ಪ್ರಭಾವೀ ಸಮುದಾಯದ ಬೆಂಬಲದಿಂದ ಮಹಿಳಾ ಸುರಕ್ಷೆಯ ಸಾಕ್ಷಿಪ್ರಜ್ಞೆ ಹತ್ತಿಕ್ಕುವ ಪ್ರಯತ್ನ

Date:

ಬಿಜೆಪಿ ಈವರೆಗೆ ಮಹಿಳಾ ಸುರಕ್ಷೆಯ ಸಾಕ್ಷಿಪ್ರಜ್ಞೆ ಹತ್ತಿಕ್ಕಲು ಯಶಸ್ವಿಯಾಗಿದ್ದರೂ, ಅನವರತ ಪ್ರತಿಭಟನೆಯ ಕಾವು ಪರಿಸ್ಥಿತಿ ಬದಲಾಯಿಸುವ ಸಾಧ್ಯತೆಯಿದೆ. ತನ್ನದೇ ಸಂಸದನ ವಿರುದ್ಧದ ಪ್ರಕರಣದ ಅಲಕ್ಷ್ಯದಿಂದಾಗಿ ಭವಿಷ್ಯದಲ್ಲಿ ರಾಜಕೀಯ ಪರಿಣಾಮ ಎದುರಿಸಲಿದೆ.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಮಹಿಳೆಯರ ಸುರಕ್ಷತೆಯ ವಿಚಾರದಲ್ಲಿ ಅಲಕ್ಷ್ಯ ಧೋರಣೆ ದೇಶದಲ್ಲಿ ಕಂಡುಬರುತ್ತಿದೆಯೆ? ವಾರಗಳಿಂದ ಕುಸ್ತಿಪಟುಗಳು ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವುದಿರಲಿ, ಗಮನವನ್ನೂ ಹರಿಸಿಲ್ಲ. ಹಾಗಿದ್ದಲ್ಲಿ, ಮಹಿಳಾ ಸುರಕ್ಷೆಯ ಕುರಿತ ಸಾಕ್ಷಿಪ್ರಜ್ಞೆ ಜನಮಾನಸದಿಂದ ಹಿಂದಕ್ಕೆ ಸರಿದಿದೆಯೆ?

ಯುಪಿಎ ಸರ್ಕಾರದ ಅವಧಿಯಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಅತ್ಯಾಚಾರಗಳ ಬಗ್ಗೆ ದೇಶಾದ್ಯಂತ ದೊಡ್ಡ ಮಟ್ಟಿನ ಜಾಗೃತಿ ಬೆಳೆದಿತ್ತು. ನವದೆಹಲಿಯಲ್ಲಿ ನಿರ್ಭಯ ಅತ್ಯಾಚಾರ ಪ್ರಕರಣದ ನಂತರ ರಾಷ್ಟ್ರಾದ್ಯಂತ ಮಹಿಳಾ ದೌರ್ಜನ್ಯದ ವಿಚಾರ ಸೂಕ್ಷ್ಮ ಪ್ರತಿಕ್ರಿಯೆಗಳಿಗೆ ಕಾರಣವಾಗಿತ್ತು. ಆದರೆ ಕಳೆದ ಹತ್ತು ವರ್ಷಗಳಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ ಎನ್ನುವುದಕ್ಕೆ ಕುಸ್ತಿಪಟುಗಳ ಪ್ರತಿಭಟನೆಗೆ ಸಿಕ್ಕಿರುವ ಸರ್ಕಾರದ ನೀರಸ ಪ್ರತಿಕ್ರಿಯೆಯೇ ಸಾಕ್ಷಿ.

