ರಾಜಕೀಯ ಅಸ್ತಿತ್ವಕ್ಕಾಗಿ ಜಾತಿಗಣತಿ ವರದಿಯನ್ನು ವಿರೋಧ ಮಾಡುತ್ತಿದ್ದಾರೆ. ಆದರೆ ಇದರಿಂದ ಅನೇಕ ಹಿಂದುಳಿದ ವರ್ಗ, ಜಾತಿಗಳ ಏಳಿಗೆಗೆ ಸಹಾಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಯಾರ ಒತ್ತಡಕ್ಕೂ ಮಣಿಯದೇ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಜಾತಿಗಣತಿ ವರದಿಯನ್ನು ಸಚಿವ ಸಂಪುಟದಲ್ಲಿ ಅನುಮೋದಿಸಿ ಬಿಡುಗಡೆಮಾಡಬೇಕು ಎಂದು ಹಾಲುಮತ ಸಮಾಜದ ಮುಖಂಡರು ಒತ್ತಾಯಿಸಿದರು.
ದಾವಣಗೆರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹಾಲುಮತ ಸಮಾಜ ಮಹಾಸಭಾದ ಜಿಲ್ಲಾಧ್ಯಕ್ಷ ಸಿ ವೀರಣ್ಣ ಮಾತನಾಡಿ, “2015ರಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ಸರ್ಕಾರದಿಂದ ₹165 ಕೋಟಿಗೂ ಅಧಿಕ ಹಣವನ್ನು ಖರ್ಚು ಮಾಡಿ ಕರ್ನಾಟಕದ ರಾಜ್ಯದಲ್ಲಿರುವ ಎಲ್ಲ ಸಮುದಾಯದ ಪ್ರತಿ ಮನೆಯ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಮುಂದಿನ ವಾರ ನಡೆಯಲಿರುವ ಸಚಿವ ಸಂಪುಟದಲ್ಲಿ ಅನುಮೋದನೆ ನೀಡುವುದಾಗಿ ಮುಖ್ಯಮಂತ್ರಿಗಳು ಹೇಳಿರುವುದು 9 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ವರದಿಗೆ ಮರುಜೀವ ನೀಡಿದಂತಾಗಿದೆ” ಎಂದು ತಿಳಿಸಿದರು.
“ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಯಾರ ಒತ್ತಡಕ್ಕೂ ಮಣಿಯದೇ ಗಟ್ಟಿಯಾದ ನಿರ್ಧಾರದಿಂದ ಸಾರ್ವಜನಿಕವಾಗಿ ಅನುಮೋದಿಸಿ ಬಿಡುಗಡೆಗೊಳಿಸಬೇಕು. ರಾಜ್ಯದ ಎಲ್ಲ ಸಮುದಾಯಗಳ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಅಸಮತೋಲನ ಸರಿಪಡಿಸಲು ಸಮಸಮಾಜ ನಿರ್ಮಾಣ ಮಾಡಲು, ದೇಶದ ಸಂಪತ್ತು ಎಲ್ಲ ಸಮುದಾಯಗಳಿಗೂ ಸಮಾನನಾಗಿ ಹಂಚಿಕೆಯಾಗಲು ಕಾಂತರಾಜ ವರದಿ ಸಹಕಾರಿಯಾಗಲಿದೆ. ಎಲ್ಲ ಸಮುದಾಯಗಳ ಬಡವರಿಗೆ, ಮಧ್ಯಮ ವರ್ಗದವರಿಗೆ ಅನುಕೂಲವಾಗುತ್ತದೆ. ಇದರಲ್ಲಿ ಯಾವುದೇ ತಾರತಮ್ಯ ಇರುವುದಿಲ್ಲ. ಈ ವಿಷಯವನ್ನು ರಾಜ್ಯದ ಎಲ್ಲ ಸಮುದಾಯಗಳೂ ಅರ್ಥ ಮಾಡಿಕೊಳ್ಳಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ರೈತರು ದೃತಿಗೆಡಬಾರದು, ಸರ್ಕಾರ ರೈತರ ಪರವಾಗಿದೆ: ಸಚಿವ ಮಧು ಬಂಗಾರಪ್ಪ
“ಸಮೀಕ್ಷಾ ವರದಿ ಬಿಡುಗಡೆ ಮಾಡದೆ, ವರದಿಯನ್ನು ಓದದೆ ಹಾಗೂ ರಾಜ್ಯದ ಎಲ್ಲ ಸಮುದಾಯದ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಅಧ್ಯಯನ ವರದಿಯನ್ನು ಜಾತಿಗಣತಿಯೆಂದು ತಪ್ಪಾಗಿ ಅರ್ಥೈಸಿ ಬಿಡುಗಡೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ರಾಜ್ಯದ ಪ್ರತಿ ಕುಟುಂಬದ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಅಧ್ಯಯನ ವರದಿಯಲ್ಲಿನ ರಾಜ್ಯದ ಎಲ್ಲ ಸಮುದಾಯಗಳಲ್ಲಿನ ಸ್ಥಿತಿಗತಿ ತಿಳಿಯಬೇಕಾದರೆ ಸಮೀಕ್ಷಾ ವರದಿ ಬಿಡುಗಡೆಯಾಗಬೇಕು. ನಮ್ಮ ಹಕ್ಕು ನಾವು ಪಡೆಯಲು ಅನುಕೂಲವಾಗಲಿದೆ. ಆದ್ದರಿಂದ ಕರ್ನಾಟಕ ರಾಜ್ಯದಲ್ಲಿರುವ ಎಲ್ಲ ಸಮುದಾಯದವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷಾ ವರದಿಯನ್ನು ಸಚಿವ ಸಂಪುಟದಲ್ಲಿ ಅನುಮೋದಿಸಿ ಸಾರ್ವಜನಿಕವಾಗಿ ಬಿಡುಗಡೆಗೊಳಿಸಬೇಕು. ಒಂದು ವೇಳೆ ಯಾರದ್ದೋ ಒತ್ತಡಗಳಿಗೆ ಮಣಿದು, ಹಿಂದೇಟು ಹಾಕಿದರೆ ರಾಜ್ಯಾದ್ಯಂತ ಹಾಲುಮತ ಮಹಾಸಭಾ ಹೋರಾಟಕ್ಕೆ ಕರೆ ನೀಡಲಾಗುತ್ತದೆ. ಬೃಹತ್ ಮಟ್ಟದಲ್ಲಿ ವಿಧಾನಸೌಧ ಚಲೋ ಕಾರ್ಯವನ್ನೂ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಚಂದ್ರು ದೀಟೂರ್, ಎಸ್ ಎಂ ಸಿದ್ದಲಿಂಗಪ್ಪ, ನಾಗರಾಜ್, ಹನುಮಂತಪ್ಪ ಸಲ್ಲಳ್ಳಿ, ಮಂಜುನಾಥ್ ಸಂಕಲಿಪುರ ಇದ್ದರು.