ಲೈಂಗಿಕ ಕಿರುಕುಳ ತಡೆಗೆ ಆಂತರಿಕ ದೂರು ಸಮಿತಿ ರಚಿಸದಿರುವ ಕ್ರೀಡಾ ಫೆಡರೇಶನ್‌ಗಳಿಗೆ ಎನ್‌ಎಚ್‌ಆರ್‌ಸಿ ನೋಟಿಸ್ ಕಳುಹಿಸಿದೆ. ಲೈಂಗಿಕ ಕಿರುಕುಳ ತಡೆ ಕಾನೂನನ್ನು ಅನುಸರಿಸದಿರುವ ಬಗ್ಗೆ ವಿವರಣೆ ನೀಡುವಂತೆ ಕೇಳಿದೆ.
ಲೈಂಗಿಕ ಕಿರುಕುಳ ತಡೆ ಕಾನೂನನ್ನು (ಪಾಶ್) ಅನುಸರಿಸದಿರುವ ಬಗ್ಗೆ ಕ್ರೀಡಾ ಫೆಡರೇಶನ್‌ಗಳಿಗೆ ವಿವರವಾದ ವರದಿ ಸಲ್ಲಿಸಲು ನಾಲ್ಕು ವಾರಗಳನ್ನು ನೀಡಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಅಥವಾ ಎನ್‌ಎಚ್‌ಆರ್‌ಸಿ ನೋಟಿಸ್ ಕಳುಹಿಸಿದೆ.
ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ಗಳು ಪಾಶ್ ಕಾನೂನು ಅನುಸರಿಸುತ್ತಿಲ್ಲ ಎನ್ನುವ ಮಾಧ್ಯಮ ವರದಿಗಳ ನಂತರ ಗುರುವಾರ (ಏಪ್ರಿಲ್ 11) ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವಾಲಯ ಮತ್ತು ನಿಯಮ ಅನುಸರಿಸದ ಕ್ರೀಡಾ ಸಂಸ್ಥೆಗಳಿಗೆ ಎನ್‌ಎಚ್‌ಆರ್‌ಸಿ ನೋಟಿಸ್ ಕಳುಹಿಸಿದೆ.
ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೂ (ಬಿಸಿಸಿಐ) ಸೇರಿದಂತೆ 30 ಕ್ರೀಡಾ ಸಂಸ್ಥೆಗಳಿಗೆ ಎನ್‌ಎಚ್‌ಆರ್‌ಸಿ ನೋಟಿಸ್ ಕಳುಹಿಸಿದೆ. “ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿ ಪಾಶ್ ಕಾನೂನು ಅನುಸರಿಸದೆ ಇರುವುದು ಕಳವಳಕಾರಿ ಮತ್ತು ಕ್ರೀಡಾಳುಗಳ ಕಾನೂನು ಹಕ್ಕು ಮತ್ತು ಗೌರವದ ಮೇಲೆ ಪರಿಣಾಮ ಬೀರಲಿದೆ” ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ಕಳೆದ ತಿಂಗಳು ಎಂಸಿ ಮೇರಿ ಕೋಮ್ ನೇತೃತ್ವದಲ್ಲಿ ಸರ್ಕಾರ ರಚಿಸಿದ ಸಮಿತಿ ರಾಷ್ಟ್ರದ ಪ್ರಮುಖ ಕುಸ್ತಿಪಟುಗಳು ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬೃಜ್ ಭೂಷಣ್ ಶರಣ್ ಸಿಂಗ್ ಮೇಲೆ ಹೊರಿಸಿದ್ದ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿತ್ತು.
ಮೇ 4ರಂದು ಸಮಿತಿ ಸಲ್ಲಿಸಿದ ತನಿಖಾ ವರದಿ ಬಹಿರಂಗಪಡಿಸಿರುವ ಪ್ರಕಾರ, “ಕುಸ್ತಿ ಪ್ರಾಧಿಕಾರ ಮಾತ್ರವಲ್ಲ, ಎಲ್ಲಾ ಕ್ರೀಡಾ ಪ್ರಾಧಿಕಾರಗಳೂ ಪಾಶ್ ಕಾನೂನು ಅನುಸರಣೆ ಮಾಡುತ್ತಿಲ್ಲ. 2018 ಏಷ್ಯನ್ ಗೇಮ್ಸ್, 2021 ಟೋಕಿಯೋ ಒಲಿಂಪಿಕ್ಸ್ ಹಾಗೂ ಕಳೆದ ವರ್ಷದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸಿದ 30 ಕ್ರೀಡಾ ಫೆಡರೇಶನ್‌ಗಳಲ್ಲಿ 16 ಸಂಸ್ಥೆಗಳು ಮಾತ್ರವೇ ಪಾಶ್ ಅನುಸರಣೆಯಾಗಿದೆ”.
ಗುರುವಾರ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ಎನ್‌ಎಚ್‌ಆರ್‌ಸಿ ಹೇಳಿರುವಂತೆ, “ಕ್ರೀಡಾ ಪ್ರಾಧಿಕಾರಿಗಳು ಪಾಶ್ ಕಾನೂನಿನ ಉಲ್ಲಂಘನೆ ಮಾಡುತ್ತಿರುವ ಪ್ರಮಾಣ ಗಮನಿಸಿದರೆ ಕ್ರೀಡಾಳುಗಳ ಕಾನೂನು ಹಕ್ಕು ಮತ್ತು ಗೌರವಕ್ಕೆ ಬೆಲೆಯೇ ಇಲ್ಲವಾಗಿರುವುದು ಕಳವಳಕಾರಿ”.