ಜನವರಿಯಲ್ಲಿ ಭಾರತದ ಕೆಲವು ಪ್ರಮುಖ ಕುಸ್ತಿಪಟುಗಳು ರಾಜಧಾನಿ ನವದೆಹಲಿಯಲ್ಲಿ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬೃಜ್ ಭೂಷಣ್ ಸಿಂಗ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಹೊರಿಸಿ, ಆತನನ್ನು ಬಂಧಿಸುವಂತೆ ಪ್ರತಿಭಟಿಸಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಲಿಂಪಿಕ್ಸ್ ಸೇರಿದಂತೆ ಅನೇಕ ಪಂದ್ಯಾವಳಿಯಲ್ಲಿ ದೇಶಕ್ಕೆ ಕೀರ್ತಿ ತಂದಿರುವ ಪ್ರಮುಖ ಕ್ರೀಡಾಳುಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಆದರೆ ಉತ್ತರ ಪ್ರದೇಶದಿಂದ ಸಂಸತ್ತಿಗೆ ಆಯ್ಕೆಯಾಗಿರುವ ಬಿಜೆಪಿಯ ಪ್ರಭಾವೀ ಸಂಸದ ಬೃಜ್ ಭೂಷಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳಲು ಮೋದಿ ಸರ್ಕಾರ ಸಿದ್ಧವಾಗಿಲ್ಲ. ಬದಲಾಗಿ ಸರ್ಕಾರ ಸಮಿತಿಯನ್ನು ರಚಿಸಿ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡಿದೆ. ಹೀಗೆ ತನಿಖೆ ತಡ ಮಾಡುತ್ತಿರುವುದರಿಂದ ಬೇಸತ್ತ ಕುಸ್ತಿಪಟುಗಳು ಮತ್ತೆ ಏಪ್ರಿಲ್‌ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಕುಳಿತಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಏಪ್ರಿಲ್ 28ರಂದು ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆಯಾದ ನಂತರ ಒಲ್ಲದ ಮನಸ್ಸಿನಿಂದ ದೆಹಲಿ ಪೊಲೀಸರು ಬೃಜ್ ಭೂಷಣ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ, ಆತನನ್ನು ಇನ್ನೂ ಬಂಧಿಸಿಲ್ಲ. ಪ್ರತಿಭಟನಾಕಾರರಲ್ಲಿ ಒಬ್ಬ ಮಹಿಳೆ ಅಪ್ರಾಪ್ತ ವಯಸ್ಸಿನಲ್ಲಿದ್ದಾಗಲೇ ಆಕೆಗೆ ಬೃಜ್ ಭೂಷಣ್ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಿರುವ ಗುರುತರ ಪ್ರಕರಣವೂ ಇದ್ದರೂ, ಪೊಲೀಸರು ಮತ್ತು ಕೇಂದ್ರ ಸರ್ಕಾರ ಜಗಜ್ಜಾಹೀರಾಗಿ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಎನ್ನುವ ಆಸಡ್ಡೆ ತೋರಿಸುತ್ತಿದೆ.

ಇತ್ತೀಚೆಗಿನ ದಿನಗಳಲ್ಲಿ ದೆಹಲಿ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ್ ಮಾಡಿದ, ಸರ್ಕಾರಿ ವಿರೋಧಿ ಹೇಳಿಕೆಗಳನ್ನು ನೀಡಿದ ವ್ಯಕ್ತಿಗಳನ್ನು ಎಫ್‌ಐಆರ್ ದಾಖಲಾಗುತ್ತಲೇ ಬಂಧಿಸಿ ತಿಂಗಳುಗಟ್ಟಲೆ ಜೈಲಿನಲ್ಲಿರಿಸಿರುವುದು ನಮ್ಮ ಕಣ್ಣ ಮುಂದೆಯೇ ಇದೆ. ಆದರೆ, ದೇಶದ ಪ್ರಮುಖ ಕ್ರೀಡಾಪುಟಗಳೇ ಧರಣಿ ಕುಳಿತು ಅಪ್ರಾಪ್ತ ವಯಸ್ಸಿನ ಕ್ರೀಡಾಳು ಮೇಲೆ ಲೈಂಗಿಕ ಕಿರುಕುಳ, ಮತ್ತಿತರ ಭ್ರಷ್ಟಾಚಾರಗಳ ಆರೋಪ ಹೊರಿಸಿರುವ ನಂತರವೂ ಕುಸ್ತಿ ಫೆಡರೇಶನ್ ಅಧ್ಯಕ್ಷ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಮಾತ್ರವಲ್ಲ, ಆತ ಕುಸ್ತಿ ಫೆಡರೇಶನ್ ಅಧ್ಯಕ್ಷ ಸ್ಥಾನದಿಂದಲೂ ರಾಜೀನಾಮೆ ನೀಡುವುದಿಲ್ಲ ಎಂದು ಬಹಿರಂಗವಾಗಿ ಬೆದರಿಸುತ್ತಿದ್ದಾರೆ.

