ಮಹರ್ಷಿ ವಾಲ್ಮೀಕಿ ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಎಲ್ಲಾ ಸಮುದಾಯಗಳು ಪೂಜಿಸಲ್ಪಡುವ ಮಹಾನ್ ಚೇತನವಾಗಿದ್ದು, ಅವರು ಬರೆದ ರಾಮಾಯಣ ಇಡೀ ದೇಶಕ್ಕೆ ನೀಡಿದ ಅತ್ಯಮೂಲ್ಯ ಕೊಡುಗೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ಹೇಳಿದರು.
ಕೋಲಾರ ನಗರ ಹೊರವಲಯದ ಮಹರ್ಷಿ ವಾಲ್ಮೀಕಿ ಸಮುದಾಯ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ವಾಲ್ಮೀಕಿ ಸಮಾಜ ಸಂಘಟನೆಗಳ ನೇತೃತ್ವದಲ್ಲಿ ಆಯೋಜಿಸಿದ್ದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಾಲ್ಮೀಕಿ ಬರೆದ ರಾಮಾಯಣ ಮತ್ತು ಅಂಬೇಡ್ಕರ್ ಅವರ ಸಂವಿಧಾನವು ಅಣ್ಣತಮ್ಮಂದಿರ ರೀತಿಯಲ್ಲಿ ಒಗ್ಗಟ್ಟಿನಿಂದ ಬದುಕುವಂತೆ ಮಾಡಿದೆ. ದೇಶವು ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವಂತಾಗಿದ್ದು, ಇಂತಹ ಮಹನೀಯರ ಹಾದಿಯಲ್ಲಿ ದೇಶವು ಅಭಿವೃದ್ಧಿಯ ಕಡೆಗೆ ಹೋಗಬೇಕಾಗಿದೆ ಎಂದರು.
ದೇಶವನ್ನು ಹೊಡೆದು ಆಳುವ ಸರಕಾರದ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಜಾತಿ ಜಾತಿಗಳ ಮಧ್ಯೆ ಜಗಳ ತಂದು ರಾಜಕಾರಣ ಮಾಡುವವರನ್ನು ದೂರವಿಡಿ. ಬಡವರ ಪರವಾದ ಸಿದ್ದರಾಮಯ್ಯ ಸರಕಾರವು ಎಸ್ಸಿ ಎಸ್ಟಿ ಸಮುದಾಯದ ಅಭಿವೃದ್ಧಿಗೆ 36 ಸಾವಿರ ಕೋಟಿ ಅನುದಾನವನ್ನು ಮೀಸಲಿಟ್ಟಿದೆ. ವಿರೋಧ ಪಕ್ಷಗಳು ಆಡಳಿತ ಪಕ್ಷದ ವೈಖರಿಯನ್ನು ಸಹಿಸಿಕೊಳ್ಳದೇ ವಿನಾಕಾರಣ ಆರೋಪಗಳನ್ನು ಮಾಡಲು ಹೊರಟಿದ್ದಾರೆ. ಇದಕ್ಕೆ ಕಿವಿ ಕೊಡಬಾರದು. ಬಲಹೀನ ಸಮುದಾಯಗಳ ಅಭಿವೃದ್ಧಿಗೆ ಕಾಂಗ್ರೆಸ್ ಸರಕಾರ ಬದ್ದವಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಮಾತನಾಡಿ ಅಂಬೇಡ್ಕರ್ ಅವರ ದಾರಿಯಲ್ಲಿ ಕಾಂಗ್ರೆಸ್ ಸರಕಾರವು ನಡೆಯುತ್ತಿದೆ. ರಾಜ್ಯದಲ್ಲಿ ಹಿಂದುಳಿದ ವರ್ಗದ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆಂದು ಸಹಿಸದ ಕೆಲವರು ಅವರನ್ನು ಅಧಿಕಾರದಿಂದ ಕೆಳಗಿಸಬೇಕು ಎಂದು ಸಂಚು ನಡೆಸುತ್ತಿದ್ದಾರೆ. ಇದರ ವಿರುದ್ದ ಒಗ್ಗಟ್ಟಿನಿಂದ ಎಚ್ಚರಿಕೆವಹಿಸಿ ನಾವೆಲ್ಲರೂ ಒಗ್ಗಟ್ಟಿನಿಂದ ನಡೆಯಬೇಕಾಗಿದೆ ಎಂದರು.
