ಮಾವೋವಾದಿ ಹೋರಾಟಗಾರರೊಂದಿಗೆ ಸಂಪರ್ಕ ಹೊಂದಿದ್ದಾರೆಂಬ ಅರೋಪದ ಮೇಲೆ ಜೈಲು ಸೇರಿ, ನಿರಂತರ ಸೆರೆವಾಸ ಅನುಭವಿಸಿ, ನಿರ್ದೋಷಿಯೆಂದು ಸಾಬೀತಾದ ಬಳಿಕ ಜೈಲಿನಿಂದ ಹೊರಬಂದಿದ್ದ ಪ್ರೊ. ಸಾಯಿಬಾಬಾ ಅವರು ಇತ್ತೀಚೆಗೆ ಸಾವನ್ನಪ್ಪಿದ್ದರು. ಅವರ ಸಾವಿಗೆ ದೆಹಲಿಯಲ್ಲಿರುವ ಜರ್ಮನ್ ರಾಯಭಾರಿ ಕಚೇರಿ ಸಂತಾಪ ಸೂಚಿಸಿದೆ.
ಸಾಯಿಬಾಬಾ ಅವರ ಪುತ್ರಿ ಮಂಜೀರಾ ಅವರಿಗೆ ಜರ್ಮನ್ ರಾಯಭಾರಿ ಡಾ. ಫಿಲಿಪ್ ಅಕರ್‌ಮನ್ ಅವರು ಪತ್ರ ಬರೆದಿದ್ದಾರೆ. “ನಿಮ್ಮ ತಂದೆಯ ಅಕಾಲಿಕ ಮರಣದ ಸುದ್ದಿ ಕೇಳಿ ಬಹಳ ಆಘಾತ ಮತ್ತು ದುಃಖವಾಗಿದೆ. ನಿಮ್ಮ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ” ಎಂದು ಪತ್ರದಲ್ಲಿ ಹೇಳಿದ್ದಾರೆ.
“ನಿಮಗೆ ನೆನಪಿರಬಹುದು: ಕಳೆದ ಏಪ್ರಿಲ್‌ನಲ್ಲಿ ನಾನು ನಿಮ್ಮನ್ನು ಮತ್ತು ನಿಮ್ಮ ತಂದೆಯನ್ನು ನನ್ನ ಫ್ರೆಂಚ್ ಸಹೋದ್ಯೋಗಿಯೊಂದಿಗೆ ಭೇಟಿಯಾಗಿದ್ದೆ. ನಮ್ಮ ಭೇಟಿಯು ಕಡಿಮೆ ಸಮಯದ್ದೇ ಆಗಿದ್ದರೂ, ಆ ಸಂದರ್ಭವು ನನ್ನ ಮೇಲೆ ಆಳವಾದ ಪ್ರಭಾವ ಬೀರಿದೆ. ನಿಮ್ಮ ತಂದೆಯ ಜೀವನಗಾಥೆ, ಅವರ ಸುದೀರ್ಘ ಸೆರೆವಾಸ ಮತ್ತು ಅವರಲ್ಲಿ ಅಚಲವಾದ ಬದ್ಧತೆಯು ಭಾರತದಲ್ಲಿನ ನಾಗರಿಕ ಹಕ್ಕುಗಳ ಬಗ್ಗೆ ನನಲ್ಲಿ ಹೆಚ್ಚು ಗೌರವವನ್ನು ಹುಟ್ಟುಹಾಕಿದೆ” ಎಂದು ಹೇಳಿದ್ದಾರೆ.

“ನಿಮ್ಮ ದುಃಖದ ಅರಿವು ನಮಗಿದೆ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹಾಗೂ ನಿಮ್ಮ ತಂದೆಯ ಅನೇಕ ಸ್ನೇಹಿತರಿಗೆ ದುಃಖವನ್ನು ಅರಗಿಸಿಕೊಳ್ಳುವ ಶಕ್ತಿ ದೊರೆಯಲೆಂದು ನಾನು ಪ್ರಾರ್ಥಿಸುತ್ತೇನೆ” ಎಂದು ಜರ್ಮನ್ ರಾಯಭಾರಿ ಹೇಳಿದ್ದಾರೆ.
ಸಾಯಿಬಾಬಾ ಅವರು ದೆಹಲಿ ವಿಶ್ವವಿದ್ಯಾಲಯದ ರಾಮ್ ಲಾಲ್ ಆನಂದ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ಅವರಿಗೆ ಮಾವೋವಾದಿ ಹೋರಾಟಗಾರರೊಂದಿಗೆ ಸಂಪರ್ಕವಿದೆ ಎಂಬ ಆರೋಪದ ಮೇಲೆ 2014ರಲ್ಲಿ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದರು. ಅವರ ಬಂಧನ ಬಳಿಕ, ಅವರನ್ನು ಅಧ್ಯಾಪಕ ಹುದ್ದೆಯಿಂದಲೂ ಅಮಾನತು ಮಾಡಲಾಗಿತ್ತು.
ಸಾಯಿಬಾಬಾ ಅವರನ್ನು ಬಂಧಿಸಿದ್ದ ಪೊಲೀಸರು, ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಅಧೀನ ನ್ಯಾಯಲಯವು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ, ಅವರು ಅಪರಾಧಿ ಎಂದು ಸಾಬೀತು ಮಾಡುವಲ್ಲಿ, ಸಾಕ್ಷಾಧಾರಗಳನ್ನು ಸಂಗ್ರಹಿಸುವಲ್ಲಿ ಪೊಲೀಸರು ವಿಫಲರಾಗಿದ್ದರು. ಇತ್ತೀಚೆಗೆ, ಅವರನ್ನು ನಿರ್ದೋಷಿ ಎಂದು ಘೋಷಿಸಿ, ಪ್ರಕರಣದಿಂದ ಖುಲಾಸೆಗಳಿಸಿ ಬಾಂಬೆ ಹೈಕೋರ್ಟ್ ತೀರ್ಪು ನೀಡಿತು.
ಸಾಬೀತಾಗದ ಆರೋಪದಲ್ಲಿ ನಿರಂತರವಾಗಿ 10 ವರ್ಷಗಳ ಕಾಲ ಜೈಲಿನಲ್ಲಿದ್ದ ಸಾಯಿಬಾಬಾ ಅವರು ಕಳೆದ ಮಾರ್ಚ್ 7ರಂದು ನಾಗ್ಲುರ ಜೈಲಿನಿಂದ ಬಿಡುಗಡೆಯಾಗಿದ್ದರು. ಆದರೆ, ಪೋಲಿಯೋ ಪೀಡಿತರಾಗಿದ್ದ ಅವರಿಗೆ ಜೈಲಿನಲ್ಲಿ ಸರಿಯಾದ ಸೌಲಭ್ಯಗಳು ದೊರೆಯದ ಕಾರಣ, ಅವರು ಪಿತ್ತಕೋಶ ಸಮಸ್ಯೆಗೆ ತುತ್ತಾಗಿದ್ದರು. ಕಳೆದ 20 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಚೇತರಿಕೆ ಕಂಡಿರಲಿಲ್ಲ. ಪರಿಣಾಮ, ಅಕ್ಟೋಬರ್ 13ರಂದು ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.