ. 2025ರ ಏ.14ರಂದು ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನದಂದು ಬಹುಮಾನ ವಿತರಣೆ ಮಾಡಲಾಗುವುದು’ ಎಂದು ಇದೇ ವೇಳೆ ಶ್ರೀನಾಥ್ ಪೂಜಾರಿ ತಿಳಿಸಿದರು.
ಈ ಸಂದರ್ಭದಲ್ಲಿ ಪರೀಕ್ಷೆ ಪೋಸ್ಟರ್ ಬಿಡುಗಡೆ ಮಾಡಿ, ಪರೀಕ್ಷೆ ನೋಂದಣಿ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ರಾಜ್ಯ ಸಂಚಾಲಕ ಬಾಲಾಜಿ ಕಾಂಬಳೆ, ಜಿಲ್ಲಾ ಘಟಕದ ಉಪಾಧ್ಯಕ್ಷ ಮಹಾದೇವ ಚಲವಾದಿ, ಮುಖಂಡ ಯಮನಪ್ಪ ಮಾದರ, ಸಲಹಾ ಸಮಿತಿಯ ಸದಸ್ಯ ಮಲ್ಲು ಕುಂಬಾರ ಇದ್ದರು.