ವಿರೋಧ ಪಕ್ಷಗಳು, ರೈತ ಸಂಘಟನೆಗಳು, ಖಾಪ್ ಪಂಚಾಯತ್‌ಗಳು, ಒಲಿಂಪಿಕ್ಸ್ ಸಮಿತಿ ಹಾಗೂ ದೇಶದ ಅನೇಕ ಕ್ರೀಡಾಳುಗಳು ಬಹಿರಂಗವಾಗಿ ಪ್ರತಿಭಟನಾಕಾರರಿಗೆ ಬೆಂಬಲ ನೀಡಿದರೂ ಸರ್ಕಾರ ಹೀಗೆ ಅಲಕ್ಷ್ಯ ಧೋರಣೆ ತೋರಲು ಸಾಧ್ಯವಾಗಿದ್ದು ಹೇಗೆ? ಭಾರತದಲ್ಲಿ ಮಹಿಳಾ ಸುರಕ್ಷೆಯ ಸಾಕ್ಷಿಪ್ರಜ್ಞೆ ಮತ್ತೆ ಹಿನ್ನೆಲೆಗೆ ಸರಿದಿದೆ, ರಾಜಕೀಯವಾಗಿ- ಚುನಾವಣೆಗಳಲ್ಲಿ ಪ್ರಾಮುಖ್ಯತೆ ಪಡೆಯದ ವಿಷಯವಾಗಿ ಹೋಗಿದೆ ಎನ್ನುವುದೊಂದೇ ಸಿಗುವ ಉತ್ತರ. ದೇಶದ ಮತದಾರರಲ್ಲಿ ಅರ್ಧದಷ್ಟು ಮಹಿಳೆಯರೇ ಇದ್ದರೂ, ಮಹಿಳಾ ಸುರಕ್ಷೆ ಚುನಾವಣಾ ವಿಷಯವಾಗುವುದು ಅತಿಕಡಿಮೆ. ಬದಲಾಗಿ ಆರ್ಥಿಕ ವಿಚಾರಗಳು, ಹಣದುಬ್ಬರ ಮತ್ತು ಸಮಾಜ ಕಲ್ಯಾಣದ ಜೊತೆಗೆ ಸಮುದಾಯದ ಗುರುತು, ಅಂದರೆ ಜಾತಿ ಮತ್ತು ಧರ್ಮಗಳೇ ಭಾರತೀಯ ಚುನಾವಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಬಿಜೆಪಿ ಸರ್ಕಾರಗಳು ಸಾರ್ವಜನಿಕ ಭಾವನೆಗಳಿಗೆ ಕಿವಿಗೊಡುವುದು ಅತಿಕಡಿಮೆ. ಚುನಾವಣೆಯಲ್ಲಿ ತಮಗೆ ನಷ್ಟವಾಗುತ್ತದೆ ಎನ್ನುವ ಸಂದರ್ಭ ಬಂದಾಗ ಮಾತ್ರವೇ ಕಠಿಣ ಕ್ರಮ ಕೈಗೊಳ್ಳುವುದು ಬಿಜೆಪಿಯ ಆಡಳಿತದಲ್ಲಿ ಸ್ಪಷ್ಟವಾಗಿ ಕಂಡುಬರುವ ಅಂಶ. ಕ್ರೀಡಾಳುಗಳು, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಹೆಮ್ಮೆ ತಂದಿದ್ದರೂ, ಪ್ರತಿಭಟನೆ ಚುನಾವಣಾ ನಷ್ಟ ತರುವಷ್ಟು ತೀವ್ರತಮವಾಗಿಲ್ಲ. ಬದಲಾಗಿ ಬಾಹುಬಲಿ ಅಥವಾ ಗ್ಯಾಂಗ್‌ಸ್ಟರ್ ಎಂದೇ ಕರೆಸಿಕೊಳ್ಳುವ ಕುಸ್ತಿ ಫೆಡರೇಶನ್ ಅಧ್ಯಕ್ಷ ಬೃಜ್ ಭೂಷಣ್ ಸಿಂಗ್‌ನಿಗೆ ದಾವೂದ್ ಇಬ್ರಾಹಿಂ ಜೊತೆಗೂ ಕೆಲಸ ಮಾಡಿದ್ದಾನೆನ್ನುವ ಕುಖ್ಯಾತಿ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಕುಖ್ಯಾತಿ ನಂತರವೇ ಆತ ಉತ್ತರ ಪ್ರದೇಶದ ಪ್ರಭಾವೀ ರಾಜಕೀಯ ಜಾಲ ಬೆಳೆಸಿಕೊಂಡಿದ್ದಾನೆ. ರಜಪೂತ ಸಮುದಾಯದ ನಡುವೆ ಈತನ ಪ್ರಭಾವ ಅತೀ ಹೆಚ್ಚಾಗಿದೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗ ರಜಪೂತ ಸಮುದಾಯದ ಬೆಂಬಲ ಕಳೆದುಕೊಳ್ಳುವುದು ಬಿಜೆಪಿಗೆ ಬೇಕಿಲ್ಲ. ಇದೇ ಬಾಹುಬಲಿಯ ಮೇಲೆ ಕ್ರಮ ಕೈಗೊಳ್ಳದಿರಲು ಮುಖ್ಯ ಕಾರಣ.

