ದಾವಣಗೆರೆ | ವರವಾಗಬೇಕಿದ್ದ ಸ್ಮಾರ್ಟ್ ಸಿಟಿ ಯೋಜನೆಯೇ ಶಾಪ; ಭೀತಿಯಲ್ಲೇ ಜನರ ಬದುಕು

Date:

Advertisements

ಜನರಿಗೆ ವರವಾಗಬೇಕಿದ್ದ ಸ್ಮಾರ್ಟ್ ಸಿಟಿ ಯೋಜನೆಯೇ ಈ ಬಡಾವಣೆ ಜನರಿಗೆ ಶಾಪವಾಗಿ ಪರಿಣಮಿಸಿದ್ದು, ರಸ್ತೆಯ ಮೇಲೆ ಹರಿಯುವ ಚರಂಡಿ ನೀರು, ಮಳೆನೀರು ಎಲ್ಲವೂ ಮನೆಯೊಳಗೇ ನುಗ್ಗುತ್ತಿದೆ. ಶೌಚಾಲಯದ ಒಳಗಿನಿಂದಲೂ ನೀರು ನುಗ್ಗುವ ಆತಂಕದಲ್ಲಿ ಇಲ್ಲಿನ ಜನರು ಜೀವನ ಸಾಗಿಸುತ್ತಿದ್ದಾರೆ. 

ದಾವಣಗೆರೆ ನಗರದ ಮಧ್ಯಭಾಗದ ಪೊಲೀಸ್ ಕ್ವಾರ್ಟರ್ಸ್ ಪಕ್ಕದ ತಡೆಗೋಡೆಗೆ ಹೊಂದಿಕೊಂಡಿರುವ ಪಿಸಾಳೆ ಕಾಂಪೌಂಡ್‌ನ ನಿವಾಸಿಗಳ ಸಂಕಷ್ಟವಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಿಂದಾಗಿ ಪಿಸಾಳೆ ಕಾಂಪೌಂಡ್ ಒಳಗಿನ ಒಳಚರಂಡಿ ವ್ಯವಸ್ಥೆಯನ್ನು ಬದಲಾಯಿಸಿದ ನಂತರ ಇಲ್ಲಿನ ನಿವಾಸಿಗಳು ಸಂಕಷ್ಟವನ್ನು ಎದುರಿಸುತ್ತಿದ್ದಾರೆಂದು ತಿಳಿದುಬಂದಿದೆ. 

ಪ್ರತಿ ಬಾರಿ ಸ್ವಲ್ಪ ಹೆಚ್ಚಿನ ಮಳೆ ಬಂದಾಗ ಯಾವಾಗ ಎಲ್ಲಿ ಮನೆಗಳಿಗೆ ನೀರು ನುಗ್ಗುವುದೋ? ಎನ್ನುವ ಆತಂಕ ಪಿಸಾಳೆ ಕಾಂಪೌಂಡ್‌ನ ಪೊಲೀಸ್ ಕ್ವಾರ್ಟರ್ಸ್ ಕಾಂಪೌಂಡ್ ಪಕ್ಕದಲ್ಲಿನ ಮನೆಗಳ ನಿತ್ಯದ ಗೋಳಾಗಿದೆ. 

Advertisements

ಸ್ಮಾರ್ಟ್ ಸಿಟಿ ಯೋಜನೆಯಡಿ ಇಲ್ಲಿನ ಒಳಚರಂಡಿ ವ್ಯವಸ್ಥೆಯನ್ನು ಬದಲಾಯಿಸಿ ಸುಮಾರು ಎರಡ್ಮೂರು ವರ್ಷದ ಹಿಂದೆ ಹೊಸದಾಗಿ ಸಂಪರ್ಕ ಕಲ್ಪಿಸಿದ ಕಾರಣ ನೀರು ಸರಾಗವಾಗಿ ಹೋಗದೆ ಚೇಂಬರ್‌ಗಳಿಂದ, ಶೌಚಾಲಯದ ಒಳಗಿನಿಂದ ಮನೆಗಳಿಗೆ ನೀರು ನುಗ್ಗುವ ಸಂಕಷ್ಟ ಎದುರಾಗಿದೆ. ಜತೆಗೆ ರಸ್ತೆಯ ಮೇಲೆ ಹರಿಯುವ ನೀರು ಕೂಡ ಚರಂಡಿ ಮತ್ತು ಚೇಂಬರ್‌ಗಳಿಗೆ ಸರಾಗವಾಗಿ ಹೋಗದೆ ತಗ್ಗಿನಲ್ಲಿರುವ ಮನೆಗಳಿಗೆ ಹೋಗುವಂತಾಗಿದೆ.

