ಮತ್ತೆ ಸಿಕ್ಕ ಮಧುಗೆರೆ ನರಸಿಂಹ, ತೇಜಸ್ವಿ ತೀರಿಹೋದದ್ದೇ ಗೊತ್ತಿಲ್ಲ ಮಾರಾಯರೆ ಎನ್ನುವುದೇ?

Date:

Advertisements
ಅತ್ಯುತ್ತಮ ರಂಗ ನಟ, ಕ್ರಿಕೆಟ್ ಆಟಗಾರ, ವಾಲಿಬಾಲ್ ಪಟು ಇದೆಲ್ಲಕ್ಕಿಂತ ಮುಖ್ಯವಾಗಿ ರೈತ ಹೋರಾಟಗಾರ, ಕವಿ ಮನಸ್ಸಿನ ಮಧುಗೆರೆ ನರಸಿಂಹ ಎಲ್ಲಿ ಹೋದರು? ಅಕಸ್ಮಾತ್ ಸಿಕ್ಕಾಗ ಹೇಗಿದ್ದರು, ಏನಂದರು? ಒಂದು ಅಪರೂಪದ ಭೇಟಿಯ ಸುತ್ತಲಿನ ಬರಹ...

ಸಮ ಸಮಾಜದ ಕನಸು ಹೊತ್ತು ರೈತ, ದಲಿತ ಮತ್ತು ಭಾಷಾ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ಅನೇಕರು ಇದೀಗ ನಮ್ಮೊಂದಿಗಿಲ್ಲ. ಕೆಲವರು ಅಸ್ತಂಗತರಾಗಿದ್ದಾರೆ. ಹಲವರು ಮನೆ ಸೇರಿ ತಾವಾಯಿತು ತಮ್ಮ ಪಾಡಾಯಿತು ಎನ್ನುತ್ತಿದ್ದಾರೆ. ಇನ್ನು ಕೆಲವರು ಈ ಸಮ ಸಮಾಜ, ಸಾಮಾಜಿಕ ನ್ಯಾಯ, ಶೋಷಣಾರಹಿತ ವ್ಯವಸ್ಥೆ ಎಂಬುವುಗಳೆಲ್ಲ ಸೂಡೋ. ಬರೀ ಘೋಷಣೆಗಳಷ್ಟೆ. ಅಧಿಕಾರ ಮತ್ತು ಸಕಲ ಸೌಭಾಗ್ಯಕ್ಕಾಗಿ ನಿರ್ಮಿಸಿಕೊಂಡ ಏಣಿಗಳು ಎಂದು ಹತಾಶರಾಗಿ ಖಿನ್ನತೆಗೆ ಒಳಗಾಗಿ ಸಾವು ಬದುಕಿನ ಮಧ್ಯೆ ಕಾಲ ನೂಕುತ್ತಿರುವವರೂ ಇದ್ದಾರೆ.

ಇಂತಹ ಒಬ್ಬ ವ್ಯಕ್ತಿಯ ಹುಡುಕಾಟಕ್ಕಾಗಿ ಅಲೆದಲೆದು ಕಡೆಗೂ ಪತ್ತೆ ಹಚ್ಚಿದೆ. ನೋಡಿದಾಕ್ಷಣ ‘ಓಹ್ ರಾಜು ಅಲ್ಲವೆ’? ಎಂದು ಗುರುತಿಸಿದರು. ಕಣ್ಣುಗಳಲ್ಲಿ ನೀರುಕ್ಕುವ ಸಂದರ್ಭ ಎದುರಾಯಿತು.

ಅದು ಎಂಭತ್ತರ ದಶಕದ ಆರಂಭ. ರಾಜ್ಯದಲ್ಲಿ ಆಳುವ ಪಕ್ಷ ಕೊನೆಗೊಳಿಸಲು ಇನ್ನಿಲ್ಲದ ಹೋರಾಟಗಳು ಶುರುವಾಗುತ್ತವೆ. ಕನ್ನಡಭಾಷೆ ಮತ್ತು ದಲಿತ, ರೈತ ಚಳವಳಿಗಳು ರಾಜ್ಯಾದ್ಯಂತ ಪ್ರಜ್ವಲಿಸತೊಡಗುತ್ತವೆ. ನರಗುಂದ ನವಲಗುಂದದಿಂದ ಆರಂಭವಾದ ರೈತ ಚಳವಳಿಯಂತೂ ರಾಜ್ಯಾದ್ಯಂತ ಭುಗಿಲೆದ್ದಿತು. ರೈತ ಸಮನ್ವಯ ಸಮಿತಿಯ ಮೂಲಕ ಹೊರ ಬಂದ ರೈತರ ಹತ್ತೊಂಭತ್ತು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜೈಲುಗಳನ್ನು ಭರ್ತಿ ಮಾಡುವ ಚಳವಳಿ ವಿಭಿನ್ನ ರೀತಿಯಲ್ಲಿ ಮುನ್ನಡೆಯತೊಡಗಿತು.