ಇತ್ತೀಚೆಗಿನ ದಿನಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಮಹಿಳಾ ಸುರಕ್ಷೆ ಕಡೆಗಣಿಸಿ ಕುಖ್ಯಾತ ಆರೋಪಿಗಳ ಪರವಾಗಿ ನಿಂತಿರುವ ಅನೇಕ ಸಂದರ್ಭಗಳಿವೆ. 2002ರ ಗುಜರಾತ್ ಗಲಭೆಯಲ್ಲಿ ಅತ್ಯಾಚಾರದ ಆರೋಪ ಹೊತ್ತಿರುವ ಅನೇಕ ಕುಖ್ಯಾತರನ್ನು ಹಿಂದೂ ಮತ ಬ್ಯಾಂಕ್‌ಗಾಗಿ ಬಿಡುಗಡೆಗೊಳಿಸಲಾಗಿದೆ. ಸಾಮೂಹಿಕ ಅತ್ಯಾಚಾರದ ಆರೋಪಿಗಳು ಕಳೆದ ವರ್ಷ ಜೈಲಿನಿಂದ ಖುಲಾಸೆಗೊಳ್ಳಲು ಗುಜರಾತ್‌ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ಬೆಂಬಲವೇ ಕಾರಣ. ಉನ್ನಾವೋ ಅತ್ಯಾಚಾರ ಪ್ರಕರಣ, ಹತ್ರಾಸ್ ಅತ್ಯಾಚಾರ ಪ್ರಕರಣಗಳೂ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತಂದಿಲ್ಲ. ಮಹಿಳಾ ಸುರಕ್ಷೆಯ ಬಗ್ಗೆ ಇಂತಹ ಘೋರ ನಿರ್ಲಕ್ಷ್ಯ ದೇಶದ ಸಾಕ್ಷಿಪ್ರಜ್ಞೆ ಜಾಗೃತಿಗೊಳಿಸದೆ ಇರಲು ಕಾರಣವೇನು?

ದೆಹಲಿ ಪೊಲೀಸರಿಂದ ಪ್ರತಿಭಟನೆ ಸ್ಥಗಿತಗೊಳಿಸಲು ತೀವ್ರ ಒತ್ತಡ ಎದುರಿಸುತ್ತಿರುವ ಪ್ರತಿಭಟನಾಕಾರರಿಗೆ ಬೆಂಬಲ ನೀಡಲು ಅನೇಕ ಸಮುದಾಯಗಳು ಮುಂದೆ ಬಂದಿವೆ. ಹರಿಯಾಣದ ಪ್ರಭಾವಿ ಜಾಟ್ ಸಮುದಾಯದ ಖಾಪ್ ಪಂಚಾಯತ್‌ಗಳು ಇದೀಗ ಕುಸ್ತಿಪಟುಗಳ ಜೊತೆಗೆ ಪ್ರತಿಭಟನೆಗೆ ಕುಳಿತಿದ್ದಾರೆ. ರೈತ ಸಂಘಟನೆಗಳೂ ಪ್ರತಿಭಟನೆಗೆ ಬೆಂಬಲ ಸೂಚಿಸಿವೆ. ಹೀಗಾಗಿ, ದೇಶದಲ್ಲಿ ಮಹಿಳಾ ಸುರಕ್ಷತೆ ಕುರಿತ ಜಾಗೃತಿಗಿಂತ ಹೆಚ್ಚಾಗಿ ಸಮುದಾಯಗಳ ಬೆಂಬಲ ರಾಜಕೀಯವಾಗಿ ಬದಲಾವಣೆ ತರುತ್ತದೆ ಎನ್ನುವುದು ಖಚಿತವಾಗುತ್ತದೆ.

