ಧಾರವಾಡ ಜಿಲ್ಲೆಯ ಅಳ್ಳಾವರ ತಾಲೂಕಿನ ಬೆಣಚಿ ಮತ್ತು ಬಾಳಗೆರೆ ಗ್ರಾಮಗಳ ನಡುವೆಯಿದ್ದ ಸೇತುವೆ, ಸುರಿದ ಭಾರೀ ಮಳೆಗೆ ಕೊಚ್ಚಿ ಹೋಗಿದ್ದು, ಸಾರ್ವಜನಿಕರು, ರೈತರು ಓಡಾಡಲು ಪರದಾಡುತ್ತಿದ್ದಾರೆ.
2019ರ ಪ್ರವಾಹದಲ್ಲಿ ಅರ್ಧ ಸೇತುವೆ ಕೊಚ್ಚಿಹೋಗಿತ್ತು. ಈಗ ಮತ್ತೆ ನಿರಂತರ ಸುರಿದ ಮಳೆಗೆ ಸಂಪೂರ್ಣ ಸೇತುವೆ ಕೊಚ್ಚಿ ಹೋಗಿದ್ದು, ಜನರು ಸೇತುವೆ ದಾಟಲು ಸಮಸ್ಯೆ ಉಂಟಾಗಿದೆ. ಜನರು ಹಳ್ಳವನ್ನು ದಾಟಲು ಹಗ್ಗದ ಆಸರೆಯಿಂದ ಪ್ರಯತ್ನಿಸುತ್ತಿದ್ದು, ಹುಶಾರಿಲ್ಲದ ವೃದ್ಧರೊಬ್ಬರು ದಾಟಲು ಪರದಾಟ ನಡೆಸಿದ್ದಾರೆ. ದೊಡ್ಡ ಸೇತುವೆ ಇದಾಗಿದ್ದು, ಇಲ್ಲಿನ ಜನರಿಗೆ ಬೇರೆ ಪರ್ಯಾಯ ದಾರಿಯೂ ಇಲ್ಲವಾಗಿದೆ.
ದ್ಯಾಮಕ್ಕ ರಾಮಚಂದ್ರ ಪಾಟೀಲ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಾವು ನಿತ್ಯವೂ ಬೆಣಚಿಯಿಂದ ಬಾಳಗೆರೆಯ ಕಡೆಗೆ ನಮ್ಮ ಹೊಲಗಳಿಗೆ ಹೋಗುತ್ತೇವೆ. ಈಗಾಗಲೇ ಕುಸಿದು ಬಿದ್ದ ಹಳ್ಳವನ್ನು ದಾಟಲು ಸಾಕಷ್ಟು ಕಷ್ಟ ಅನುಭವಿಸಬೇಕು. ನಮ್ಮ ದನ, ಕರುಗಳು ಹೊಲದ ಮನೆಗಳಲ್ಲೇ ಇದ್ದು, ದನಗಳಿಗೆ ಮೇವು ಕೊಂಡೊಯ್ಯಲೂ ಆಗುತ್ತಿಲ್ಲ. ಜಾನುವಾರುಗಳನ್ನು ಇತ್ತ ಕರೆತರಲೂ ಆಗುತ್ತಿಲ್ಲ. ಇಂತಹ ಪರಿಸ್ಥಿತಿ ಎದುರಿಸುತ್ತಿರುವ ನಮಗೆ ಸರ್ಕಾರ ಒಂದೊಳ್ಳೆ ಸೇತುವೆ ಕಟ್ಟಿಸಿಕೊಡಬೇಕು” ಎಂದು ತಮ್ಮ ಅಳಲನ್ನು ತೋಡಿಕೊಂಡರು.
“ಹೊಲದಲ್ಲಿ ಬೆಳೆದ ರಾಗಿ, ಶೇಂಗಾ, ಮೆಕ್ಕೆಜೋಳ ಬೆಳೆಗಳನ್ನು ತೆಗೆದುಕೊಂಡು ಬರಲು ಸಾಧ್ಯವಾಗಿಲ್ಲ. ಸೇತುವೆ ಕುಸಿದಿರುವ ಕಾರಣ ಬೆಳೆದ ಬೆಳೆಗಳು ಅಲ್ಲಿಯೇ ಬಿದ್ದು ಮೊಳಕೆಯೊಡೆದು ನಾಶವಾಗಿವೆ. ಸರ್ಕಾರ ಕಣ್ಣು ಮುಚ್ಚಿಕೊಂಡು ಕುಳಿತಿದ್ದು, ಅವರಿಗೆ ಬಡವರು ಕಾಣಿಸುತ್ತಿಲ್ಲ. ಎಲ್ಲ ಅಧಿಕಾರಿಗಳು ಬಂದು ನೋಡಿಕೊಂಡು ಹೋಗುವುದೇ ರೂಢಿಯಾಗಿ ಬಿಟ್ಟಿದೆ. ಆದರೆ ಯಾರಿಂದಲೂ ನಮಗೆ ಪರಿಹಾರ ಸಿಕ್ಕಿಲ್ಲ. ಈ ಮೊದಲು ನೆರೆಹಾವಳಿ ಬಂದು ಅರ್ಧ ಸೇತುವೆ ಕೊಚ್ಚಿ ಹೋದಾಗ ರೈತರೆಲ್ಲ ಸೇರಿಕೊಂಡು ಸ್ವಂತ ಖರ್ಚಿನಲ್ಲಿ ಸೇತುವೆ ರಿಪೇರಿ ಮಾಡಿಸಿದ್ದೆವು. ಯಾವ ಸರ್ಕಾರದಿಂದಲೂ, ರಾಜಕಾರಣಿಯಿಂದಲೂ ಸಹಾಯವನ್ನು ಬೇಡಿಲ್ಲ. ಸೇತುವೆ ಸಂಪೂರ್ಣ ಕೊಚ್ಚಿಹೋದ ಕಾರಣ ಸರ್ಕಾರದ ಮೊರೆ ಹೋಗುತ್ತಿದ್ದೇವೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ಸ್ಥಳಕ್ಕೆ ಭೇಟಿ ಕೊಟ್ಟು ಸೇತುವೆ ಕಟ್ಟಿಸಿಕೊಡುವ ಭರವಸೆ ನೀಡಿದ್ದರೂ ಈಡೇರಿಸಲಿಲ್ಲ. ಕೂಡಲೇ ಸೇತುವೆ ಕಟ್ಟಿಸಿ ಕೊಡದೇ ಇದ್ದರೆ ತೀವ್ರ ಹೋರಾಟ ಕೈಗೊಳ್ಳಲಾಗುವುದು” ಎಂದು ಪ್ರಭು ಪಾಟೀಲ್ ಎಚ್ಚರಿಸಿದರು.

