ಸಾಕಿದ್ದ ನಾಯಿ ಬೊಗಳಿದ್ದಕ್ಕೆ ಸಿಟ್ಟುಗೊಂಡ ಪಕ್ಕದ ಮನೆಯಾತ ನಾಯಿ ಸಾಕಿದ ಮಾಲೀಕನ ಕೈ ಯನ್ನೇ ಮುರಿದಿರುವ ಘಟನೆ ತುರುವೇಕೆರೆ ಸಮೀಪದ ಅಪ್ಪಸಂದ್ರದಲ್ಲಿ ನಡೆದಿದೆ.
ಅಪ್ಪಸಂದ್ರದ ವೆಂಕಟೇಶ್ (50) ತನ್ನ ಮನೆಯಲ್ಲಿ (ಗುಡಿಸಲು) ಎರಡು ನಾಯಿಗಳನ್ನು ಸಾಕಿದ್ದಾರೆ. ಬುಧವಾರ ರಾತ್ರಿ ನಾಯಿಗಳಿಗೆ ಅನ್ನ ಹಾಕುವ ವೇಳೆ ನಾಯಿಗಳು ಹೆಚ್ಚಾಗಿ ಬೊಗಳಿವೆ. ಇದರಿಂದ ಕೋಪಗೊಂಡ ಪಕ್ಕದ ಮನೆಯಲ್ಲಿರುವ ಶಿವರಾಜ್ ಎಂಬಾತ ವೆಂಕಟೇಶ್ ನ ಮೇಲೆ ಏಕಾಏಕಿ ದೊಣ್ಣೆಯಿಂದ ಮನಸಾ ಇಚ್ಚೆ ಥಳಿಸಿದ್ದಾನೆ. ವೆಂಕಟೇಶ್ ನ ಎಡಗೈಗೆ ಹೆಚ್ಚು ಪೆಟ್ಟು ಬಿದ್ದ ಪರಿಣಾಮ ಆತನ ಎಡಗೈ ಮೂಳೆ ಮುರಿದಿದ್ದು ಕೈ, ಮಾಂಸ ಖಂಡಗಳ ಸಹಾಯದಿಂದ ನೇತಾಡುತ್ತಿದೆ.
ಹೆಂಡತಿ ಮಕ್ಕಳು ಇಲ್ಲದೇ ಅನಾಥನಂತಿರುವ ವೆಂಕಟೇಶ್ ನನ್ನು ಗ್ರಾಮದ ದಯಾನಂದ್ ಸೇರಿದಂತೆ ಇತರರು ಮಾನವೀಯತೆಯಿಂದ ತುರುವೇಕೆರೆ ಸರ್ಕಾರಿ ಆಸ್ಪತ್ರೆಗೆ ವೆಂಕಟೇಶ್ ನನ್ನು ಕರೆ ತಂದು ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಎಡಗೈ ಮೂಳೆ ತುಂಡಾಗಿರುವುದರಿಂದ ಹೆಚ್ಚಿನ ಚಿಕಿತ್ಸೆಗೆ ತುಮಕೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಇಲ್ಲಿನ ವೈದ್ಯರು ಶಿಫಾರಸ್ಸು ಮಾಡಿದ್ದಾರೆ.
ಮೊದಲೇ ದುಡಿಯಲೂ ಆಗದ ಸ್ಥಿತಿಯಲ್ಲಿರುವ ಅಸಹಾಯಕನಾಗಿರುವ ಅನಾಥ ವೆಂಕಟೇಶ್ ನ ಸ್ಥಿತಿ ಅತಂತ್ರವಾಗಿದೆ. ಎಡಗೈ ತುಂಡಾಗಿದ್ದು ಚಿಕಿತ್ಸೆ ವೆಚ್ಚವನ್ನೂ ಭರಿಸುವ ಸ್ಥಿತಿಯೂ ಆತನಿಗೆ ಇಲ್ಲ. ಅಲ್ಲದೇ ಅವನ ಚಿಕಿತ್ಸಾ ವೆಚ್ಚವನ್ನು ಭರಿಸಲು ಯಾರೂ ಮುಂದೆ ಬರುತ್ತಿಲ್ಲ.
ವೆಂಕಟೇಶ್ ಗೆ ಇರಲು ಸೂರು ಇಲ್ಲ. ಕಟ್ಟಿಕೊಂಡಿರುವ ಗುಡಿಸಲೂ ಸಹ ಇಂದೋ ನಾಳೆಯೋ ಬಿದ್ದು ಹೋಗುವ ಸ್ಥಿತಿಯಲ್ಲಿದೆ. ವೆಂಕಟೇಶ್ ನ ಸಹಾಯಕ್ಕೆ ಯಾರಾದರೂ ಮುಂದೆ ಬರುವರೇ ಕಾದು ನೋಡಬೇಕಿದೆ.
ವೆಂಕಟೇಶ್ ನ ಕೈ ಮುರಿದಿರುವ ಶಿವರಾಜ್ ವಿರುದ್ಧ ದಂಡಿನಶಿವರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ತನಿಖೆ ಮುಂದುವರೆಸಿದ್ದಾರೆ.
ವರದಿ – ಎಸ್. ನಾಗಭೂಷಣ್ ತುರುವೇಕೆರೆ