ಈ ಸುದ್ದಿ ಓದಿದ್ದೀರಾ?: ಪ್ರತಿಭಟನಾನಿರತ ಕುಸ್ತಿಪಟುಗಳಿಗೆ ರೈತ ಸಂಘಟನೆಗಳ ಬೆಂಬಲ; ಬ್ರಿಜ್‌ ಭೂಷಣ್‌ ಬಂಧನಕ್ಕೆ ಆಗ್ರಹ

ಕೇಂದ್ರ ಸರ್ಕಾರ ಕಾನೂನು ಬಳಸಿ ಮಾಧ್ಯಮಗಳನ್ನು ನಿಯಂತ್ರಿಸುತ್ತಿರುವುದು ಮತ್ತು ಕೆಲವು ಮಾಧ್ಯಮಗಳು ಬಿಜೆಪಿಯ ಪರವಾಗಿಯೇ ಕೆಲಸ ಮಾಡುತ್ತಿರುವುದು ಮೋದಿ ಸರ್ಕಾರಕ್ಕೆ ವರವಾಗಿ ಪರಿಣಮಿಸಿದೆ. ಕುಸ್ತಿಪಟುಗಳು ರಾಜಧಾನಿಯಲ್ಲಿ ವಾರಗಟ್ಟಲೆ ಕುಳಿತಿದ್ದರೂ ಮಾಧ್ಯಮಗಳು ತೀವ್ರ ಪ್ರಮಾಣದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರದಿರಲು ಕಾನೂನು ತೊಡಕುಗಳನ್ನು ಎದುರಿಸುವ ಆತಂಕವೇ ಮುಖ್ಯ ಕಾರಣ. ರಾಷ್ಟ್ರೀಯ ಮಾಧ್ಯಮಗಳಲ್ಲಿ ಕಾರ್ಯನಿರತ ಬಿಜೆಪಿ ಪರವಾಗಿರುವ ಮೇಲ್ವರ್ಗದ ಸಮುದಾಯದವರು ಮೋದಿ ಸರ್ಕಾರಕ್ಕೆ ಬಲವಾದ ಬೆಂಬಲ ತೋರಿಸುವುದು ಮತ್ತೊಂದು ಪ್ರಮುಖ ವಿದ್ಯಮಾನ. ಕುಸ್ತಿಪಟುಗಳ ಪ್ರತಿಭಟನೆ ಅಥವಾ ರೈತ ಪ್ರತಿಭಟನೆಯಂತಹ ಅಡಚಣೆಗಳನ್ನು ತಿರುಚಿ ಕೇಂದ್ರ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗದಂತೆ ಮಾಡುವ ಕ್ಷಮತೆಯನ್ನೂ ಈ ಮೇಲ್ವರ್ಗದ ಸಮುದಾಯ ಹೊಂದಿವೆ. ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಮಂದಿ ಅಪರಾಧಿಗಳು ಬಿಡುಗಡೆಯಾದಾಗ ಕೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ದು ಪ್ರತಿಭಟಿಸಬೇಕಾಗಿದ್ದ ಮಾಧ್ಯಮಗಳು ತಣ್ಣನೆ ಅಪರಾಧಿಗಳನ್ನು ಸ್ವಾಗತಿಸಲು ಇಂತಹ ಮೇಲ್ವರ್ಗದ ಮಾಧ್ಯಮ ವೃತ್ತಿಪರರ ಬೆಂಬಲವೇ ಮುಖ್ಯ ಕಾರಣ.

