ಕೋಲಾರ-ಆಂಧ್ರ ಗಡಿಭಾಗದಲ್ಲಿ ಬೆಳ್ಳಂಬೆಳಿಗ್ಗೆ ಕಾಡಾನೆಗಳು ದಾಳಿ ಮಾಡಿದ್ದು, ಇಬ್ಬರು ಬಲಿಯಾಗಿದ್ದಾರೆ. ನಾಲ್ವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಆಂಧ್ರಪ್ರದೇಶದ ಕುಪ್ಪಂ ಮಂಡಲಂನ ಮಲ್ಲನೂರು ಗ್ರಾಮದಲ್ಲಿ ಘಟನೆ ನಡೆದಿದೆ. ಬೆಂಗಳೂರಿಗೆ ಕೆಲಸಕ್ಕೆಂದು ಬರುತ್ತಿದ್ದವರ ಮೇಲೆ ಆನೆ ದಾಳಿ ನಡೆಸಿವೆ. ಮೃತರನ್ನು ಉಷಾ ಮತ್ತು ಶಿವಲಿಂಗಂ ಎಂದು ಗುರುತಿಸಲಾಗಿದೆ.
ಮಲ್ಲನೂರು ಗ್ರಾಮದಿಂದ ಬೆಂಗಳೂರಿಗೆ ಕೆಲಸಕ್ಕೆಂದು ನಿತ್ಯ ಆರು ಮಂದಿ ಬಂದು ಹೋಗುತ್ತಿದ್ದರು. ಎಂದಿನಂತೆ ಶುಕ್ರವಾರವೂ ರೈಲು ಹಿಡಿಯಲೆಂದು ರೈಲ್ವೆ ನಿಲ್ದಾಣಕ್ಕೆ ತೆರಳುತ್ತಿದ್ದರು. ಆಗ ಕಾಡಾನೆಗಳು ಏಕಾಏಕಿ ದಾಳಿ ಮಾಡಿವೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಭೀಕರ ಅಪಘಾತ; ಇಬ್ಬರ ಸಾವು, 30ಕ್ಕೂ ಅಧಿಕ ಮಂದಿಗೆ ಗಾಯ
ದಾಳಿಯಲ್ಲಿ ಒಬ್ಬ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟರೆ, ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಮೃತ ಮಹಿಳೆ ಉಷಾ ಅವರು ಮಲ್ಲನೂರು ಬಳಿಯ ಪತಿಚೇನು ಗ್ರಾಮದವರಾಗಿದ್ದು, ಶಿವಲಿಂಗಂ ಕೂಡಾ ಸಮೀಪದ ಸಪ್ಪನಿಕುಂಟಾದವರು.

ಆನೆ ದಾಳಿಯಲ್ಲಿ ಗಂಭೀರವಾಗಿ ಗಾಯವಾಗಿದ್ದ ಇಬ್ಬರನ್ನು ಕುಪ್ಪಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನಿಬ್ಬರಿಗೆ ಪ್ರಥಮ ಚಿಕಿತ್ಸೆ ಮಾಡಿ, ಮನೆಗೆ ಕಳುಹಿಸಲಾಗಿದೆ.
ಕಾಡಾನೆಗಳ ದಾಳಿಯಿಂದ ಮಲ್ಲನೂರು, ಸುತ್ತಮುತ್ತಲಿನ ಜನರಲ್ಲಿ ಆತಂಕ ಉಂಟಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.