ಸರ್ವ ಸಮಾನತೆಯನ್ನು ಸಾರಿದ, ಮಹಾ ಮಾನವತವಾದಿ ಬಸವಣ್ಣನ ವಿಚಾರಗಳನ್ನು ಹಾಳುಗೆಡವಲೆಂದು ಮತ್ತು ಶರಣ ಸಂಸ್ಕೃತಿಯನ್ನು ನಾಶಗೊಳಿಸಲು ಕೆಲವರು ಕುತಂತ್ರಗಳನ್ನು ಮಾಡುತ್ತಿದ್ದಾರೆ. ಸಾಂಸ್ಕೃತಿಕ ನಾಯಕ ಘೋಷಣೆಯಾದ ತದನಂತರ ಬಸವ ವಿರೋಧಿಯಾಗಿ ‘ವಚನ ದರ್ಶನ’ ಪುಸ್ತಕ ಬಿಡುಗಡೆಗೊಂಡಿದೆ. ಈ ನಡುವೆಯೇ ‘ಶರಣರ ಶಕ್ತಿ’ ಎಂಬಿ ಸಿನಿಮಾ ಪ್ರದರ್ಶನಕ್ಕೂ ಸಂಘಪರಿವಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಈ ದಿನ.ಕಾಮ್ ತಂಡವು ಬಸವಣ್ಣ ಜನ್ಮಸ್ಥಳವಾದ ಇಂಗಳೇಶ್ವರಕ್ಕೆ ತೆರಳಿ, ಅಲ್ಲಿನ ಸ್ಥಳೀಯರು ಹಾಗೂ ಬಸವ ಅನುಯಾಯಿಗಳನ್ನು ಮಾತನಾಡಿಸಿತು.
ಬಸವಣ್ಣ ಸಮಾಜೋ ಧಾರ್ಮಿಕ ಚಳುವಳಿಯ ಮೂಲಕ ಎಲ್ಲ ಕಾಯಕ ಜೀವಿಗಳನ್ನು ಒಂದೆಡೆ ಸೇರಿಸುವ ಕಾರ್ಯಕ್ಕೆ ಮುಂದಾದರು. ಅದರಲ್ಲಿ ಯಶಸ್ವಿಯನ್ನು ಕಂಡರು. ಬಸವಣ್ಣ ಜನಿಸಿದ್ದು ತಮ್ಮ ತಾಯಿಯ ತವರುಮನೆ ಇಂಗಳೇಶ್ವರದಲ್ಲಿ. ಅವರ ತಂದೆಯ ಊರು ವಿಜಯಪುರ(ಬಿಜಾಪುರ) ಜಿಲ್ಲೆಯ ಬಸವನ ಬಾಗೇವಾಡಿ.
ಈ ವೇಳೆ ಇಂಗಳೇಶ್ವರದಲ್ಲಿನ ಅಭಿವೃದ್ಧಿ ಕಾರ್ಯ, ಅಲ್ಲಿನ ಸಮಸ್ಯೆಗಳ ಬಗ್ಗೆ ಹಾಗೂ ಬಸವ ತತ್ವವನ್ನು ತಿರುಚಲು ಆರ್‌ಎಸ್‌ಎಸ್, ಸಂಘಪರಿವಾರ ನಡೆಸುತ್ತಿರುವ ಕಾರ್ಯದ ಬಗ್ಗೆ ಜನರು ನಮ್ಮೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ.
ಇಂಗಳೇಶ್ವರದಲ್ಲಿ ಮುಂದಿನ ಪೀಳಿಗೆಗೆ ಇತಿಹಾಸದ ಪರಿಚಯವಾಗಲಿ ಎಂಬ ಉದ್ದೇಶದಿಂದ ವಚನ ಮಂಟಪ ಮಾದಲಾಂಬಿಕೆ ಸ್ಮಾರಕ ಭವನ ಕಟ್ಟಿಸಲಾಗಿದೆ. ಆದರೆ, ಸ್ಮಾರಕ ಭವನಕ್ಕೆ ಹೋಗಲು ಇರುವ ರಸ್ತೆಯಲ್ಲಿ ಗಲೀಜು ನೀರು ನಿಂತು ವಾಹನಗಳು ಸಂಚರಿಸಲು ಕೂಡ ಅಸಾಧ್ಯ ಎಂಬಂತಾಗಿದೆ.