ಆದರೆ ಕಾಂಗ್ರೆಸ್ ನೇತೃತ್ವದಲ್ಲಿ ಯುಪಿಎ ಸರ್ಕಾರದ ಸಂದರ್ಭದಲ್ಲಿ ಮಹಿಳಾ ದೌರ್ಜನ್ಯದ ಬಗ್ಗೆ ಇಂತಹ ಅಲಕ್ಷ್ಯ ಧೋರಣೆ ಇರಲಿಲ್ಲ. ಆ ಸಂದರ್ಭದಲ್ಲಿ ಮಹಿಳಾ ಸುರಕ್ಷೆ ರಾಜಕೀಯವಾಗಿ ಪ್ರಬಲ ವಿಚಾರವಾಗಿತ್ತು. ಮನ್‌ಮೋಹನ್ ಸಿಂಗ್ ನೇತೃತ್ವದ ಸರ್ಕಾರ 2012 ದೆಹಲಿ ಸಾಮೂಹಿಕ ಅತ್ಯಾಚಾರದ ಸಂದರ್ಭದಲ್ಲಿ ಕ್ಷಿಪ್ರ ತನಿಖೆ, ಸಂತ್ರಸ್ತೆಗೆ ನೆರವು ನೀಡಿದ ಹೊರತಾಗಿಯೂ ರಾಜಕೀಯವಾಗಿ ದೊಡ್ಡ ವಿಚಾರವೆಂಬ ರೀತಿಯಲ್ಲಿ ಚರ್ಚೆಯಾಗಿತ್ತು. ದೇಶಾದ್ಯಂತ ಮಹಿಳಾ ಸುರಕ್ಷೆಯ ಪ್ರಜ್ಞೆಯನ್ನು ಬೆಳೆಸಿತ್ತು. ದೇಶದ ಸಾಕ್ಷಿಪ್ರಜ್ಞೆ ಬಡಿದೆಬ್ಬಿಸಿತ್ತು. ಆದರೆ ಇದಕ್ಕೆ ವಿರುದ್ಧವಾಗಿ 2020ರಲ್ಲಿ ಹತ್ರಾಸ್ ಪ್ರಕರಣದಲ್ಲಿ ಸರ್ಕಾರ ಸತ್ಯ ಮುಚ್ಚಿಡಲು ಪ್ರಯತ್ನಿಸಿದರೂ ಮಾಧ್ಯಮಗಳಿಂದ ದೊಡ್ಡ ಪ್ರತಿಕ್ರಿಯೆ ಸಿಗಲಿಲ್ಲ. ಸಾಮಾಜಿಕ ಕಾರ್ಯಕರ್ತರ ಪ್ರತಿಭಟನೆಯನ್ನು ಕಾನೂನು ಬಳಕೆ ಮತ್ತಿತರ ರೀತಿಯಲ್ಲಿ ಹತ್ತಿಕ್ಕಲಾಯಿತು. ವರದಿ ಮಾಡಲೆಂದು ಹೋದ ಮಾಧ್ಯಮ ವೃತ್ತಿಪರನನ್ನೂ ವರ್ಷಾನುಗಟ್ಟಲೆ ಕ್ಷುಲ್ಲಕ ಆರೋಪದಲ್ಲಿ ಜೈಲಿಗೆ ತಳ್ಳಲಾಗಿದೆ. 2012ರ ನಿರ್ಭಯ ಪ್ರಕರಣದಲ್ಲಿ ದೆಹಲಿ ದೊಡ್ಡ ಪ್ರತಿಭಟನೆಗೆ ಸಾಕ್ಷಿಯಾದರೆ, 2020ರಲ್ಲಿ ದೆಹಲಿ ಪೊಲೀಸರು ಹತ್ರಾಸ್ ಪ್ರಕರಣದಲ್ಲಿ ರಾಜಧಾನಿಯಲ್ಲಿ ಪ್ರತಿಭಟನೆಯೇ ನಡೆಯದಂತೆ ತಡೆದರು.

