ಈ ದಿನ ಸಂಪಾದಕೀಯ | 9 ತಿಂಗಳಲ್ಲಿ ಬೆಂಗಳೂರು ನಗರವೊಂದರಲ್ಲೇ 455 ಪೋಕ್ಸೊ ಪ್ರಕರಣ; ಹಲ್ಲಿಲ್ಲದ ಹಾವಾಯಿತೇ ಕಾಯ್ದೆ?

Date:

Advertisements

ಕೆಲವು ಪೋಕ್ಸೊ ಪ್ರಕರಣಗಳು ರಾಜಿಯಲ್ಲಿ ಮುಗಿದು ಹೋದರೆ, ಕೆಲವು ಪ್ರಕರಣಗಳ ಆರೋಪಿಗಳು ಮನೆ ಖಾಲಿ ಮಾಡಿಕೊಂಡು ನಾಪತ್ತೆಯಾಗುತ್ತಿದ್ದಾರೆ ಎಂದು ಪೊಲೀಸ್‌ ದಾಖಲೆಗಳೇ ಹೇಳುತ್ತವೆ. ಇನ್ನು ಕೆಲವು ಪ್ರಕರಣಗಳಲ್ಲಿ ಅವಮಾನಕ್ಕೆ ಅಂಜಿ ಸಂತ್ರಸ್ತ ಕುಟುಂಬಗಳೇ ಊರು ಬಿಡುತ್ತಿವೆ. ಇದು ಬಡ ವರ್ಗದ, ಕೂಲಿ ಕಾರ್ಮಿಕ ಕುಟುಂಬಗಳ ಕತೆ.

ಬೆಂಗಳೂರು ಮಹಾನಗರವೊಂದರಲ್ಲಿಯೇ 2024ರಲ್ಲಿ, ಅಂದರೆ ಒಂಬತ್ತೇ ತಿಂಗಳಲ್ಲಿ 455 ಪೋಕ್ಸೊ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 112 ಪ್ರಕರಣಗಳ ತನಿಖೆಯ ಹಂತದಲ್ಲಿದೆ, 300 ಪ್ರಕರಣಗಳಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಬೆಂಗಳೂರು ನಗರ ಪೊಲೀಸ್‌ ಆಯುಕ್ತರ ಕಚೇರಿಯೇ ಈ ಮಾಹಿತಿ ನೀಡಿದೆ. ಬೆಂಗಳೂರು ನಗರವೊಂದರಲ್ಲೇ ಇಷ್ಟೊಂದು ಮಕ್ಕಳ ಮೇಲೆ ದೌರ್ಜನ್ಯ ನಡೆದಿರುವುದು ನಿಜಕ್ಕೂ ಆತಂಕಕಾರಿ ಸುದ್ದಿ.

ದೇಶದಲ್ಲಿ ದಿನೇ ದಿನೇ ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ಕಿರುಕುಳ ಹೆಚ್ಚುತ್ತಿದೆ. ಪೋಕ್ಸೊ ಕಾಯ್ದೆ ಬಂದು ಒಂದು ದಶಕ ಪೂರೈಸಿದೆ. ಆದರೆ, ಅದರಿಂದ ಹೆಣ್ಣುಮಕ್ಕಳಿಗೆ ಸಿಕ್ಕಿದ ರಕ್ಷಣೆ, ನ್ಯಾಯ ಮಾತ್ರ ಅಷ್ಟರಲ್ಲೇ ಇದೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಿಲುಕುವ ಆರೋಪಿಗಳ ಕೌಟುಂಬಿಕ ಹಿನ್ನೆಲೆ, ಧರ್ಮ, ಜಾತಿ, ಹಣ ಬಲ ನೋಡಿ ನ್ಯಾಯ ನಿರ್ಣಯವಾಗುವ ಮಟ್ಟಿಗೆ ನಮ್ಮ ವ್ಯವಸ್ಥೆ ಕುಲಗೆಟ್ಟಿದೆ.

