ಅಪ್ಪು ಪುಣ್ಯಸ್ಮರಣೆ ಅಂಗವಾಗಿ ತುರುವೇಕೆರೆಯಲ್ಲಿ ಮೊದಲ ಬಾರಿಗೆ ಐಪಿಎಲ್ ಕ್ರಿಕೆಟ್ ಮಾದರಿಯಲ್ಲಿ ನಡೆಯಲಿರುವ ಅಪ್ಪು ತುರುವೇಕೆರೆ ಪ್ರೀಮಿಯರ್ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಅ 29 ರಂದು ಚಾಲನೆ ನೀಡಲಾಗುವುದು ಎಂದು ಕ್ರಿಕೆಟ್ ಪಂದ್ಯಾವಳಿಯ ವ್ಯವಸ್ಥಾಪಕ ಹಾಗೂ ಆರ್ ಎಸ್ ಅಕ್ಷರ ಅಕಾಡೆಮಿ ಅಧ್ಯಕ್ಷ ಸಿ.ಎಸ್ .ಮೂರ್ತಿ ತಿಳಿಸಿದರು.
ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅಪ್ಪು ಕಪ್ ಪಂದ್ಯಾವಳಿಯನ್ನು ಆ.29 ರಂದು ತುರುವೇಕೆರೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಪಂದ್ಯಾವಳಿಗೆ ಚಾಲನೆ ನೀಡಲಾಗುವುದು. 30 ಹಾಗೂ 31 ರಂದು ವಿವಿಧ ತಂಡಗಳೊಂದಿಗೆ ಸೌಹಾರ್ದಯುತ ಪಂದ್ಯಗಳನ್ನು ಆಡಿಸಲಾಗುತ್ತದೆ ಎಂದರು.
ಈಗಾಗಲೇ ಅಪ್ಪು ಕಪ್ ಚಿಹ್ನೆಯನ್ನು ಬಿಡುಗಡೆಗೊಳಿಸಲಾಗಿದೆ. ತಾಲೂಕಿನ ಗ್ರಾಮೀಣ ಪ್ರತಿಭೆಗಳು ಮತ್ತು ಪಟ್ಟಣದ ಪ್ರತಿಭೆಗಳನ್ನು ಸಮನಾಂತರವಾಗಿ ಗುರುತಿಸುವ ಸಲುವಾಗಿ ತಂಡಗಳ ಆಯ್ಕೆಯ ಸಂಬಂಧ 16 ತಂಡಗಳನ್ನು ಮಾಡಲಾಗಿದೆ. ಈ 16 ತಂಡಗಳ ಮಾಲೀಕರು ತಮಗೆ ಬೇಕಾದ ಕ್ರೀಡಾಪಟುಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. 16 ತಂಡಗಳಿಗೂ ಅಪ್ಪು ಅಭಿನಯಿಸಿರುವ ಚಲನ ಚಿತ್ರಗಳಾದ ಗಂಧದಗುಡಿ, ರಣವಿಕ್ರಮ, ಅಜಯ್, ದೊಡ್ಡಮನೆ ಹುಡುಗ, ವಂಶಿ, ರಾಜಕುಮಾರ, ಬೆಟ್ಟದ ಹೂವು, ಪವರ್, ಅರಸು, ಅಣ್ಣಾ ಬಾಂಡ್, ಯುವರತ್ನ, ಬಿಂದಾಸ್, ಪರಮಾತ್ಮ, ಆಕಾಶ್, ಜೇಮ್ಸ್, ಮಿಲನ ಎಂದು ಹೆಸರಿಡಲಾಗಿದೆ ಎಂದು ಸಿ.ಎಸ್.ಮೂರ್ತಿ ತಿಳಿಸಿದರು.
ತಾಲೂಕಿನಿಂದ ಸುಮಾರು 300 ಕ್ಕೂ ಹೆಚ್ಚು ಆಟಗಾರರು ನೊಂದಣಿ ಮಾಡಿಸಿಕೊಂಡಿದ್ದರು. ಅವರಲ್ಲಿ ಸುಮಾರು 240 ಮಂದಿ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಫ್ರಾಂಚೈಸೀಯವರು ಕ್ರಿಕೆಟ್ ಆಟಗಾರನ್ನು ಬಿಡ್ ಮೂಲಕ ಆಯ್ಕೆ ಮಾಡಿಕೊಂಡಿದ್ದಾರೆ. ರಾಜು, ಅಭಿಷೇಕ್, ಶಿವ, ಕುಶಾಲ್ ಹೆಚ್ಚು ಮೊತ್ತಕ್ಕೆ ಹರಾಜು ಆದ ಆಟಗಾರರಾಗಿದ್ದಾರೆ. ಈ ಕ್ರಿಕೆಟ್ ಪಂದ್ಯಾವಳಿ ಉದ್ದೇಶ ತಾಲೂಕಿನ ಪ್ರತಿಭಾನ್ವಿತ ಆಟಗಾರಿಗೆ ಅವಕಾಶ ದೊರೆಯುವಂತೆ ಮಾಡುವುದು. ತಾಲೂಕಿನ ಎಲ್ಲಾ ಕ್ರೀಡಾ ಪ್ರೇಮಿಗಳು ಆಸಕ್ತರು ಅಭಿಮಾನಿಗಳು ಪಂದ್ಯಾವಳಿಗಳನ್ನು ಯಶಸ್ವಿಯಾಗಿ ನಡೆಯಲು ಸಹಕರಿಸಬೇಕು ಎಂದು ಆರ್ ಎಸ್ ಅಕ್ಷರ ಅಕಾಡೆಮಿ ಅಧ್ಯಕ್ಷ ಸಿ.ಎಸ್. ಮೂರ್ತಿ ವಿನಂತಿಸಿಕೊಂಡರು.
ಪತ್ರಿಕಾಗೋಷ್ಠಿ ಯಲ್ಲಿ ನವೀನ್ ಬಾಬು, ಮಲ್ಲಾಘಟ್ಟ ಪುಟ್ಟಣ್ಣ, ರವಿ, ಅಶೋಕ, ನಂದೀಪ್ ಮಂಜಣ್ಣ, ವಿನೋದ್, ಕಿಟ್ಟಿ, ಬಾಣಸಂದ್ರ ಕೃಷ್ಣ ಮಾದಿಗ, ಚಿರಂಜೀವಿ, ಅರುಣ್ ಕುಮಾರ್, ಗಣೇಶ್, ಉಮೇಶ್, ಕೇಶವ ಇತರರು ಇದ್ದರು
ವರದಿ – ಎಸ್. ನಾಗಭೂಷಣ್ ತುರುವೇಕೆರೆ.