ಪ್ರಭಾವೀ ಮೇಲ್ವರ್ಗ ಸಮುದಾಯದ ಬೆಂಬಲ, ಬಲವಾದ ಮಾಧ್ಯಮ ನಿಯಂತ್ರಣ ಮತ್ತು ಬೆಂಬಲದಿಂದ ಬಿಜೆಪಿ ಮಹಿಳಾ ಸುರಕ್ಷೆಯ ವಿಚಾರಗಳು ಮುನ್ನೆಲೆಗೆ ಬರದಂತೆ ತಡೆಯುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಕಾಂಗ್ರೆಸ್ ಅಧಿಕಾರದಲ್ಲಿ ಬೆಳೆದಿದ್ದ ಮಹಿಳಾ ಸುರಕ್ಷೆಯ ಜಾಗೃತಿಯನ್ನು ನಿಧಾನವಾಗಿ ತೆರೆಮರೆಗೆ ಸರಿಸಲಾಗುತ್ತಿದೆ. ಆದರೆ ಕುಸ್ತಿಪಟುಗಳು ಒತ್ತಡಗಳ ನಡುವೆಯೂ ಪ್ರತಿಭಟನೆ ಮುಂದುವರಿಸಿದ್ದಾರೆ. ರೈತ ಸಂಘಟನೆಗಳು ಮತ್ತು ಖಾಪ್ ಸಮುದಾಯದ ಬೆಂಬಲ ಅವರ ಪ್ರತಿಭಟನೆಗೆ ಇನ್ನಷ್ಟು ಒತ್ತು ನೀಡಿದೆ. ವಿರೋಧ ಪಕ್ಷಗಳು ಧ್ವನಿ ಎತ್ತಿವೆ. ಹೀಗಾಗಿ ಬಿಜೆಪಿ ಈವರೆಗೆ ಮಹಿಳಾ ಧ್ವನಿಯನ್ನು ಹತ್ತಿಕ್ಕಲು ಯಶಸ್ವಿಯಾಗಿದ್ದರೂ, ಅನವರತ ಪ್ರತಿಭಟನೆಯ ಕಾವು ಪರಿಸ್ಥಿತಿ ಬದಲಾಯಿಸುವ ಸಾಧ್ಯತೆಯಿದೆ. ಸಮುದಾಯಗಳ ಬೆಂಬಲ ಪ್ರತಿಭಟನೆಗೆ ಬಲ ನೀಡಿದಲ್ಲಿ, ತನ್ನದೇ ಸಂಸದನ ವಿರುದ್ಧದ ಪ್ರಕರಣದಲ್ಲಿ ಇಂತಹ ಅಲಕ್ಷ್ಯದಿಂದಾಗಿ ಭವಿಷ್ಯದಲ್ಲಿ ಬಿಜೆಪಿ ರಾಜಕೀಯ ಪರಿಣಾಮ ಎದುರಿಸಲೇಬೇಕಾಗಿ ಬರಬಹುದು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಸರ್ಕಾರಕ್ಕೆ ಜಯಲಲಿತಾ ಚಿನ್ನಾಭರಣ: ಹಸ್ತಾಂತರ ಪ್ರಕ್ರಿಯೆಗೆ ನೀಡಿದ್ದ ತಡೆ ವಿಸ್ತರಿಸಿದ ಹೈಕೋರ್ಟ್‌

ಬೆಂಗಳೂರಿನ ವಿಶೇಷ ಸಿಬಿಐ ನ್ಯಾಯಾಲಯದ ಸುಪರ್ದಿಯಲ್ಲಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ...

ಕುಮಾರಸ್ವಾಮಿ ನನಗೆ ಮರ್ಯಾದೆ ಕೊಟ್ಟರೆ, ನಾನೂ ಕೂಡ ಮರ್ಯಾದೆ ಕೊಡುವೆ: ಡಿ.ಕೆ. ಶಿವಕುಮಾರ್

"ನಾನು ಕುಮಾರಸ್ವಾಮಿ ಅವರಿಗೆ ವೈಯಕ್ತಿಕವಾಗಿ ಗೌರವ ನೀಡುತ್ತೇನೆ. ಈಗಲೂ ನೀಡುತ್ತಿದ್ದೇನೆ, ಮುಂದೆಯೂ...

ಯುಪಿಎಸ್‌ಸಿ ಫಲಿತಾಂಶ ಪ್ರಕಟ: ಆದಿತ್ಯ ಶ್ರೀವಾಸ್ತವ ಮೊದಲ ರ‍್ಯಾಂಕ್‌, 1016 ಮಂದಿ ತೇರ್ಗಡೆ

ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) 2023ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶಗಳನ್ನು...

‘ನಾನು ಭಯೋತ್ಪಾದಕನಲ್ಲ’; ಜೈಲಿನಿಂದ ಅರವಿಂದ್ ಕೇಜ್ರಿವಾಲ್ ಸಂದೇಶ

ಅಬಕಾರಿ ನೀತಿಯ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ...