ವಿವಿ ಸಾಗರ ಕೋಡಿಯನ್ನು 130 ಅಡಿಗಳಿಂದ ಐದಾರು ಅಡಿ ಕೆಳಗೆ ಇಳಿಸುವ ₹120 ಕೋಟಿ ಯೋಜನೆಯ ಪ್ರಸ್ತಾವನೆಯನ್ನು ವೋಟ್ ಬ್ಯಾಂಕ್ ರಾಜಕರಣೀಯ ಷಡ್ಯಂತ್ರದಂತೆ, ತಾಳಕ್ಕೆ ತಕ್ಕಂತೆ ಕುಣಿಯುವ ಎಂಜಿನಿಯರ್‌ಗಳು ಪ್ರಸ್ತಾವನೆ ಸಲ್ಲಿಸಿರುವುದು ಖಂಡನೀಯ. ಯಾವುದೇ ಕಾರಣಕ್ಕೂ ಇದು ನಡೆಯಲು ಬಿಡುವುದಿಲ್ಲ ಎಂದು ಕಸವನಹಳ್ಳಿ ರಮೇಶ್ ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಪ್ರವಾಸಿ ಮಂದಿರದಲ್ಲಿ ವಿವಿಸಾಗರ ಹಾಗೂ ಭದ್ರ ಮೇಲ್ದಂಡೆ ಅಚ್ಚುಕಟ್ಟುದಾರರ ಹಿತರಕ್ಷಣಾ ಸಮಿತಿಯಿಂದ ʼವೋಟ್ ಬ್ಯಾಂಕ್ ರಾಜಕಾರಣಕ್ಕೆ ವಿವಿಸಾಗರ ಬಲಿ ಕೊಡಲಾಗದುʼ ಎಂಬ ಘೋಷ ವಾಕ್ಯದಡಿ ಹಮ್ಮಿಕೊಂಡಿದ್ದ ವಿವಿಧ ಸಂಘಟನೆಗಳ ಮುಖಂಡರುಗಳ ಸಭೆಯಲ್ಲಿ ಮಾತನಾಡಿದರು.
“ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಮಹಾರಾಜರು ತಮ್ಮ ದೂರದೃಷ್ಠಿ, ಇಂಗ್ಲೆಂಡಿನ ತಜ್ಞ ಎಂಜಿನಿಯರ್‌ಗಳ ತಂತ್ರಜ್ಞಾನದ ಬಳಕೆ ಮಾಡಿ ಅತ್ಯಂತ ಗುಣಮಟ್ಟ ಹಾಗೂ ದೀರ್ಘಾವಧಿ ಬಳಕೆಯ 130 ಅಡಿಗಳ ವಿವಿ ಸಾಗರ ಜಲಾಶಯದ ಕೋಡಿಯನ್ನು ತಗ್ಗಿಸುವ ಹುನ್ನಾರ ನಡೆಸಿರುವುದು ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ವಾಣಿವಿಲಾಸ ಸಾಗರ(ವಿವಿ ಸಾಗರ) ಜಲಾಶಯವನ್ನು ನಂಬಿಕೊಂಡು ಬಹುಪಯೋಗಿ ನೀರಿನ ಬಳಕೆ ಸರ್ಕಾರಿ ಯೋಜನೆಗಳು ಜಾರಿಯಲ್ಲಿದ್ದು, ಹಿರಿಯೂರು ಚಿತ್ರದುರ್ಗ ಚಳ್ಳಕೆರೆ, ಡಿಆರ್‌ಡಿಒ, ಬಹು ಗ್ರಾಮ ಕುಡಿಯುವ ನೀರಿನ ಯೋಜನೆ, ಹೊಸದುರ್ಗ, ಹೊಳಲ್ಕೆರೆ ತಾಲೂಕುಗಳು ಸೇರಿದಂತೆ ಬಹಳಷ್ಟು ಹಳ್ಳಿಗಳಿಗೆ ಕುಡಿಯುವ ನೀರಿನ ಆಶ್ರಯವಾಗಿರುವ ಹಿರಿಯೂರು ತಾಲೂಕಿನ ಅಚ್ಚುಕಟ್ಟು ವ್ಯಾಪ್ತಿಯ ರೈತರ ಬದುಕಿನ ಭಾಗವಾಗಿರುವ, ವೇದಾವತಿ ನದಿ ಪಾತ್ರದಲ್ಲಿ ನಿರ್ಮಿಸಲಾದ ಚೆಕ್ ಡ್ಯಾಮ್‌ಗಳು ವರ್ಷಪೂರ್ತಿ ನೀರಿನ ಆಶ್ರಯ ತಾಣಗಳಾಗಿವೆ. ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು ಭಾಗಕ್ಕೂ ನೀರಾವರಿ ಆಶ್ರಯವಾಗಿದೆ” ಎಂದರು.