ಹ್ಯಾಂಡ್‌ಬಾಲ್, ವಾಲಿಬಾಲ್, ಬಾಸ್ಕೆಟ್‌ಬಾಲ್, ಭಾರ ಎತ್ತುವ ಕ್ರೀಡೆ, ಯಾಚಿಂಗ್ (ವಿಹಾರ ನೌಕೆ ಸ್ಪರ್ಧೆ), ಜಿಮ್ನಾಸ್ಟಿಕ್ಸ್, ಟೇಬಲ್ ಟೆನಿಸ್, ಬಿಲಿಯರ್ಡ್ಸ್ ಮತ್ತು ಸ್ನೂಕರ್, ಕೆಯಾಕಿಂಗ್ ಮತ್ತು ಕೆನಾಯಿಂಗ್, ಜ್ಯೂಡೋ, ಟ್ರಯಾಥ್ಲಾನ್, ಕಬಡ್ಡಿ, ಬ್ಯಾಡ್ಮಿಂಟನ್ ಹಾಗೂ ಆರ್ಚರಿ ಫೆಡರೇಶನ್‌ಗಳಿಗೂ ಎನ್‌ಎಚ್‌ಆರ್‌ಸಿ ನೋಟಿಸ್ ಕಳುಹಿಸಿದೆ.
ಈ ಸುದ್ದಿ ಓದಿದ್ದೀರಾ?: ಪ್ರಭಾವೀ ಸಮುದಾಯದ ಬೆಂಬಲದಿಂದ ಮಹಿಳಾ ಸುರಕ್ಷೆಯ ಸಾಕ್ಷಿಪ್ರಜ್ಞೆ ಹತ್ತಿಕ್ಕುವ ಪ್ರಯತ್ನ
ಈ ಫೆಡರೇಶನ್‌ಗಳಿಗೆ 4 ವಾರಗಳ ಒಳಗೆ ತಮ್ಮ ಪ್ರಾಧಿಕಾರಗಳಲ್ಲಿ ಪ್ರಸ್ತಾಪಿತ ವಿಷಯದ ಬಗ್ಗೆ ಕೈಗೊಂಡಿರುವ ಕ್ರಮಗಳು, ಆಂತರಿಕ ದೂರು ಸಮಿತಿ ರಚಿಸಿರುವ ಬಗ್ಗೆ ವಿವರ ಸಲ್ಲಿಸುವಂತೆ ನೋಟಿಸ್‌ನಲ್ಲಿ ಹೇಳಲಾಗಿದೆ.
ಕಾನೂನಿನ ಪ್ರಕಾರ ಆಂತರಿಕ ದೂರು ಸಮಿತಿಯಲ್ಲಿ ಕನಿಷ್ಠ ನಾಲ್ವರು ಸದಸ್ಯರು ಇರಬೇಕಾಗುತ್ತದೆ. ಅವರಲ್ಲಿ ಅರ್ಧದಷ್ಟು ಮಂದಿ ಮಹಿಳೆಯರಾಗಿರಬೇಕು. ಅವರಲ್ಲಿ ಒಬ್ಬರು ಹೊರಗಿನ ಸದಸ್ಯರಾಗಿರಬೇಕು. ಮುಖ್ಯವಾಗಿ ಹೊರಗಿನ ಸದಸ್ಯರು ಸರ್ಕಾರೇತರ ಸಂಘಟನೆ ಅಥವಾ ಮಹಿಳಾ ಅಧಿಕಾರಕ್ಕಾಗಿ ಕೆಲಸ ಮಾಡುತ್ತಿರುವ ಸಂಘಟನೆ ಅಥವಾ ವಕೀಲರಂತಹ ಲೈಂಗಿಕ ಕಿರುಕುಳದ ಪ್ರಕರಣಕ್ಕೆ ಸಂಬಂಧಿಸಿ ಕೆಲಸ ಮಾಡಿದ ಅನುಭವವಿರುವ ವ್ಯಕ್ತಿಯಾಗಿರಬೇಕು ಎನ್ನುವ ನಿಯಮವಿದೆ.
ಮಾಧ್ಯಮಗಳ ವರದಿಯಂತೆ, ಕುಸ್ತಿ ಫೆಡರೇಶನ್ ಸೇರಿದಂತೆ ಕನಿಷ್ಠ ಐದು ಕ್ರೀಡಾ ಫೆಡರೇಶನ್‌ಗಳು ಇಂತಹ ಆಂತರಿಕ ದೂರು ಸಮಿತಿಯನ್ನು ರಚಿಸಿಲ್ಲ. ಉಳಿದ ಆರರಲ್ಲಿ ಹೊರಗಿನ ಸದಸ್ಯರಿಲ್ಲ. ಒಂದರಲ್ಲಿ ಎರಡು ಸಮಿತಿಗಳಿದ್ದರೂ, ಸ್ವತಂತ್ರ ಸದಸ್ಯರಿಲ್ಲ.