Advertisements

ಎರಡು ವರ್ಷಗಳ ಹಿಂದೆ ಮುರುಘಾ ಮಠದ ಹಾಸ್ಟೆಲ್‌ನಲ್ಲಿದ್ದು ಶಾಲೆಗೆ ಹೋಗುತ್ತಿದ್ದ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರು ಮಠದ ಸ್ವಾಮೀಜಿ ವಿರುದ್ಧ ನಿರಂತರ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು ದೇಶವ್ಯಾಪಿ ಸುದ್ದಿಯಾಗಿತ್ತು. ಆತನನ್ನು ಬಂಧಿಸಲು ಪೊಲೀಸರು ಒಂದು ವಾರ ವಿಳಂಬ ಮಾಡಿದ್ದರು. ಒಮ್ಮೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆರೋಪಿಯ ಜಾಮೀನು ರದ್ದುಪಡಿಸಿತ್ತು ಸುಪ್ರೀಂ ಕೋರ್ಟ್‌. ಈಗ ಮತ್ತೆ ಚಿತ್ರದುರ್ಗದ ಕೋರ್ಟ್‌ ಜಾಮೀನು ಕೊಟ್ಟಿದೆ. ಪ್ರಕರಣ ದಾಖಲಾಗಿ ಭರ್ತಿ ಎರಡು ವರ್ಷ ಕಳೆದಿದೆ. ಚಾರ್ಜ್‌ಶೀಟ್‌ ಸಲ್ಲಿಕೆಯಾಗಿ ಒಂದೂವರೆ ವರ್ಷವೇ ಉರುಳಿದೆ. ಇನ್ನು ಕೋರ್ಟ್‌ನಲ್ಲಿ ಅದೆಷ್ಟು ವರ್ಷ ವಿಚಾರಣೆ ನಡೆಯುತ್ತೋ ಗೊತ್ತಿಲ್ಲ.

ಇನ್ನು ರಾಜ್ಯ ಬಿಜೆಪಿಯ ಅಗ್ರ ನಾಯಕ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ, ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರ ವಿರುದ್ಧ ದಾಖಲಾದ ಪೋಕ್ಸೊ ಪ್ರಕರಣದಲ್ಲಿ ಅವರಿಗೆ ನ್ಯಾಯಾಲಯ ಸಂಪೂರ್ಣ ರಕ್ಷಣೆ ನೀಡಿದೆ ಎಂದೇ ಹೇಳಬಹುದು. ಕೆಳ ನ್ಯಾಯಾಲಯ ಜಾಮೀನುರಹಿತ ವಾರೆಂಟ್‌ ಹೊರಡಿಸಿದರೆ, ಹೈಕೋರ್ಟ್‌ ಜಾಮೀನು ನೀಡುತ್ತದೆ. ಅಷ್ಟೇ ಅಲ್ಲ ಆರೋಪಿಯನ್ನು ಬಂಧಿಸದೇ ವಿಚಾರಣೆ ನಡೆಸಬೇಕು ಎಂದು ಹೇಳಿದೆ. ಜೊತೆಗೆ ಯಡಿಯೂರಪ್ಪನವರು ಕೋರ್ಟ್‌ಗೆ ಹಾಜರಾಗುವುದರಿಂದಲೂ ವಿನಾಯ್ತಿ ನೀಡಿದೆ. ಹೀಗೆ ಜಾಮೀನು ನೀಡುವಾಗ, ಬಂಧಿಸದೇ ವಿಚಾರಣೆ ನಡೆಸಿ ಎಂದು ಹೇಳುವಾಗ ನ್ಯಾಯಪೀಠವು, “ಬಂಧಿಸಿ ವಿಚಾರಣೆ ನಡೆಸಲು ಅವರೇನು ಎಂಕ, ನಾಣಿ, ಶೀನ ಅಲ್ಲ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು” ಎಂದು ಹೇಳುವ ಮೂಲಕ ಬಡವರಿಗೊಂದು, ಬಲ್ಲಿದರಿಗೊಂದು ನ್ಯಾಯ ಎಂದು ಸಾರಿದ್ದಾರೆ. ಈ ಪ್ರಕರಣದಲ್ಲಿ ಯಡಿಯೂರಪ್ಪ ಬಂಧನ ರದ್ದು ಕೋರಿದ್ದ ಅರ್ಜಿಯ ವಿಚಾರಣೆಯನ್ನು ಒಂದೊಂದು ತಿಂಗಳು ಮುಂದಕ್ಕೆ ಹಾಕಲಾಗುತ್ತಿದೆ. ಪೋಕ್ಸೊದಂತಹ ಪ್ರಕರಣದಲ್ಲಿ, ಅದರಲ್ಲೂ ಸಾಕಷ್ಟು ಪುರಾವೆ ಇರುವಾಗ ಈ ರೀತಿಯ ವಿಳಂಬ ಧೋರಣೆ ಅಕ್ಷಮ್ಯ. ಹಾಗಂತ ಕೋರ್ಟ್‌ಗೆ ಹೇಳುವವರಾರು?