Advertisements

ತೀರ್ಥಹಳ್ಳಿಯಲ್ಲೂ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಸಾವಿರಾರು ರೈತರು ಒಗ್ಗೂಡತೊಡಗಿದರು. ತ್ಯಾನಂದೂರು ಪುಟ್ಟಣ್ಣನವರು ಇದರ ಅಧ್ಯಕ್ಷರಾದರು. ಆಗ ನೂರಾರು ಜನರು ಜೈಲಿಗೆ ಹೋದ ಸಂದರ್ಭದಲ್ಲಿ ತಾಲೂಕಿನಾದ್ಯಂತ ಅಂದು ಓಡಾಡುತ್ತಿದ್ದ ಹೆಸರೇ ಮಧುಗೆರೆ ನರಸಿಂಹರವರದು. ಇವರೂ ಕೂಡಾ ಮೊದಲ ತಂಡದಲ್ಲೇ ಬೆಳಗಾವಿಯ ಹಿಂಡೆಲಗಾ ಜೈಲು ಸೇರಿ ಬಂದವರೆ. ಕಡಿದಾಳು ಶಾಮಣ್ಣನವರ ಶಿಷ್ಯತ್ವದೊಂದಿಗೆ ಹೋರಾಟದ ದೀಕ್ಷೆ ತೆಗೆದುಕೊಂಡ ನರಸಿಂಹರವರು ಆ ಕಾಲಘಟ್ಟದಲ್ಲಿ ಭಾಗವಹಿಸದಿರುವ ಚಳವಳಿಗಳಿಲ್ಲ.

ಇದನ್ನು ಓದಿದ್ದೀರಾ?: ಸಚಿವ ಪ್ರಲ್ಹಾದ್ ಜೋಶಿ ಸಹೋದರನ ವಂಚನೆ ಪ್ರಕರಣಗಳೂ, ಸಂಬಂಧವಿಲ್ಲದ ಸಬೂಬುಗಳೂ

ರೈತ ಸಮನ್ವಯ ಸಮಿತಿ ರೈತ ಸಂಘವಾಗಿ ಮಾರ್ಪಟ್ಟಾಗ ಕಡಿದಾಳು ಶಾಮಣ್ಣನವರು ರೈತ ಸಂಘದ ಅಧ್ಯಕ್ಷರಾದರು. ಮಧುಗೆರೆ ನರಸಿಂಹ ತಾಲೂಕು ಕಾರ್ಯದರ್ಶಿಗಳಲ್ಲೊಬ್ಬರಾಗಿ ಕೆಲಸ ಮಾಡುತ್ತಾರೆ. 1982ರ ಮಹಾ ನೆರೆಯಿಂದ ಸಂತ್ರಸ್ಥರಾದ ರೈತರಿಗೆ ಪರಿಹಾರ ನೀಡದೆ ಸತಾಯಿಸುತ್ತಿದ್ದ ಅಧಿಕಾರಶಾಹಿಯ ವಿರುದ್ದ ಕಡಿದಾಳು ಶಾಮಣ್ಣನವರು ಆಮರಣಾಂತ ಉಪವಾಸ ಕೂರುತ್ತಾರೆ. ಇವರು ಉಪವಾಸ ಕೂತಾಗ ಇವರಿಗೆ ಬೆಂಬಲಾರ್ಥವಾಗಿ ನೂರಾರು ರೈತರು ತಾಲೂಕು ಕಚೇರಿ ಎದುರು ಜಮಾಯಿಸತೊಡಗುತ್ತಾರೆ. ಇಂತಹ ಸಂದರ್ಭದಲ್ಲಿ ಮೂರ್ನಾಲ್ಕು ದಿನಗಳ ಉಪವಾಸ ಸತ್ಯಾಗ್ರಹದ ಅವಧಿ ಎಂಬುದು ಅನೇಕ ವಿಚಾರಗಳ ಚರ್ಚಾವೇದಿಕೆಯಾಗಿ ಮಾರ್ಪಟ್ಟಿತು. ರಾಜ್ಯದ ಅನೇಕ ವಿಚಾರವಾದಿಗಳು, ಸಾಹಿತಿಗಳು, ಹೋರಾಟಗಾರರು ಉಪವಾಸದ ಸ್ಥಳಕ್ಕೆ ಬಂದು ತಮ್ಮ ಬೆಂಬಲ ಶಾಮಣ್ಣವರಿಗೆ ಸೂಚಿಸುತ್ತಿದ್ದಾಗ ನವ ತರುಣರು ಅಧ್ಯಯನ ಶಿಬಿರವನ್ನಾಗಿ ಮಾರ್ಪಡಿಸಿಕೊಂಡಿದ್ದರು. ನರಸಿಂಹ ತರಹದ ಕವಿ ಮನಸ್ಸಿನ ವ್ಯಕ್ತಿತ್ವಗಳು ಮೂರು ಹೊತ್ತೂ ಶಾಮಣ್ಣನವರೊಂದಿಗೆ ಕೂತು ವಿಚಾರಗಳನ್ನು ಆಲಿಸುತ್ತಿದ್ದವು.