ಕಳೆದ ವಾರದಿಂದ ಸುರಿಯುತ್ತಿರುವ ಭಾರೀ ಮಳೆಗೆ ದಾವಣಗೆರೆಯ ಪೊಲೀಸ್ ಕ್ವಾರ್ಟರ್ಸ್‌ ಮಧ್ಯಭಾಗದ ಪಕ್ಕದಲ್ಲಿರುವ ಪಿಸಾಳೆ ಕಾಂಪೌಂಡ್‌ಗೆ ಪೊಲೀಸ್ ಕ್ವಾರ್ಟರ್ಸ್‌ನ ಹತ್ತಾರು ಎಕರೆಗಳಲ್ಲಿ ಸಂಗ್ರಹವಾಗುವ ಕಾಲುವೆಯಲ್ಲಿ ಸರಾಗವಾಗಿ ನೀರು ಹೋಗದೆ ಕಾಂಪೌಂಡ್‌ಗೆ ಹೊಂದಿಕೊಂಡು ನಿಲ್ಲುತ್ತಿದ್ದು, ಅಲ್ಲಿಂದ ಪಿಸಾಳ ಕಾಂಪೌಂಡ್‌ಗೆ ನುಗ್ಗಿ ತೆಗ್ಗು ಪ್ರದೇಶದ ನಿವಾಸಿಗಳ ಮನೆಗಳಿಗೆ ನುಗ್ಗುತ್ತಿದೆ. ಇದಕ್ಕೆ ಸ್ಮಾರ್ಟ್ ಸಿಟಿ ಯೋಜನೆಯ ಅವೈಜ್ಞಾನಿಕ ಕಾಮಗಾರಿ ಕಾರಣವೆಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಈ ಮುಂಚೆ ಇದ್ದ ಹಳೆಯ ಒಳಚರಂಡಿ ಸಂಪರ್ಕ ವ್ಯವಸ್ಥೆ, ಸಮರ್ಪಕವಾಗಿದ್ದು, ಅದು ಹಳೇ ಪಿಬಿ ರಸ್ತೆಯ ಕಡೆಗೆ ಇರುವ ಚರಂಡಿ ಕಾಲುವೆಯ ಮೂಲಕ ನೀರು ಸರಾಗವಾಗಿ ಹೋಗುತ್ತಿತ್ತು. ಆದರೆ ಸ್ಮಾರ್ಟ್ ಸಿಟಿ ಯೋಜನೆಯಿಂದಾಗಿ ಅದನ್ನು ಬದಲಾಯಿಸಿ ಪೊಲೀಸ್ ಕಾಂಪೌಂಡ್ ಪಕ್ಕದಲ್ಲಿರುವ ಚೇಂಬರ್ ಕಡೆಗೆ ತಿರುಗಿಸಿ ಹೊಸ ಸಂಪರ್ಕ ಕಲ್ಪಿಸಿದ್ದು,  ಅತಿಹೆಚ್ಚು ಮಳೆ ಬಂದಾಗ ಪೊಲೀಸ್ ಕಾಂಪೌಂಡ್ ಕ್ವಾರ್ಟರ್ಸ್‌ ಒಳಗಿನ ಹತ್ತಾರು ಎಕರೆಗಳ ನೀರು ಕಾಂಪೌಂಡ್ ಗೋಡೆಗೆ ಶೇಖರವಾಗುತ್ತದೆ. ಅಲ್ಲಿಂದ ಪಿಸಾಳೆ ಕಾಂಪೌಂಡ್‌ಗೆ ನೀರು ನುಗ್ಗಿ ಚರಂಡಿ ಸಂಪರ್ಕ ವ್ಯವಸ್ಥೆಯಲ್ಲಿ ಸರಾಗವಾಗಿ ಹರಿಯದೇ, ನೀರು ನಿಂತು ಅದು ಮನೆಗಳಿಗೆ ಬಾಗಿಲ ಮೂಲಕ ನುಗ್ಗುವುದು ಮತ್ತು ಅವೈಜ್ಞಾನಿಕ ಒಳಚರಂಡಿ ಚೇಂಬರ್ ವ್ಯವಸ್ಥೆಯಿಂದ ಶೌಚಾಲಯಗಳ ಮೂಲಕ ಬಹುತೇಕ ಮನೆಗಳಿಗೆ ನುಗ್ಗುವುದು ಸಂಕಷ್ಟ ತಂದೊಡ್ಡಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು. 