ಬಸವಣ್ಣ ಜನ್ಮಸ್ಥಳದಲ್ಲಿ ‘ಸ್ಮಾರಕ ಭವನ ಇದೆ’ ಎಂದು ಗುರುತಿಸಲು ಒಂದು ಬೋರ್ಡ್ ಇದೆ. ಆದರೂ ಆ ಫಲಕದಲ್ಲಿ ಸರಿಯಾಗಿ ಇನ್ನೂ ಕೂಡ ಬಣ್ಣ ಬಳಿದಿಲ್ಲ, ಜೊತೆಗೆ ಹೆಸರು ಕೂಡ ಬರಿಸಿಲ್ಲ.
ಈ ಕುರಿತು ಸ್ಥಳೀಯರು ಹಲವು ಬಾರಿ ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದರೂ ಕೂಡ ಪ್ರಯೋಜನವಾಗಿಲ್ಲ ಎಂದು ಅಲವತ್ತುಕೊಂಡರು. ‘ಬಸವಣ್ಣ ಹುಟ್ಟಿದ ಮನೆ ಎನ್ನುತ್ತಾರೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಸರಿಯಾದ ರಸ್ತೆಯ ವ್ಯವಸ್ಥೆ ಇಲ್ಲ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಇನ್ನು ಬಾಗೇವಾಡಿಯಲ್ಲಿ ಬಸವಣ್ಣ ಸ್ಮಾರಕ ಭವನ, ಪುತ್ತಳಿ, ಬಸವೇಶ್ವರ ದೇವಾಲಯ, ಗ್ರಂಥಾಲಯ ಇತ್ಯಾದಿಗಳನ್ನು ಕಟ್ಟಿಸಿ ಅಭಿವೃದ್ಧಿಗೊಳಿಸಲಾಗಿದೆ.
“ಬಸವಣ್ಣನವರ ಹೆಸರಿನ ಮೇಲೆ ಶಾಲೆಗಳು, ಗ್ರಂಥಾಲಯಗಳು ಹೆಚ್ಚಾಗಬೇಕು. ಪಟ್ಟಣದಲ್ಲಿ ವಿವಿಧ ಬಡಾವಣೆ, ರಸ್ತೆಗಳಿಗೆ ಬಸವಾದಿ ಶರಣರ ನಾಮಕರಣವಾಗಬೇಕು. ಪ್ರವಾಸಿಗರ ಸಂಖ್ಯೆ ಹೆಚ್ಚೆಚ್ಚು ಬರುವಂತೆ ಹೆಚ್ಚು ಅಭಿವೃದ್ಧಿ ಕಾರ್ಯಗಳಾಗಬೇಕು. ಏಕೆಂದರೆ ಬಸವಣ್ಣನವರ ವಿಚಾರಗಳು ಎಲ್ಲ ಜಾತಿ ಜನಾಂಗಗಳನ್ನು ಒಗ್ಗೂಡಿಸಿಕೊಂಡು ಹೋಗುವ ಸಮಾನತೆಯನ್ನು ಸಾರುವ ಸಂದೇಶಗಳಾಗಿವೆ. ಇತ್ತೀಚಿನ ದಿನಮಾನಗಳಲ್ಲಿ ಕೋಮುಗಲಭೆಗಳು ಹೆಚ್ಚಾಗುತ್ತಿವೆ. ಕೆಲವು ರಾಜಕೀಯ ಮುಖಂಡರುಗಳು ಅವರ ರಾಜಕೀಯ ಲಾಭಕ್ಕಾಗಿ ಜನರ ಮಧ್ಯೆ ಕೋಮುದ್ವೇಷ ಹಬ್ಬಿಸುತ್ತಿದ್ದಾರೆ. ಇದಕ್ಕೆಲ್ಲ ಬಸವಣ್ಣನ ವಿಚಾರಗಳು ಔಷಧಿಯಾಗಿ ಪರಿಣಮಿಸುತ್ತವೆ” ಎಂದು ಉತ್ತರ ಕರ್ನಾಟಕ ವಲಯದ ಟಿಪ್ಪು ಕ್ರಾಂತಿ ಸೇನೆ ಅಧ್ಯಕ್ಷ ಖಾಜಿಂದಾರ್ ನದಾಫ್ ಹೇಳುತ್ತಾರೆ.