“ಅಕ್ಕ ಪಕ್ಕದ ತಾಲೂಕು, ಜಿಲ್ಲೆಗಳ ಅಂತರ್ಜಲ ಸಂರಕ್ಷಣೆಯ ಕೇಂದ್ರ ಬಿಂದುವಾಗಿರುವ ಈ ಜಲಾಶಯದ ಕೋಡಿಯನ್ನು ತಗ್ಗಿಸುವುದು ಇತಿಹಾಸವನ್ನು ಅಪಮಾನಿಸಿದಂತೆ. 120 ವರ್ಷಗಳಿಗೂ ಹೆಚ್ಚು ಕಾಲ ಯಾವುದೇ ತೊಂದರೆಯಿಲ್ಲದೆ ನಿರಾತಂಕವಾಗಿ ಶಾಂತಿಯುತವಾಗಿ ಜನತೆಗೆ ನೀರುಣಿಸಿದ ಜಲಾಶಯಕ್ಕೆ ಕಂಟಕವಾಗುವ ಇಂತಹ ಯೋಜನೆಗಳನ್ನು ಪ್ರಾರಂಭದಲ್ಲಿಯೇ ಚಿವುಟಿ ಹಾಕಬೇಕು. ನಿರ್ಮಾಣವಾದ ಕಾಲದಿಂದಲೂ ಈವರೆಗೆ ಒಂದು ರೂಪಾಯಿ ನಿರ್ವಹಣಾ ವೆಚ್ಚವನ್ನು ಖರ್ಚು ಮಾಡದೆ, ಗಟ್ಟಿ ಮುಟ್ಟಾಗಿರುವ ಕೋಡಿಯನ್ನು ತಗ್ಗಿಸುವ ಹುನ್ನಾರ ಸಲ್ಲದು. ರಾಜಕಾರಣ ಅಧಿಕಾರ ಇಂದು ಇದ್ದು ನಾಳೆ ಹೋಗುತ್ತದೆ. ಆದರೆ ಬಹುಪಯೋಗಿ ವಿವಿಸಾಗರ ಜಲಾಶಯವನ್ನು ವಿರೂಪಗೊಳಿಸುವುದಾಗಲಿ ಅದರ ಗಾತ್ರವನ್ನು ಕಡಿಮೆ ಮಾಡುವುದಾಗಲಿ ನಡೆಯುವ ಕಾರ್ಯ ಯಾರಿಗೂ ಶೋಭೆ ತರುವಂತಹದ್ದಲ್ಲ” ಎಂದು ಕಿಡಿಕಾರಿದರು.
“ಜಲಾಶಯ ನಿರ್ಮಾಣ ಮಾಡಿದ ಎಚ್ ಡಿ ರೈಸ್ ಅವರ ದೂರ ದೃಷ್ಟಿ ಹಾಗೂ ವರದಿಯನ್ನು ಸರಿಯಾಗಿ ಓದದ, ಗ್ರಹಿಸದ, ಆಧುನಿಕ ಎಂಜಿನಿಯರ್‌ಗಳು, ವೋಟ್ ಬ್ಯಾಂಕ್ ರಾಜಕಾರಣಿಗಳು ಸೇರಿ ವೈಜ್ಞಾನಿಕವಾಗಿ ಕೋಡಿಯನ್ನು ಇಳಿಸುವ ಪ್ರಸ್ತಾವ ಯಾವುದೇ ಕಾರಣಕ್ಕೂ ಕಾರ್ಯಸಾಧುವಾಗಲು ಬಿಡುವುದಿಲ್ಲ. ಇದು ಭವಿಷ್ಯದ ಪ್ರಶ್ನೆ. ಇಂದಿನ ಮಕ್ಕಳು ಮುಂದೆ ನೆಲ ಜಲ ನಾಡು ನುಡಿ ಕೆರೆ ಜಲಾಶಯಗಳ ಬಗ್ಗೆ ಅನಾದರಣೆ ಮಾಡಲಿದ್ದಾರೆ. ಈ ಪೀಳಿಗೆಯ ನಾವುಗಳೇ ಕೊನೆಯ ಕೊಂಡಿ. ಆದ್ದರಿಂದ ತಾಲೂಕಿನ ಎಲ್ಲ ಸಂಘ ಸಂಸ್ಥೆಗಳವರು ರಾಜಕೀಯ ಪಕ್ಷದವರು ನಾಗರಿಕ ಸಂಘಟನೆಗಳು ಸಮಾಜಮುಖಿ ಚಿಂತಕರು ಸೇರಿ ವಿವಿ ಸಾಗರ ಸಾಗರವನ್ನು ಉಳಿಸಬೇಕು” ಎಂದು ಹೇಳಿದರು.
