ನೃತ್ಯ ತಂಡಕ್ಕೆ ಸುಮಾರು 11 ಕೋಟಿ ರೂಪಾಯಿ ವಂಚಿಸಿದ ಆರೋಪದಲ್ಲಿ ನೃತ್ಯ ನಿರ್ದೇಶಕ ರೆಮೋ ಡಿಸೋಜಾ, ಅವರ ಪತ್ನಿ ಮತ್ತು ಇತರ ಐವರ ವಿರುದ್ಧ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
26 ವರ್ಷದ ನರ್ತಕಿ ನೀಡಿದ ದೂರಿನ ಆಧಾರದ ಮೇಲೆ ಅಕ್ಟೋಬರ್ 16ರಂದು ಮೀರಾ ರೋಡ್ ಪೊಲೀಸ್ ಠಾಣೆಯಲ್ಲಿ ರೆಮೋ ಡಿಸೋಜಾ, ಅವರ ಪತ್ನಿ ಲಿಜೆಲ್, ಇತರ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. 2018ರಲ್ಲೇ ವಂಚನೆ ಮಾಡಿರುವ ಕಾರಣ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 465 (ನಕಲಿ), 420 (ವಂಚನೆ) ಅಡಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಸಚಿವ ಪ್ರಲ್ಹಾದ್ ಜೋಶಿ ಸಹೋದರನ ವಂಚನೆ ಪ್ರಕರಣಗಳೂ, ಸಂಬಂಧವಿಲ್ಲದ ಸಬೂಬುಗಳೂ
ಎಫ್‌ಐಆರ್‌ನ ಪ್ರಕಾರ, ದೂರುದಾರರು ಮತ್ತು ಅವರ ತಂಡವು 2018 ಮತ್ತು ಜುಲೈ 2024ರ ನಡುವೆ ವಂಚನೆಗೆ ಒಳಗಾಗಿದೆ. ತಂಡವು ದೂರದರ್ಶನ ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ನೀಡಿ ಗೆದ್ದಿದೆ. ಆರೋಪಿಗಳು ಗುಂಪು ತಮ್ಮದೆಂದು ಹೇಳಿ 11.96 ಕೋಟಿ ರೂಪಾಯಿ ಬಹುಮಾನವನ್ನು ಪಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣದ ಇತರ ಆರೋಪಿಗಳು ಓಂಪ್ರಕಾಶ್ ಶಂಕರ್ ಚೌಹಾಣ್, ಫ್ರೇಮ್ ಪ್ರೊಡಕ್ಷನ್ ಕಂಪನಿ, ರೋಹಿತ್ ಜಾಧವ್, ಪೊಲೀಸ್ ಸಿಬ್ಬಂದಿ ವಿನೋದ್ ರಾವುತ್ ಮತ್ತು ರಮೇಶ್ ಗುಪ್ತಾ ಎಂಬವರಾಗಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