ಶಾಸಕ ಕೊತ್ತೂರು ಜಿ.ಮಂಜುನಾಥ್ ಮಾತನಾಡಿ, ನಂಬಿಕೆಗೆ ಅರ್ಹವಾದ ವಾಲ್ಮೀಕಿ ಸಮುದಾಯವು ಎಲ್ಲಾ ಸಮುದಾಯಗಳನ್ನು ಜೊತೆಗೆ ಕರೆದುಕೊಂಡು ಹೋಗಿದೆ. ಸರಕಾರ ವಾಲ್ಮೀಕಿ ಮಹರ್ಷಿ ಜಯಂತಿಯನ್ನು ಸಾರ್ವಜನಿಕ ರಜೆಯನ್ನಾಗಿ ಘೋಷಿಸಿದೆ. ಮಹರ್ಷಿ ಬರೆದ ಮಹಾಕಾವ್ಯದಲ್ಲಿ ಇರುವ ಎಲ್ಲ ಅಂಶಗಳು ಅನುಕರಣಿಯಾಗಿವೆ. ಸಮಾಜದಲ್ಲಿ ರಾಮಾಯಣದಿಂದ ಕಲಿಯಬೇಕಾದ್ದು ಬಹಳಷ್ಟಿದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ವಾಲ್ಮೀಕಿ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿದ ಶಾಸಕ ಕೊತ್ತೂರು ಮಂಜುನಾಥ್ ಪಲ್ಲಕ್ಕಿಗಳ ಮೆರವಣಿಗೆಯನ್ನು ಶಾಸಕ ಕೊತ್ತೂರು ಮಂಜುನಾಥ್ ಡೊಳ್ಳು ಹೊಡೆಯುವ ಮೂಲಕ ಚಾಲನೆ ನೀಡಿದರು. ವಿವಿಧ ಇಲಾಖೆಗಳು ಹಾಗೂ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಿಂದ ಬಂದ 50ಕ್ಕೂ ಹೆಚ್ಚು ಪಲ್ಲಕ್ಕಿಗಳು ಹಾಗೂ ಜಾನಪದ ಕಲಾ ತಂಡಗಳು ನೋಡುಗರ ಗಮನ ಸೆಳೆಯಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | 9 ತಿಂಗಳಲ್ಲಿ ಬೆಂಗಳೂರು ನಗರವೊಂದರಲ್ಲೇ 455 ಪೋಕ್ಸೊ ಪ್ರಕರಣ; ಹಲ್ಲಿಲ್ಲದ ಹಾವಾಯಿತೇ ಕಾಯ್ದೆ?
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷ, ಎಸ್ಪಿ ಬಿ.ನಿಖಿಲ್, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಸಂಗೀತ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ.ಶಿವಕುಮಾರ್, ಎಸ್ಪಿ ಬಿ.ನಿಖಿಲ್ , ಅಪರ ಜಿಲ್ಲಾಧಿಕಾರಿ ಮಂಗಳ, ಎಸಿ ಡಾ. ಮೈತ್ರಿ, ತಹಶಿಲ್ದಾರ್ ನಯನ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸನ್, ವಾಲ್ಮೀಕಿ ಸಮಾಜದ ಮುಖಂಡರಾದ ಎನ್ ಅಂಬರೀಷ್, ಬಾಲಗೋವಿಂದ್, ಮಾಲೂರು ವೆಂಕಟರಾಮ್, ಕುಡುವನಹಳ್ಳಿ ಆನಂದ್, ಕೋಟೆ ಶ್ರೀನಿವಾಸ್, ಡಿಪಿಎಸ್ ಮುನಿರಾಜು, ಟಿ.ವಿಜಿಕುಮಾರ್, ಪಂಡಿತ್ ಮುನಿವೆಂಕಟಪ್ಪ, ಸೀಸಂದ್ರ ಗೋಪಾಲಗೌಡ, ಮೈಲಾಂಡಹಳ್ಳಿ ಮುರಳಿ, ನುಕ್ಕನಹಳ್ಳಿ ಶ್ರೀನಿವಾಸ್, ಮುಂತಾದವರು ಇದ್ದರು.