“ಜಲಾಶಯದ ರಕ್ಷಣೆಗೆ ನಿಂತಿರುವ ಕಣಿವೆ ಮಾರಮ್ಮ, ರಂಗನಾಥ ಸ್ವಾಮಿಯ ಶಾಪ ತಟ್ಟದೇ ಬಿಡದು. ಒಂದು ವೇಳೆ ಕೋಡಿ ಇಳಿಸುವ ಅವೈಜ್ಞಾನಿಕ ಹಾಗೂ ಜನವಿರೋಧಿ ಕಾಮಗಾರಿಯನ್ನು ಕೈಗೊಂಡರೆ ಜನಾಂದೋಲನದ ಮೂಲಕ ನಿಲ್ಲಿಸಲಾಗುವುದು. ಅಲ್ಲದೆ ಸೂಕ್ತ ನ್ಯಾಯಾಲಯದಲ್ಲಿ ಈ ಬಗ್ಗೆ ದಾವೆ ಹೂಡಿ ಕಾನೂನಾತ್ಮಕ ರಕ್ಷಣೆ ಪಡೆಯಲಾಗುವುದು” ಎಂದು ಕಸವನಹಳ್ಳಿ ರಮೇಶ್ ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಮಳೆಗೆ ಸಿಲಕಿ ಹಾನಿಗೊಳಗಾದ ಮೆಕ್ಕೆಜೋಳ; ಪರಿಹಾರದ ನಿರೀಕ್ಷೆಯಲ್ಲಿ ರೈತರು
ರೈತ ಸಂಘದ ಅಧ್ಯಕ್ಷ ಕೆ ಟಿ ತಿಪ್ಪೇಸ್ವಾಮಿ ಮಾತನಾಡಿ, “ಜಲಾಶಯದ ಕೋಡಿ ತಗ್ಗಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ರಕ್ತ ಕೊಟ್ಟಾದರೂ ಕೋಡಿ ರಕ್ಷಿಸಿಕೊಳ್ಳುತ್ತೇವೆ. ತಾಲೂಕಿನ ಜಲಮೂಲಗಳ ಅಭಿವೃದ್ಧಿ ಮಾಡಬೇಕು ಇಲ್ಲವಾದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತೇವೆ. ನಮ್ಮ ಸಂಘಟನೆಯಿಂದ ಸಂಪೂರ್ಣ ಬೆಂಬಲ ಕೊಡುತ್ತೇವೆ” ಎಂದು ಹೇಳಿದರು.
ಕೃಷಿಕ ಸಮಾಜದ ಅಧ್ಯಕ್ಷ ಎಚ್ ಆರ್ ತಿಮ್ಮಯ್ಯ, ನಿರ್ದೇಶಕರಾದ ಆರ್ ಕೆ ಗೌಡ್ರು, ಪಿಟ್ಲಾಲಿ ಶ್ರೀನಿವಾಸ್, ಬಬ್ಬೂರ್ ಸುರೇಶ್, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಗಡಾರಿ ಕೃಷ್ಣಪ್ಪ, ವಾಲ್ಮೀಕಿ ಮಹಾಸಭಾ ಜೆ ಬಿ ರಾಜು, ಆರ್ಯವೈಶ್ಯ ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ್, ನಾಗೇನಹಳ್ಳಿ ಮೂಡಲಗಿರಿಯಪ್ಪ, ಕುಂಚಿಟಿಗರ ಸಂಘದ ಪ್ರಧಾನ ಕಾರ್ಯದರ್ಶಿ ಕುಬೇರಪ್ಪ, ರಾಮಚಂದ್ರ ಕಸವನಹಳ್ಳಿ, ನಂದಿಹಳ್ಳಿ ರಂಗಸ್ವಾಮಿ, ಬೀರನಹಳ್ಳಿ ಶಿವಣ್ಣ, ರಾಜಶೇಖರ, ಕರಿಬಸಣ್ಣ, ಬಂಗಾರಪ್ಪ, ಪರಮೇನಹಳ್ಳಿ ಮಹಾಲಿಂಗಪ್ಪ ಇದ್ದರು.