ಬೀದರ್ ತಾಲೂಕಿನ ಇಸ್ಲಾಂಪುರ ಗ್ರಾಮದಿಂದ ಕೌಠಾ(ಬಿ) ಸೇತುವೆಯವರೆಗೆ ರಸ್ತೆ ನಿರ್ಮಾಣಕ್ಕೆ ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ ಖಾನ್ ಗುರುವಾರ ಭೂಮಿಪೂಜೆ ನೆರವೇರಿಸಿದರು.
ಸಚಿವ ರಹೀಂ ಖಾನ್ ಮಾತನಾಡಿ, ʼಹಲವು ವರ್ಷಗಳಿಂದ ಗ್ರಾಮಸ್ಥರು ರಸ್ತೆ ದುರಸ್ತಿಗೆ ಕೋರಿಕೆ ಸಲ್ಲಿಸಿದ್ದು, ಇದೀಗ ₹1 ಕೋಟಿ ಅಂದಾಜು ವೆಚ್ಚದೊಂದಿಗೆ ಇಸ್ಲಾಂಪುರ ಗ್ರಾಮದಿಂದ ಕೌಠಾ ಸೇತುವೆವರೆಗೆ ರಸ್ತೆ ನಿರ್ಮಾಣಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಮ್ಯಾಕ್ರೋ ಯೋಜನೆಯಡಿ ಅನುದಾನ ಒದಗಿಸಲಾಗಿದೆ. ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಲಾಗುವುದುʼ ಎಂದರು.

ಈ ಸಂದರ್ಭದಲ್ಲಿ ಯರನಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಹಸೀನಾ ಬೇಗಮ್, ಉಪಾಧ್ಯಕ್ಷೆ ರೇಷ್ಮಾ ವೈಜಿನಾಥ ಜೀರ್ಗೆ, ಗ್ರಾ.ಪಂ.ಸದಸ್ಯರಾದ ಲಕ್ಷ್ಮೀಬಾಯಿ ಬಸವರಾಜ್, ಕಾವೇರಿ ಅಶೋಕ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ್ ಚಿಮಕೋಡೆ, ಬೀದರ್ ನಗರಸಭೆ ಅಧ್ಯಕ್ಷ ಮೊಹಮ್ಮದ್ ಗೌಸ್, ಕಾಂಗ್ರೆಸ್ ಮುಖಂಡ ಬಸವರಾಜ ಭೂಯ್ಯ, ಡಾ.ಕಾಮಶೆಟ್ಟಿ, ಮಹೇಂದರ್ ಇಸ್ಲಾಂಪುರ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ʼಈದಿನ.ಕಾಮ್ʼ ಗೆ ಧನ್ಯವಾದ ತಿಳಿಸಿದ ಗ್ರಾಮಸ್ಥರು :
ಬೀದರ್ ತಾಲೂಕಿನ ಇಸ್ಲಾಂಪುರ ಗ್ರಾಮದಿಂದ ಕೌಠಾ(ಬಿ) ಸೇತುವೆ ಬಳಿಯ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿರುವುದು ಸಂಚಾರ ದುಸ್ತರವಾಗಿರುವ ಕುರಿತು 2024ರ ಆಗಸ್ಟ್ 11ರಂದು ʼಬೀದರ್ | ತೀವ್ರ ಹದಗೆಟ್ಟ ರಸ್ತೆ : ಕೇಳೋರಿಲ್ಲ ಇಸ್ಲಾಂಪುರ ಗ್ರಾಮಸ್ಥರ ಗೋಳುʼ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.
ಬೀದರ್-ಔರದ್ ರಾಷ್ಟ್ರೀಯ ಹೆದ್ದಾರಿಯ ಕೌಠಾ(ಬಿ) ಸೇತುವೆಯಿಂದ 2 ಕಿ.ಮೀ. ದೂರದ ಇಸ್ಲಾಂಪುರ ಗ್ರಾಮದಲ್ಲಿ ಸುಮಾರು 300ಕ್ಕೂ ಅಧಿಕ ಮನೆಗಳಿದ್ದು, 1,200 ಮತದಾರರಿದ್ದಾರೆ. ಆದರೆ ಸಾರ್ವಜನಿಕರು ನಿತ್ಯ ಸಂಚರಿಸುವ ರಸ್ತೆ ಹದಗೆಟ್ಟು ದಶಕಗಳೇ ಉರುಳಿದರೂ ಕನಿಷ್ಠ ದುರಸ್ತಿಯಾಗದ ಪರಿಣಾಮ ಗ್ರಾಮಕ್ಕೆ ಬಸ್ ಸಂಚಾರ ಕೂಡ ಸ್ಥಗಿತಗೊಂಡಿತ್ತು.

ಈದಿನ ವರದಿ ಬಳಿಕ ಬೀದರ್ ಕ್ಷೇತ್ರದ ಶಾಸಕರೂ ಆದ ಪೌರಾಡಳಿತ ಸಚಿವ ರಹೀಂ ಖಾನ್ ಅವರು ಗ್ರಾಮಸ್ಥರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡುವ ಮೂಲಕ ಜನರಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಮಹಾ’ ಚುನಾವಣೆಗಾಗಿ ಒಂದಾದ ಮನುವಾದಿಗಳು, ಒಂದಾಗದ ಜಾತ್ಯತೀತರು
ಈ ಕುರಿತು ಇಸ್ಲಾಂಪುರ ಗ್ರಾಮಸ್ಥ ವೈಜಿನಾಥ ಜೀರ್ಗೆ ಈದಿನ.ಕಾಮ್ ದೊಂದಿಗೆ ಮಾತನಾಡಿ, ʼಇಸ್ಲಾಂಪುರ ಗ್ರಾಮದಿಂದ ಕೌಠಾ ಸೇತುವೆ ತನಕ ಹಾಳಾದ ರಸ್ತೆ ಕುರಿತು ʼಈದಿನ.ಕಾಮ್ʼ ನಲ್ಲಿ 2023 ಹಾಗೂ 2024ರಲ್ಲಿ ಎರಡು ಸಲ ವಿಸ್ತೃತ ವರದಿ ಪ್ರಕಟಿಸಿತು. ಆ ವರದಿ ಫಲವಾಗಿ ನಮ್ಮೂರಿನ ರಸ್ತೆ ಸುಧಾರಣೆ ಕಾಣುವಂತಾಗಿದೆ. ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಕ್ಷೇತ್ರದ ಶಾಸಕರಿಗೆ ಹಾಗೂ ವರದಿ ಪ್ರಕಟಿಸಿದ ʼಈ ದಿನ.ಕಾಮ್ʼ ಮಾಧ್ಯಮಕ್ಕೆ ಗ್ರಾಮಸ್ಥರ ಪರವಾಗಿ ಧನ್ಯವಾದಗಳುʼ ಎಂದು ಹೇಳಿದ್ದಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.