ನಾಡು ಕಂಡ ಬಹುದೊಡ್ಡ ಪತ್ರಕರ್ತ ಸಾಹಿತಿ ಪಿ.ಲಂಕೇಶ್ ರವರು ನೂರಾರು ಕವಿತೆಗಳನ್ನು ಬರೆದಿದ್ದಾರೆ. ಆದರೆ ಅವರ ‘ಅವ್ವ’ ಕವಿತೆಯನ್ನು ಈಗಲೂ ಮೆಲುಕು ಹಾಕುತ್ತೇವೆ. ಹೊಸದಾಗಿ ಓದಿದಾಗಲೆಲ್ಲ ತನ್ನ ಅರ್ಥವನ್ನು ಹೊಸ ಬಗೆಯಾಗಿ ನಮ್ಮನ್ನು ಕಾಡುತ್ತಲೇ ಇದೆ. ಅಂತೆಯೇ ಮಧುಗೆರೆ ನರಸಿಂಹ ಅಂದು ಬರೆದದ್ದು ಕೇವಲ ಎರಡೇ ಕವಿತೆಗಳು. ‘ಜೋಗಿ ಗುಡ್ಡದ ಕಿಬ್ಬದಿಯಲ್ಲಿ’ ಮತ್ತು ‘ಪದ’ ಎಂಬ ಕವಿತೆಗಳು. ನನ್ನಂತಹ ಎರಡನೇ ಪಿಯುಸಿ ಓದುತ್ತಿದ್ದವರಿಗೆ ಇವರು ಹೇಳುತ್ತಿದ್ದ ‘ಜೋಗಿ ಗುಡ್ಡದ ಕಿಬ್ಬದಿಯಲ್ಲಿ’ ಕವಿತೆ ಇಂದೂ ಕೂಡಾ ಗುನುಗುವಂತೆ ಮಾಡುವ ಶಕ್ತಿ ಹೊಂದಿದೆ.

