ಸರ್ಕಾರಿ ಕೆಲಸ ಕೊಡಿಸುತ್ತೇನೆಂದು ಹೇಳಿ ಮಹಿಳೆಯೊಬ್ಬರಿಂದ ಬರೋಬ್ಬರಿ 47 ಲಕ್ಷ ರೂ. ಹಣ ಮತ್ತು ಸುಮಾರು 800 ಗ್ರಾಂ ಚಿನ್ನ (ಸುಮಾರು 45 ಲಕ್ಷ ರೂ. ಮೌಲ್ಯ) ಕಿತ್ತುಕೊಂಡು ವಂಚಿಸಿದ್ದ ಬೆಂಗಳೂರಿನ ಪೊಲೀಸ್ ಹೆಡ್‌ಕಾನ್ಸ್‌ಟೇಬಲ್ ಒಬ್ಬರನ್ನು ಅಮಾನತು ಮಾಡಲಾಗಿದೆ.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿ ಭಾಗ್ಯಮ್ಮ ನೀಡಿದ ದೂರಿನ ಮೇಲೆ ನಗರ ಸಶಸ್ತ್ರ ಮೀಸಲು ಪ್ರಧಾನ ಕಚೇರಿಯಲ್ಲಿ ಸೇವೆಸಲ್ಲಿಸುತ್ತಿದ್ದ ಪೊಲೀಸ್ ಪೇದೆ ಪ್ರಶಾಂತ್ ಕುಮಾರ್ ಎಂಬಾತನನ್ನು ಅಮಾನತು ಮಾಡಲಾಗಿದೆ. ಅಲ್ಲದೆ, ಆತನ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
“ಆರೋಪಿ ಹೆಡ್‌ಕಾನ್ಸ್‌ಟೇಬಲ್ ಪ್ರಶಾಂತ್ ಕುಮಾರ್ ತಮಗೆ 2011ರಲ್ಲಿ ಪರಿಚಯವಾಗಿದ್ದರು. ತನಗೆ ಹಲವು ಉನ್ನತ ಅಧಿಕಾರಿಗಳು ಪರಿಚಯವಿದ್ದಾರೆ. ಅವರೊಂದಿಗೆ ಮಾತನಾಡಿ ನನ್ನ ಇಬ್ಬರು ಮಕ್ಕಳಿಗೆ ಸರ್ಕಾರಿ ಕೆಲಸ ಕೊಡಿಸಿಸುತ್ತೇನೆಂದು ಹೇಳಿ ನಮ್ಮನ್ನು ಪ್ರಶಾಂತ್ ನಂಬಿಸಿದ್ದರು” ಎಂದು ಭಾಗ್ಯಮ್ಮ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.
“ಕೆಲ ದಿನಗಳ ಬಳಿಕ, ಮಂಜುನಾಥ್ ಪ್ರಸಾದ್ ಎಂಬ ವ್ಯಕ್ತಿಯನ್ನು ಕರೆ ತಂದಿದ್ದ ಪ್ರತಾಶ್, ಅವರು ತಮ್ಮ ಪೊಲೀಸ್ ಇನ್ಸ್‌ಪೆಕ್ಟರ್ ಎಂದು ಪರಿಚಯಿಸಿಕೊಟ್ಟಿದ್ದರು. ನನ್ನ ಇಬ್ಬರು ಮಕ್ಕಳಿಗೆ ಮೂರು ತಿಂಗಳಲ್ಲಿ ಎಫ್ಡಿಎ, ಎಸ್ಡಿಎ ಶ್ರೇಣಿಯ ಕೆಲಸ ಕೊಡಿಸುತ್ತೇವೆಂದು ಹೇಳಿದ್ದರು. ಕೆಲಸ ಕೊಡಿಸಲು ಹಣ ಬೇಕೆಂದು ಒಟ್ಟು 47 ಲಕ್ಷ ರೂ. ನಗದು ಮತ್ತು 857 ಗ್ರಾಂ. ಚಿನ್ನಾಭರಣ ಪಡೆದುಕೊಂಡರು. ಆದರೆ, ನನ್ನ ಮಕ್ಕಳಿಗೆ ಯಾವುದೇ ಸರ್ಕಾರಿ ಉದ್ಯೋಗ ಕೊಡಿಸಿಲ್ಲ” ಎಂದು ಭಾಗ್ಯಮ್ಮ ಆರೋಪಿಸಿದ್ದಾರೆ.
ಆರೋಪಿ ಪ್ರಶಾಂತ್, ಮಂಜುನಾಥ್ ಹಾಗೂ ಪ್ರಶಾಂತ್ ಪತ್ನಿ ದೀಪಾ ವಿರುದ್ಧ ಭಾಗ್ಯಮ್ಮ ದೂರು ನೀಡಿದ್ದು, ಮುವರ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪ್ರಶಾಂತ್ ತಲೆಮರೆಸಿಕೊಂಡಿದ್ದಾರೆ. ಪ್ರಶಾಂತ್‌ನನ್ನು ಸೇವೆಯಿಂದ ಅಮಾನತು ಮಾಡಲಾಗಿದ್ದು, ಅವರ ಬಂಧನಕ್ಕಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.