“ಸಾಂಸ್ಕೃತಿಕ ನಾಯಕ ಘೋಷಣೆಯು ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಬಾರದು. ಬಸವಣ್ಣನ ವಿಚಾರಗಳು ಕಾರ್ಯಗತದಲ್ಲಿ ಬರಬೇಕು. ಅವರ ವಿಚಾರಗಳನ್ನು ಇಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು. ವಿಶೇಷವಾಗಿ ರಾಜಕಾರಣಿಗಳು ಅಳವಡಿಸಿಕೊಳ್ಳಬೇಕು” ಎಂದು ಕೋಮು ಸೌಹಾರ್ದ ವೇದಿಕೆಯ ವಿಜಯಪುರ ಜಿಲ್ಲಾಧ್ಯಕ್ಷ ಚಂದ್ರಶೇಖರ ಗಂಟಪುಗೊಳ್ ಹೇಳಿದರು.
“ಶತಮಾನಗಳಿಂದಲೂ ಶೋಷಿತ ಸಮುದಾಯಗಳ ಮೇಲೆ ವೈದಿಕರ ದೌರ್ಜನ್ಯ ನಡೆಯುತ್ತಲೇ ಬಂದಿದೆ. ಈಗಲೂ ಸಹಿತ ಎಲ್ಲರನ್ನೂ ಒಳಗೊಳ್ಳುವ ಬಸವ ಸಂಸ್ಕೃತಿಯನ್ನು ಹಾಳುಗೆಡವಲು ಪಟ್ಟಭದ್ರ ಹಿತಾಸಕ್ತಿಗಳು ನಾನಾ ರೀತಿಯ ಕುತಂತ್ರದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ ಅದ್ಯಾವುದೂ ಈಡೇರುವುದಿಲ್ಲ. 900 ವರ್ಷಗಳಿಂದ ಬಸವ ಸಂಸ್ಕೃತಿಯನ್ನು ಅಪ್ಪಿಕೊಂಡ ಜನರು ಇಂದಿಗೂ ಇದ್ದಾರೆ. ಆದ್ದರಿಂದ, ಕೋಮುವಾದಿಗಳ ಆಟ ಇನ್ನುಮುಂದೆ ನಡೆಯುವುದಿಲ್ಲ” ಎನ್ನುತ್ತಾರೆ ಬಸವಪರ ಚಿಂತಕ ಜೆ ಎಸ್ ಪಾಟೀಲ.