ರೈತ ಚಳವಳಿ ಉತ್ಕೃಷ್ಟವಾಗಿ ಬೆಳೆಯಿತು. ನಾವೆಲ್ಲ ಅದರೊಳಗೆ ಒಂದಾಗುತ್ತಾ ಹೋದೆವು. 1984ರಲ್ಲಿ ಲೋಕಸಭಾ ಚುನಾವಣೆ ಬಂತು. ಮತ್ತೆ ರಾಸ್ತರೋಖೋ ಚಳವಳಿ ನಡೆಯಿತು. ಪಿಕೆಟಿಂಗು, ರ್‍ಯಾಲಿ, ಪಾದಯಾತ್ರೆಗಳು ಶುರುವಾದವು. ರೈತಸಂಘ ಚುನಾವಣೆಗೂ ದುಮುಕಿತು. ಹತ್ತಾರು ಇಬ್ಭಾಗಗಳೂ ಆದವು. ರೈತ ಚಳವಳಿಯ ಮಹಾನ್ ನಾಯಕರಾಗಿದ್ದ ಹೆಚ್.ಎಸ್ ರುದ್ರಪ್ಪ, ಎನ್.ಡಿ ಸುಂದ್ರೇಶ್, ಪ್ರೊ.ನಂಜುಂಡಸ್ವಾಮಿಯವರು ಅಸ್ತಂಗತರಾದರು. ಈ ಎಲ್ಲ ಘಟನೆಗಳ ಮಧ್ಯೆ ಮಧುಗೆರೆ ನರಸಿಂಹ ಯಾರಿಗೂ ನೆನಪಾಗಲೇ ಇಲ್ಲ. ಅತ್ಯುತ್ತಮ ರಂಗ ನಟ, ಕ್ರಿಕೆಟ್ ಆಟಗಾರ, ವಾಲಿಬಾಲ್ ಪಟು ಇದೆಲ್ಲಕ್ಕಿಂತ ಮುಖ್ಯವಾಗಿ ರೈತ ಸಂಘದ ಪತ್ರಿಕಾ ಹೇಳಿಕೆಗಳಿಗೆ ತನ್ನ ಮುದ್ದಾದ ಅಕ್ಷರಗಳ ಮೂಲಕ ಕಲಾತ್ಮಕ ಮೆರಗು ನೀಡುತ್ತಿದ್ದ ಮಧುಗೆರೆ ಬಚ್ಚ ಶೇರೆಗಾರರ ಮಗ ನರಸಿಂಹ ಎಲ್ಲಿ ಹೋದರು?

462729926 3998721220358989 8871500206398817689 n

ಉತ್ಕಷ್ಟ ದರ್ಜೆಯ ಸಾಹಿತಿಗಳನ್ನೆಲ್ಲ ತನ್ನ ಕಾಲೇಜು ದಿನಗಳಲ್ಲಿ ಓದಿಕೊಂಡಿದ್ದ ನರಸಿಂಹಣ್ಣ ಇತ್ತೀಚೆಗೆ ಸಿಗಲೇ ಇಲ್ಲ. ಮೊನ್ನೆ ನಮ್ಮ ಮನೆಗೆ ನೆಂಟರೊಬ್ಬರು ಬಂದಿದ್ದರು. ವಿಚಾರಿಸಿದೆ. ಇವರಿರುವ ವಿಳಾಸ ಕೊಟ್ಟರು. ಯುವ ಗೆಳೆಯ ನಿಶ್ಚಲ್ ಜಾದೂಗಾರನೊಂದಿಗೆ ನಿನ್ನೆ ರಾತ್ರಿ ಹೊರಟೇ ಬಿಟ್ಟೆ. ಕೊಪ್ಪ ತಾಲೂಕಿನ ನಿಲುವಾಗಿಲು ಹತ್ತಿರದ ಯಡತಾಳು ಎಂಬ ಕುಗ್ರಾಮದಲ್ಲಿ ಇವರನ್ನು ಪತ್ತೆ ಹಚ್ಚಲಾಯಿತು. ಗುಲಾಬಿ ಎಂಬ ಹೆಸರಿನ ಇವರ ಅಕ್ಕ ಮತ್ತು ಬಾವ ಬಗ್ಗು ಪೂಜಾರಿಯವರ ಜೊತೆ ಕಳೆದ ಮುವತ್ತು ವರ್ಷಗಳಿಂದ ಇದ್ದಾರೆ. ಅಕ್ಕ ಬಾವನವರೆ ಇವರಿಗೆ ತಂದೆ-ತಾಯಿಗಳಾಗಿದ್ದಾರೆ.