ಪೋಕ್ಸೊ ಪ್ರಕರಣಗಳನ್ನು ತ್ವರಿತವಾಗಿ ನಡೆಸಿ ಶಿಕ್ಷೆ ವಿಧಿಸಬೇಕು ಎಂಬ ಇಚ್ಛಾಶಕ್ತಿ ಸರ್ಕಾರ, ಪೊಲೀಸ್‌ ಇಲಾಖೆ, ಜೊತೆಗೆ ನ್ಯಾಯಾಲಯಗಳಿಗೂ ಇದ್ದಂತೆ ಕಾಣುತ್ತಿಲ್ಲ. ವಿಳಂಬ ನ್ಯಾಯ ತೀರ್ಮಾನದಿಂದಾಗಿ ಪೋಕ್ಸೊ ಕಾಯ್ದೆ ಬಗ್ಗೆ ಯಾರಿಗೂ ಭಯ ಇಲ್ಲದಂತಾಗಿದೆ. ಅಪ್ರಾಪ್ತರಿಂದ ಹಿಡಿದು ಮುದುಕರವರೆಗೆ ಎಲ್ಲರಿಂದಲೂ ಮುಗ್ಧ ಕಂದಮ್ಮಗಳು ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿವೆ. ಆದರೆ, ಇಡೀ ವ್ಯವಸ್ಥೆ ಸಂತ್ರಸ್ತೆಯರ ಪರ ನಿಲ್ಲುವ ಬದಲು ಬಲಿಷ್ಠ ಆರೋಪಿಗಳ ಪರ ನಿಲ್ಲುತ್ತಿದೆಯೇ ಎಂಬ ಅನುಮಾನ ಬರುತ್ತಿದೆ.

ಅತ್ಯಾಚಾರಿಗಳು ಜಾಮೀನಿನಲ್ಲಿ ಬಿಡುಗಡೆಯಾಗಿ ಬಂದಾಗ ಅವರನ್ನು ಭರ್ಜರಿಯಾಗಿ ಸ್ವಾಗತಿಸುವ ಸಮಾಜ ನಮ್ಮದು. ಕೊಲೆಪಾತಕಿಗಳನ್ನು, ಅತ್ಯಾಚಾರಿಗಳನ್ನು ಹೂ ಹಾರ ಹಾಕಿ ಸ್ವಾಗತಿಸುವ ಗುಜರಾತ್ ಮಾದರಿ‌ ಕರ್ನಾಟಕದಲ್ಲೂ ಕಾಣುವಂತಾಯ್ತು. ಎರಡೆರಡು ಅತ್ಯಾಚಾರ ಪ್ರಕರಣ, ಏಡ್ಸ್‌ ಹನಿ ಟ್ರ್ಯಾಪ್‌, ಜಾತಿ ನಿಂದನೆಯ ಪ್ರಕರಣಗಳ ಆರೋಪಿ ಶಾಸಕ ಮುನಿರತ್ನ ಒಂದು ತಿಂಗಳ ನ್ಯಾಯಾಂಗ ಬಂಧನದ ನಂತರ ಜಾಮೀನಿನ ಮೇಲೆ ಬಿಡುಗಡೆಯಾದಾಗ ಹೂಹಾರ ಹಾಕಿ ಅದ್ಧೂರಿ ಸ್ವಾಗತ ನೀಡಲಾಯಿತು. ಇದು ನಾಗರಿಕ ಸಮಾಜವನ್ನು ಹಾಗೂ ಇಡೀ ಸ್ತ್ರೀ ಕುಲವನ್ನು ಅವಮಾನಿಸುವ ನಡೆ.

ಇದನ್ನೂ ಓದಿ ಸದ್ಗುರು ಜಗ್ಗಿ ವಾಸುದೇವ್‌ ಆಶ್ರಮದಲ್ಲಿ ಮಹಿಳೆಯರ ಅಕ್ರಮ ಬಂಧನ; ಪ್ರಕರಣ ವಜಾಗೊಳಿಸಿದ ಸುಪ್ರೀಂ

ಕೆಲವು ಪೋಕ್ಸೊ ಪ್ರಕರಣಗಳು ರಾಜಿಯಲ್ಲಿ ಮುಗಿದು ಹೋದರೆ, ಕೆಲವು ಪ್ರಕರಣಗಳ ಆರೋಪಿಗಳು ಮನೆ ಖಾಲಿ ಮಾಡಿಕೊಂಡು ನಾಪತ್ತೆಯಾಗುತ್ತಿದ್ದಾರೆ ಎಂದು ಪೊಲೀಸ್‌ ದಾಖಲೆಗಳೇ ಹೇಳುತ್ತವೆ. ಇನ್ನು ಕೆಲವು ಪ್ರಕರಣಗಳಲ್ಲಿ ಅವಮಾನಕ್ಕೆ ಅಂಜಿ, ಕೋರ್ಟ್‌ಗೆ ಅಲೆಯುವ ಸಂಕಷ್ಟದಿಂದಾಗಿ ಸಂತ್ರಸ್ತರ ಕುಟುಂಬಗಳು ಊರು ಬಿಡುತ್ತಿವೆ. ಇದು ಬಡ ವರ್ಗದ, ಕೂಲಿ ಕಾರ್ಮಿಕ ಕುಟುಂಬಗಳ ಕತೆ. ಪೊಲೀಸರು, ವಕೀಲರು ಎಲ್ಲರೂ ಸೇರಿ ರಾಜಿ ಮಾಡಿ ಕೇಸ್‌ ವಾಪಸ್‌ ಪಡೆಯುವಂತೆ ಸಂತ್ರಸ್ತರ ಕುಟುಂಬಕ್ಕೆ ಒತ್ತಡ ಹಾಕುತ್ತಾರೆ ಎಂಬ ಆರೋಪವೂ ಇದೆ. ಬೆಂಗಳೂರು ನಗರದಲ್ಲಿ 2023ರಲ್ಲಿ 594 ಪೋಕ್ಸೊ ಪ್ರಕರಣ ದಾಖಲಾಗಿತ್ತು. ಒಂದು ಪ್ರಕರಣ ರಾಜಿಯಲ್ಲಿ ಮುಗಿದಿದೆ. ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದವರು, ಅತ್ಯಾಚಾರ ಮಾಡಿದವರನ್ನು ರಾಜಿ ಮಾಡಿಸಲು ಅದೇನು ಹೊಡೆದಾಡಿಕೊಂಡ ಅಥವಾ ಕಳ್ಳತನದ ಪ್ರಕರಣವೇ?

ಅಪ್ರಾಪ್ತ ಮಕ್ಕಳನ್ನು ಈ ರೀತಿ ಲೈಂಗಿಕ ದೌರ್ಜನ್ಯದ ಬಲಿಪಶುಗಳನ್ನಾಗಿ ಮಾಡುತ್ತಿರುವ, ಅವರ ಬಾಲ್ಯ, ಯೌವ್ವನದ ಕನಸಿನ ಕತ್ತು ಹಿಸುಕುತ್ತಿರುವ ಸಮಾಜ ಸ್ವಸ್ಥ ಸಮಾಜ ಎನಿಸಿಕೊಳ್ಳುವುದಿಲ್ಲ. ಮಕ್ಕಳನ್ನು ಇಂತಹ ಕ್ರೂರ ಕೃತ್ಯದಿಂದ ರಕ್ಷಿಸುವುದು ನಾಗರಿಕ ಸಮಾಜದ ಕರ್ತವ್ಯ. ಮಕ್ಕಳ ಪೋಷಕರು, ಸರ್ಕಾರಗಳು, ಜನಪ್ರತಿನಿಧಿಗಳು, ನ್ಯಾಯಪೀಠಗಳ ಸಂಘಟಿತ ಹೊಣೆಗಾರಿಕೆಯಿಂದ ಮಾತ್ರ ಅದು ಸಾಧ್ಯ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X