“ವಚನದರ್ಶನ ಪುಸ್ತಕದ ಮೂಲಕ ಶರಣ ಸಂಸ್ಕೃತಿಯನ್ನು ಸಂಪೂರ್ಣ ನಾಶ ಮಾಡಲೆಂದು ವೈದಿಕರು ಮುಂದಾಗಿದ್ದಾರೆ. ಆ ಕುತಂತ್ರಗಳ ವಿರುದ್ಧ ನಾವೆಲ್ಲ ಎದ್ದು ನಿಲ್ಲಬೇಕಿದೆ. ಎಲ್ಲ ಶೋಷಿತ ಸಮುದಾಯಗಳು ಗಟ್ಟಿಯಾಗಬೇಕಿದೆ. ದಾರ್ಶನಿಕರು, ವೈಚಾರಿಕ ಪ್ರಜ್ಞೆಯುಳ್ಳ ಚಿಂತಕರು, ಕುವೆಂಪು, ಕನಕ, ಸೂಫಿಗಳು, ವಿಶೇಷವಾಗಿ ಶರೀಫರು ನಡೆದಾಡಿದ ನೆಲದಲ್ಲಿ ಕೋಮುವಾದಕ್ಕೆ ಅವಕಾಶ ನೀಡಬಾರದು. ಬಸವ ದ್ರೋಹಿಗಳು ಅದೆಷ್ಟೇ ಪ್ರಯತ್ನ ನಡೆಸಿದರೂ ಬಸವಣ್ಣ ಸಾಂಸ್ಕೃತಿಕ ನಾಯಕ ಅನ್ನುವುದನ್ನು ಜನಮಾನಸದಿಂದ ಯಾವತ್ತಿಗೂ ತೆಗೆದುಹಾಕಲು ಸಾಧ್ಯವಿಲ್ಲ. ಮತ್ತು ಈ ಘೋಷಣೆಯು ಮನುವಾದಿಗಳಲ್ಲಿ ತಳಮಳ ಉಂಟುಮಾಡಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಸವಣ್ಣ 12ನೇ ಶತಮಾನದಲ್ಲಿ ಕಾಯಕ ತತ್ವವನ್ನ ಜಾರಿಗೆ ತಂದು ಕಾಯಕವೇ ಕೈಲಾಸ ಎಂಬ ಸಂದೇಶದಂತೆ ಬದುಕಿದರು. ಅದರಂತೆ ಬಾಗೇವಾಡಿ ಪಟ್ಟಣದ ಬಸವ ವೃತ್ತದಲ್ಲಿ ದಿನ ಬೆಳಗಾದರೆ ಎಲ್ಲ ಕಾಯಕ ಜೀವಿಗಳು ಒಗ್ಗೂಡಿರುತ್ತಾರೆ. ಬಸವಣ್ಣ ವೇದ, ವೈದಿಕ, ಕರ್ಮಸಿದ್ದಾಂತ ವಿರುದ್ಧ ಮತ್ತು ಜೀವಪರ ಚಿಂತನೆಗಳನ್ನು ಸಾರಿದ್ದರೂ ಸದ್ಯದ ಪರಿಸ್ಥಿತಿ ಹಾಗಿಲ್ಲ. ಬಸವಣ್ಣನವರನ್ನೇ ಬಳಸಿಕೊಂಡು ಬಹುತೇರು ವೈದಿಕ ಆಚರಣೆಗಳನ್ನು ಮುಂದುವರೆಸಿಕೊಂಡು ಹೊರಟಿದ್ದಾರೆ. ಬಸವಣ್ಣ ತಳ ಸಮುದಾಯಗಳನ್ನು ಅಪ್ಪಿಕೊಂಡು ಕಟ್ಟಿದ ಜಾತಿರಹಿತ ಸಮಾಜ ಇಂದು ಜಾತಿಯಾಗಿ ಪರಿಣಮಿಸಿದ್ದು, ಬಸವಣ್ಣನವರಿಗೆ ಮಾಡುವ ದ್ರೋಹವೆಂದು ಕೆಲವು ಸಾಮಾಜಿಕ ಚಿಂತಕರು ಹೇಳುತ್ತಾರೆ.