“ಸೇತುವೆ ಕೊಚ್ಚಿ ಹೋಗಿದ್ದ ಸಂದರ್ಭದಲ್ಲಿ ನಮ್ಮ ಹೊಲದಲ್ಲಿದ್ದ ಹಗ್ಗವನ್ನು ತಂದು ಆ ಹಗ್ಗದ ಸಹಾಯದಿಂದ ರೈತರನ್ನು ಹಳ್ಳದಿಂದ ದಾಟಿಸಿದೆವು. ನಿರಂತರ ಐದು ದಿನಗಳ ಕಾಲ ಕಾವಲು ಕಾದಂತೆ ಜನರನ್ನು ಹಳ್ಳದಾಟಿಸಲು ಮುಂದಾಗಿದ್ದೇನೆ. ಅದು ನನ್ನ ಕರ್ತವ್ಯ ಎಂಬಂತೆ ನಿರ್ಹವಹಿಸಿದ್ದೇನೆ. ಈ ಕುರಿತು ಉಸ್ತುವಾರಿ ಸಚಿವ ಸಂತೋಷ್ ಲಾಡ್, ಜಿಲ್ಲಾಧಿಕಾರಿಗಳು ಗಮನಹರಿಸಬೇಕು. ತಾಲೂಕು ದಂಡಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆದಷ್ಟು ಬೇಗ ಸೇತುವೆಯನ್ನು ಕಟ್ಟಿಸಲು ಮುಂದಾಗುತ್ತೇವೆಂದು ಭರವಸೆ ನೀಡಿ ಹೋದರು. ಆದರೆ ಯಾವಾಗ ಅದು ಕಾರ್ಯರೂಪಕ್ಕೆ ಬರುತ್ತದೆಯೋ ಯಾರಿಗೂ ಗೊತ್ತಿಲ್ಲ. ಅಲ್ಲಿಯವರೆಗೂ ಬಡವರು ಸಾಯಬೇಕೆ?” ಎಂದು ಹನಿಫ್ ದೊಡಮನಿ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಇನ್ನು ಈ ಕುರಿತು ಬೆಣಚಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಾಗರಾಜ್ ಪುಡಕಲಕಟ್ಟಿ ಮಾತನಾಡಿ, “ಈಗಾಗಲೇ ಪಂಚಾಯತ್ ಕಾರ್ಯನಿರ್ವಾಹಕಾ ಅಧಿಕಾರಿ ಸ್ಥಾನಿಕ ಪರಿಶೀಲನೆ ನಡೆಸಿದ್ದಾರೆ. ಸಂಪೂರ್ಣ ಸೇತುವೆ ನಿರ್ಮಾಣಕ್ಕೆ ಸುಮಾರು 3 ಕೋಟಿ ರೂಪಾಯಿ ವೆಚ್ಚವಾಗಬಹುದು. ಹೀಗಾಗಿ ಎಲ್ಲರ ಅಭಿಪ್ರಾಯದಂತೆ ಸದ್ಯದಲ್ಲೇ ಸುಮಾರು ₹30 ಲಕ್ಷದ ವೆಚ್ಚದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲು ಚರ್ಚಿಸಲಾಗಿದೆ” ಎಂದು ತಿಳಿಸಿದರು.
ಆದಷ್ಟು ಬೇಗ ಸೇತುವೆ ನಿರ್ಮಾಣವಾಗಲಿ, ಜನರು, ರೈತರು ಓಡಾಡಲು ಅನುಕೂಲವಾಗಲಿ, ಅಧಿಕಾರಿಗಳು, ರಾಜಕಾರಣಿಗಳು ಇತ್ತ ಕಣ್ಣಾಯಿಸಿ, ಸಮಸ್ಯೆ ಬಗೆಹರಿಸಲಿ ಎಂದು ಸ್ಥಳೀಯರು ಕಾಯುತ್ತಿದ್ದಾರೆ.
