ತಳಸಮುದಾಯದ ಜನರಿಗೆ ಸೌಲಭ್ಯಗಳ ಕುರಿತು ಮಾಹಿತಿ ತಿಳಿಸುವ ಕರ್ನಾಟಕ ಅನುಸೂಚಿತ ಜಾತಿಗಳು ಹಾಗೂ ಅನುಸೂಚಿತ ಬುಡಕಟ್ಟುಗಳ ಉಪ ಹಂಚಿಕೆ ಕಾಯ್ದೆ ಮತ್ತು ನಿಯಮಗಳ ಜಾಗೃತಿ ಕಾರ್ಯಾಗಾರ ಬಹಳ ಮುಖ್ಯ ಎಂದು ಶಿಕ್ಷಕ ರಾಮಚಂದ್ರ ಹಂಸನೂರ ಹೇಳಿದರು.
ಗದಗ ಪಟ್ಟಣದ ಚೇತನ್ ಕ್ಯಾಂಟೀನ್ ಹತ್ತಿರವಿರುವ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಜಾಗೃತಿ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ “ಕರ್ನಾಟಕ ಅನುಸೂಚಿತ ಜಾತಿಗಳು ಹಾಗೂ ಅನುಸೂಚಿತ ಬುಡಕಟ್ಟುಗಳ ಉಪಹಂಚಿಕೆ ಕಾಯ್ದೆ ಮತ್ತು ನಿಯಮಗಳ” ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ದಲಿತ ಬಹುಜನ ಚಳುವಳಿ ಮುಖಂಡ ಎಂ ವೆಂಕಟೇಶ್ ಮಾತನಾಡಿ, “ನಮ್ಮ ದಲಿತ ಸಮುದಾಯಗಳಿಗೆ ಸಾಕಷ್ಟು ಮಾಹಿತಿ ಕೊರತೆಯಿದೆ. ಹಾಗಾಗಿ ಸರಿಯಾಗಿ ಸೌಲಭ್ಯಗಳನ್ನು ಪಡೆದುಕೊಳ್ಳಲಾಗುತ್ತಿಲ್ಲ. ನೀವು ಈ ಕಾಯ್ದೆಯ ಬಗ್ಗೆ ತಿಳಿಯದೇ ಇರುವುದರಿಂದ, ಸರ್ಕಾರ ಮಟ್ಟದಲ್ಲಿ ಸರಿಯಾಗಿ ಕಾಯ್ದೆಯ ನಿಯಮಗಳು ಜಾರಿಯಾಗುತ್ತಿಲ್ಲ. ಈ ಕಾಯ್ದೆಯಲ್ಲಿ ವಯಕ್ತಿಕ ಅಭಿವೃದ್ಧಿ, ಸಾಮಾಜಿಕ ವಲಯ, ಅತಿಹೆಚ್ಚು ಜನರು ಇರುವ ಕಾಲೋನಿ, ಹೀಗೆ ಎಲ್ಲ ವಲಯಗಳಲ್ಲಿ ಈ ಕಾಯ್ದೆಯ ಮೂಲಕ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಜಾಗೃತರಾಗಬೇಕು. ಆಗ ನಮ್ಮನ್ನು ಯಾರೂ ಮೋಸಗೊಳಿಸಲು ಬರುವುದಿಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಪಾರ್ಕ್‌ನಲ್ಲಿ ವಾಕಿಂಗ್ ಮಾಡುತ್ತಲೇ ಸಾರ್ವಜನಿಕರ ಅಭಿಪ್ರಾಯ ಆಲಿಸಿದ ಶಾಸಕ ರವಿ ಗಣಿಗ
ದಲಿತ ಮುಖಂಡ ಸುರೇಶ್ ಛಲವಾದಿ ಮಾತನಾಡಿ, “ಬಡವರಿಗೆ ಸಾಕಷ್ಟು ಅನ್ಯಾಯಗಳಾಗುತ್ತಿವೆ. ಯಾರಿಗೆ ಸೌಲಭ್ಯಗಳು ಸಿಗಬೇಕು ಅವರಿಗೆ ಸಿಗುತ್ತಿಲ್ಲ. ಇದ್ದವರಿಗೆ ಈ ಸೌಲಭ್ಯಗಳು ಸಿಗುತ್ತಿವೆ. ಇಂತಹ ಕಾರ್ಯಾಗಾರಗಳ ಮೂಲಕ ನಾವೆಲ್ಲರೂ ಅರಿವು ಮೂಡಿಸಿಕೊಳ್ಳಬೇಕು” ಎಂದರು.
ಕಾರ್ಯಾಗಾರದಲ್ಲಿ ಚಂದ್ರಕಾಂತ್ ಚವ್ಹಾಣ, ಪ್ರಕಾಶ್ ಹೊಸಳ್ಳಿ, ಹಣಮಂತ ಪೂಜಾರ್, ಮಜುನಾಥ ಬುರಡಿ, ಶರೀಪ್ ಬಿಳಿಯಲಿ, ರಮೇಶ್ ಕೋಳೂರು, ಶರಣಪ್ಪ ಸಂಗನಾಳ, ಮುತ್ತು ಬಿಳಿಯಲಿ, ನಾಗಮ್ಮ ಸೇರಿದಂತೆ ಬಹುತೇಕರು ಇದ್ದರು.