ನರಸಿಂಹಣ್ಣ ಜಳ್ಳಾಗಿದ್ದರು. ಲಾಚಾರಾಗಿದ್ದರು. ಮಾತ್ರೆಗಳನ್ನು ನಿಯಮಿತವಾಗಿ ತೆಗೆದುಕೋಳ್ಳದ ತನ್ನ ಮಾವನ ಬಗ್ಗೆ ಅಳಿಯನಿಗೆ ಬೇಸರವಿತ್ತು. ಆದರೆ ಇವರೆಲ್ಲರ ಆರೈಕೆಯಲ್ಲಿ ಪ್ರೀತಿ ತುಂಬಿ ತುಳುಕುತ್ತಿದೆ. ಖುಷಿ . ನರಸಿಂಹನಲ್ಲಿ ಕವಿ ಮನಸ್ಸು ಹಾಗೇ ಉಳಿದುಕೊಂಡಿದೆ. ಕತ್ತಲಾಗುತ್ತಾ ಬಂದರೂ ತನ್ನ ಗುರು ಕಡಿದಾಳು ಶಾಮಣ್ಣನವರನ್ನು ನೆನಪಿಸಿಕೊಳ್ಳದೇ ಇರಲಿಲ್ಲ. ತೇಜಸ್ವಿಯವರು ತೀರಿ ಹೋದದ್ದೇ ಇವರಿಗೆ ಗೊತ್ತಿಲ್ಲ. ಪೂರ್ಣ ಖಿನ್ನತೆಗೆ ಒಳಗಾಗಿ, ಮಂಕಾಗಿ, ಒಂದು ಕಡೆ ಸುಮ್ಮನೆ ಕೂತು ದಿಗಂತ ದಿಟ್ಟಿಸುವುದೇ ಕಾಯಕವಾಗಿದೆ.

ಇಂತಹ ನರಸಿಂಹಣ್ಣ ಅಂದು ನಮ್ಮೂರಿನ ಆಟದ ಬೈಲಿನಲ್ಲಿ ನಡೆಯುತ್ತಿದ್ದ ಬಾಲ್ ಬ್ಯಾಡ್ಮಿಂಟನ್ ಕೋರ್ಟಿನಲ್ಲಿ ಸೆಂಟರ್‍‌ನಲ್ಲಿ ನಿಂತು ಹೊಡೆಯುತ್ತಿದ್ದ ಷಾಟ್‌ಗಳು ನೆನಪಾದವು. ತಲೆಗೆ ಕರ್ಚೀಫು ಕಟ್ಟಿಕೊಂಡು ಕ್ರಿಕೆಟ್ ಬ್ಯಾಟು ಹಿಡಿದುಕೊಳ್ಳುತ್ತಿದ್ದ ಶೈಲಿ ಕಣ್ಣ ಮುಂದೆ ನಿಂತಿತು. ಈಗ ದೈಹಿಕವಾಗಿ ಬಹಳ ಬಹಳ ಜರ್ಜರಿತರಾಗಿದ್ದಾರೆ. ಇವರ ಲಾಚಾರುತನದ ಹಿಂದೆ ಹತ್ತು ಹಲವು ಹೊರಗಿನ ಕಾರಣಗಳಿವೆ. ಅದನ್ನೆಲ್ಲ ಹೇಳುವ ಸಮಯ ಇದಲ್ಲ. ಆದರೆ ಯಾವುದೇ ಹೋರಾಟಗಳು ಜಾಣ ಕುರುಡುತನದಲ್ಲಿ ಒಬ್ಬ ಧೀಮಂತ ಹೋರಾಟಗಾರನನ್ನು ನಿರ್ಲಕ್ಷಿಸಬಾರದು. ಹೊಸಕಿ ಹಾಕಬಾರದು. ಮತ್ತೆ ಮತ್ತೆ ನಾನು ಮತ್ತು ನಿಶ್ಚಲ್ ಇವರನ್ನು ನೋಡಿಕೊಂಡು ಮಾತಾಡಿಸಿಕೊಂಡು ಬರುವ ಬಗ್ಗೆ ಯೋಜನೆ ಸಿದ್ದಪಡಿಸಿಕೊಂಡಿದ್ದೇವೆ. ಹೇಗಾಗುತ್ತೋ ಏನೋ ಗೊತ್ತಿಲ್ಲ…

Nempe Devaraj
ನೆಂಪೆ ದೇವರಾಜ್
+ posts

ಪತ್ರಕರ್ತ, ಲೇಖಕ, ಸಂಘಟಕ, ಹೋರಾಟಗಾರ ಮತ್ತು ಕೃಷಿಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ನೆಂಪೆ ದೇವರಾಜ್
ನೆಂಪೆ ದೇವರಾಜ್
ಪತ್ರಕರ್ತ, ಲೇಖಕ, ಸಂಘಟಕ, ಹೋರಾಟಗಾರ ಮತ್ತು ಕೃಷಿಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X