ನುಡಿದಂತೆ ನಡೆಯಬೇಕು, ಬರೆದಂತೆ ಬದುಕಬೇಕು’ ಎನ್ನುವ ಮಾತಿಗೆ ಡಾ.ಬರಗೂರು ರಾಮಚಂದ್ರಪ್ಪನವರ ಜೀವನ ಮತ್ತು ಸಾಹಿತ್ಯ ಒಂದು ಉತ್ತಮ ಉದಾಹರಣೆಯಾಗಿದೆ ಎಂದು ಚಲನಚಿತ್ರ ನಟ ಹನುಮಂತೇಗೌಡ ಹೇಳಿದರು.
ಶಿರಾ ನಗರದ ಆರ್.ಮುದ್ದುರಂಗೇಗೌಡ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಜನ್ಮದಿನದ ಅಂಗವಾಗಿ ಅವರ ಬದುಕು ಬರಹ ಕುರಿತ ಬಿ.ಇಡಿ ಪ್ರಶಿಕ್ಷಣಾರ್ಥಿಗಳೊಂದಿಗೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ನಾಡಿನ ಹೆಮ್ಮೆಯ ಕವಿಗಳು, ಚಲನಚಿತ್ರ ನಿರ್ದೇಶಕರು, ಸಾಹಿತಿಗಳಾದ ನಾಡೋಜ ಬರಗೂರು ರಾಮಚಂದ್ರಪ್ಪ ಎಂದೂ ಯಾವುದೇ ಧರ್ಮ, ರಾಜಕೀಯದ ಬಗ್ಗೆ ಮಾತನಾಡದೆ ಯಾವಾಗಲೂ ಮನುಷ್ಯತ್ವ, ಪ್ರೀತಿಯ ಬಗ್ಗೆ ಮಾತನಾಡಿದವರು. ಅವರ ಎಲ್ಲಾ ಕೃತಿಗಳಲ್ಲೂ ಯಾವುದೇ ಗೊಂದಲವಿಲ್ಲ. ಎಲ್ಲವೂ ಸ್ಪಷ್ಟವಾಗಿ ವಿವರಿಸಿದ್ದಾರೆ. ಅವರ ಭಾಷಣವೆಂದರೂ ಅತ್ಯದ್ಭುತವಾಗಿರುತ್ತದೆ ಎಂದರು.
ಆರ್.ಮುದ್ದುರಗೇಗೌಡ ಶಿಕ್ಷಣ ಮಹಾವಿದ್ಯಾಲಯದ ಅಧ್ಯಕ್ಷ ಎಂ.ರಂಗನಾಥ್ ಮಾತನಾಡಿ ನಾಡೋಜ ಬರಗೂರು ರಾಮಚಂದ್ರಪ್ಪ ಅವರು ಶಿರಾ ತಾಲ್ಲೂಕಿನ ಬರಗೂರಿನಲ್ಲಿ ಜನಿಸಿ ಇಡೀ ದೇಶವೇ ಮೆಚ್ಚುವಂತಹ ಚಲನಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಅವರ ಕೃತಿಗಳು ಎಂದೆಂದಿಗೂ ಜನಮಾನಸದಲ್ಲಿ ಉಳಿಯುವಂತಹುಗಳಾಗಿವೆ. ಬರಗೂರು ರಾಮಚಂದ್ರಪ್ಪ ಅವರು ಇಂದು 76ನೇ ಜನ್ಮದಿನಾಚರಣೆ ಆಚರಿಸಿಕೊಳ್ಳುತ್ತಿದ್ದು, ಅವರ 100ನೇ ಜನ್ಮ ದಿನಾಚರಣೆಯನ್ನು ನಮ್ಮ ಕಾಲೇಜಿನಲ್ಲಿಯೇ ಆಚರಿಸಲಿಕ್ಕೆ ದೇವರು ಆರ್ಶೀವಾದ ಮಾಡಲಿ. ದೇಶವನ್ನು ಕಟ್ಟುವ ಕೆಲಸಕ್ಕೆ ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿರಲಿ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಪಿ.ಪಾಂಡುರಂಗಯ್ಯ, ತಾಲೂಕು ರಂಗಭೂಮಿ ಕಲಾವಿದರ ಸಂಘದ ವಿ.ಎಸ್.ಚಲಪತಿ, ಸಾಹಿತಿ ಡಾ.ದ್ವಾರನಕುಂಟೆ ಲಕ್ಷ್ಮಣ್, ನವೋದಯ ಯುವ ವೇದಿಕೆ ಅಧ್ಯಕ್ಷ ಜಯರಾಮಕೃಷ್ಣ, ಉಪನ್ಯಾಸಕ ಹೆಂದೊರೆ ಶಿವಣ್ಣ, ಡಾ.ಶಂಕರಪ್ಪ, ಸಕ್ಕರ ನಾಗರಾಜು, ಮಹದೇವಪ್ಪ, ಪ್ರಕಾಶ್, ಧರಣಿಕುಮಾರ್, ಗಂಗಾಧರ್, ಭೂತೇಶ್ ಸೇರಿದಂತೆ ಹಲವರು ಹಾಜರಿದ್ದರು