ಬಸವಣ್ಣ ಮೊಟ್ಟಮೊದಲಿಗೆ ಸ್ವಾತಂತ್ರ್ಯ ಕೊಟ್ಟಿದ್ದು ಸ್ತ್ರೀಯರಿಗೆ. ಹಾಗಾಗಿ, ಸ್ತ್ರೀಯರು ಮನೆ ಬಿಟ್ಟು ಹೊರಗೆ ಬಂದು ಸಾಧನೆ ಮಾಡುವಂತಾಯಿತು. ಬಸವ ಪೂರ್ವದಲ್ಲಿ ಹೆಣ್ಣು ಮಕ್ಕಳನ್ನು ಅಡುಗೆಮನೆ, ಹೆರಿಗೆ ಕೋಲಿಗೆ ಸೀಮಿತಗೊಳಿಸಿದ್ದರು. ಪುರೋಹಿತಶಾಹಿ ವರ್ಗದವರು ಹೆಣ್ಣು ಮಕ್ಕಳನ್ನು ದೇವರ ಹೆಸರಿನಲ್ಲಿ ಹಾಸಿಗೆಯ ದಾಸಿಯರನ್ನಾಗಿ ಬಳಸಿಕೊಳ್ಳುತ್ತಿದ್ದರು. ಅದಕ್ಕೆಲ್ಲ ನಾಂದಿ ಹಾಡಿದ್ದು ಬಸವಣ್ಣ ಎಂದು ಇವತ್ತು ಸರ್ಕಾರ ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಅವರು 12ನೇ ಶತಮಾನದಲ್ಲಿ ವೇಶ್ಯೆಯರನ್ನು ಶರಣರನ್ನಾಗಿ ಪರಿವರ್ತಿಸಿದರು ಎಂದು ಅಹಿಂದ ನಾಯಕಿ ರಾಜೇಶ್ವರಿ ಯರನಾಳ ಹೇಳುತ್ತಾರೆ.

ಒಟ್ಟಾರೆಯಾಗಿ, ಬಸವಣ್ಣ ಜನಿಸಿದ ಬಾಗೇವಾಡಿ ಪಟ್ಟಣ ಇನ್ನಷ್ಟು ಅಭಿವೃದ್ಧಿ ಕಡೆಗೆ ಸಾಗಬೇಕಿದೆ. ಇಂಗಳೇಶ್ವರ ಗ್ರಾಮ ಅಭಿವೃದ್ಧಿಗೊಳ್ಳಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ. ಜೊತೆಗೆ, ಬಸವ ತತ್ವವನ್ನು ತಿರುಚಲು ಆರ್‌ಎಸ್‌ಎಸ್, ಸಂಘಪರಿವಾರ ನಡೆಸುತ್ತಿರುವ ಪ್ರಯತ್ನದ ಒಳಗುಟ್ಟನ್ನು ನಾಡಿನ ಪ್ರಜ್ಞಾವಂತ ಜನತೆ ಅರಿತುಕೊಳ್ಳಬೇಕು ಎಂಬುದು ಇಲ್ಲಿನವರ ಬಯಕೆ.
ವರದಿ: ರಮೇಶ್ ಹೊಸಮನಿ, ಶರಣಪ್ಪ ಗೊಲ್ಲರ

ಹೌದು ಇದು ನೂರಕ್ಕೆ ನೂರರಷ್ಟು ಸತ್ಯ; ಬುದ್ಧ ಬಸವ ಅಂಬೇಡ್ಕರ್ ನಿಜಕ್ಕೂ ಮನುಕುಲದ ಮಹಾನಾಯಕರು. ಈ ತ್ರಿಮೂರ್ತಿಗಳ ಜೊತೆ ಜೊತೆಗೆ ಸ್ವಾಮಿ ವಿವೇಕಾನಂದರು ಸೇರುತ್ತಾರೆ.
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
jayakumarcsj@gmail.com
ಬುದ್ಧ ಬಸವ ಅಂಬೇಡ್ಕರ್ ಸ್ವಾಮಿ ವಿವೇಕಾನಂದ ಕುವೆಂಪು ಮುಂತಾದ ಮಹಾದಾರ್ಶನಿಕರು ಮಹಾಕವಿಗಳು ಮಹಾನ್ ಶಿಲ್ಪಿಗಳು ಮಹಾನ್ ಕಲಾವಿದರು ಮನುಕುಲದ ಮಹಾನಾಯಕರು.
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
jayakumarcsj@gmail.com