ತುಂಗಭದ್ರಾ ಎಡದಂಡೆ ನಾಲೆಯ ಕೆಳಭಾಗದ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಘಟಕದಿಂದ ತಹಶೀಲ್ದಾರ್ ಗ್ರೇಡ್ 2 ಅಬ್ದುಲ್ ವಾಹಿದ ಅವರಿಗೆ ಮನವಿ ಸಲ್ಲಿಸಿದರು.
“ಸದರಿ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸದೆ ರೈತರು ಬೆಳೆದ ಬೆಳೆಗಳು ಹಾಳಾಗಿದ್ದು, ನಷ್ಟ ಅನುಭವಿಸುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ರೈತರ ಜಮೀನುಗಳಿಗೆ ನೀರು ಹರಿಸಬೇಕು. ಈ ವರ್ಷ ನಮ್ಮ ಭಾಗಕ್ಕೆ ಸಂಪೂರ್ಣ ಮಳೆ ಇಲ್ಲದೇ ರೈತರು ಬರಗಾಲದಿಂದ ಕಂಗಾಲಾಗಿದ್ದಾರೆ. ಅಲ್ಪಪ್ರಮಾಣದ ಮಳೆಯಾಗಿದ್ದು, ತುಂಗಭದ್ರಾ ಎಡದಂಡೆ ನಾಲೆಯ ಉಪಕಾಲುವೆಗಳಾದ 76, 82, 85 ಹಾಗೂ 89 ಈ ಕಾಲುವೆಗಳ ಕೆಳಭಾಗಕ್ಕೆ ನೀರಿಲ್ಲದೇ ಶೇ.50ರಷ್ಟೂ ಬೆಳೆ ಬಾರದೆ ರೈತರು ನಷ್ಟ ಅನುಭವಿಸುತ್ತಿದ್ದು, ಸರ್ಕಾರ ಕೂಡಲೇ ಇದನ್ನು ಗಂಭೀರವಾಗಿ ಪರಿಗಣಿಸಿ ನೀರು ಹರಿಸಬೇಕು” ಎಂದು ಆಗ್ರಹಿಸಿದರು.
“ಈ ಭಾಗದ ರೈತರಿಗೆ ದಿನದಿಂದ ದಿನಕ್ಕೆ ವಿದ್ಯುತ್ ಸಮಸ್ಯೆ ಹೆಚ್ಚಾಗುತ್ತಿದ್ದು, ಇದನ್ನು ಸರಿಪಡಿಸಬೇಕು. ರೈತರು ಬೆಳೆದಿರುವ ಬೆಳೆಗಳ ಕಟಾವು ಹಂತದಲ್ಲಿರುವ ಬೆಳೆಗಳಿಗೆ ಕೂಡಲೇ ಸರ್ಕಾರ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು. ರೈತರು ಮಾರುಕಟ್ಟೆಯಲ್ಲಿ ಹತ್ತಿಯನ್ನು ಮಾರಲು ಹೋದಾಗ ಪ್ರತಿ ಕ್ವಿಂಟಾಲ್‌ಗೆ ಎರಡು ಕೆಜಿಯಂತೆ ತೂಕದಲ್ಲಿ ಮೋಸ ಮಾಡಿ ಹತ್ತಿಯನ್ನು ಲಪಟಾಯಿಸುತ್ತಿದ್ದಾರೆ. ರೈತರಿಗೆ ನ್ಯಾಯ ಒದಗಿಸಬೇಕು, ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಅ.21ರಂದು ವಿಧಾನಪರಿಷತ್ ಉಪಚುನಾವಣೆ; ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿ
“ವಿದ್ಯುತ್ ಕೃಷಿ ಪಂಪಸೆಟ್‌ಗಳಿಗೆ ಸರ್ಕಾರದ ನಿಯಮದ ಪ್ರಕಾರ 7 ತಾಸು ವಿದ್ಯುತ್ ಒದಗಿಸಬೇಕು ಎಂದಾಗಿದೆ. ಆದರೆ ಸರಿಯಾದ ಸಮಯಕ್ಕೆ ವಿದ್ಯುತ್ ಒದಗಿಸದೇ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ. ಬೆಳಗಿನ ಜಾವ ಹಾಗೂ ರಾತ್ರಿ ಸೊಳ್ಳೆಕಾಟ. ಇದರಿಂದ ರೈತರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ರೈತ ಮುಖಂಡ ಸುಗರಯ್ಯ ಮಠ, ಜಿಲ್ಲಾ ಕಾರ್ಯದರ್ಶಿ ಲಿಂಗಾರೆಡ್ಡಿ ಪಾಟೀಲ್, ಬಸವರಾಜ್, ದೇವೇಂದ್ರಪ್ಪ ನಾಯಕ, ಚನ್ನ ಬಸವ, ಶರಣಪ್ಪ ಗೌಡ ಸೇರಿದಂತೆ ಇತರರು ಇದ್ದರು.