ವೆಂಕಟೇಶ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಹಳೆಯ ವ್ಯವಸ್ಥೆ ಸಮರ್ಪಕವಾಗಿ ಸರಾಗವಾಗಿ ನೀರು ಸಾಗುವಂತಿತ್ತು. ಅದನ್ನು ಬದಲಾಯಿಸಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸಂಪರ್ಕಗಳನ್ನು ಕಲ್ಪಿಸಿದ ಕಾರಣ ನೀರು ಸರಾಗವಾಗಿ ಹೋಗದೆ ಮನೆಗಳಿಗೆ ನುಗ್ಗುತ್ತಿದೆ. ಸ್ವಲ್ಪ ಹೆಚ್ಚು ಮಳೆ ಬಂದರೆ ಪೊಲೀಸ್ ಕಾಂಪೌಂಡ್‌ನ ಹತ್ತಾರು ಎಕರೆಗಳಲ್ಲಿ ಸಂಗ್ರಹವಾಗುವ ನೀರು ಪಿಸಾಳೆ ಕಾಂಪೌಂಡ್‌ಗೆ ನುಗ್ಗುತ್ತಿದೆ.‌ ಇದರಿಂದ ಇಲ್ಲಿನ ತಗ್ಗು ಪ್ರವೇಶದ ಬಹುತೇಕ ಮನೆಗಳು ಸಂಕಷ್ಟಕ್ಕೆ ಒಳಗಾಗಿವೆ. ಮನೆಗಳ ಧವಸ ಧಾನ್ಯ, ವಸ್ತುಗಳು ನೀರಿಗೆ ಆಹುತಿಯಾಗುತ್ತಿವೆ.‌ ಇದಕ್ಕೆ ಇಲ್ಲಿನ ನಗರಸಭೆ ಸದಸ್ಯರಾಗಲಿ, ಪಾಲಿಕೆ ಅಧಿಕಾರಿಗಳಾಗಲಿ, ಯಾರೂ ಗಮನಹರಿಸಿಲ್ಲ. ಪರಿಹಾರ ಕಲ್ಪಿಸಬೇಕಿದ್ದ ನಗರಸಭೆ ಸದಸ್ಯರನ್ನು ನೋಡಿ ಸುಮಾರು ವರ್ಷಗಳ ಕಳೆದಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಕಾಂಪೌಂಡ್‌ನ ನಿವಾಸಿ ಪುಷ್ಪ ಲೋಕೇಶ್ ಮಾತನಾಡಿ “ರಾತ್ರಿ ಇಡೀ ನೀರನ್ನು ಹೊರ ಹಾಕೋದೇ ಆಗಿದೆ. ರಸ್ತೆ ಎತ್ತರದಲ್ಲಿದ್ದು, ಇಲ್ಲಿ ಮನೆಗಳು ತಗ್ಗು ಪ್ರದೇಶದಲ್ಲಿರುವುದರಿಂದ ಹಾಗೂ ಪಕ್ಕದ ಪೊಲೀಸ್ ವಸತಿ ಪ್ರದೇಶದ ನೀರು ಕೂಡ ಈ ಕಡೆಗೆ ಸಂಪರ್ಕ ಕಲ್ಪಿಸಿದ್ದು ಇಲ್ಲಿ ಮನೆಗಳಿಗೆ ನುಗ್ಗುತ್ತಿದೆ. ಒಳಚರಂಡಿಯ ನೀರು ಹೊರಗೆ ಬರುವುದರಿಂದ ಒಳಗೆ ನುಗ್ಗಲು ಕಾರಣ. ಪೊಲೀಸ್ ಕಾಂಪೌಂಡ್ ಪಕ್ಕದ ಚರಂಡಿ ವ್ಯವಸ್ಥೆ ಗಿಡ, ಕಸಕಡ್ಡಿಗಳಿಂದ ಕಟ್ಟಿಕೊಂಡಿದ್ದು,  ನೀರು ಸರಾಗವಾಗಿ ಹರಿಯಲು ಸಮಸ್ಯೆಯಾಗುತ್ತಿದೆ ಮತ್ತು ಅಲ್ಲಿನ ಗಿಡ, ಕಸ ಕಡ್ಡಿಯಿಂದಾಗಿ ಹಾವು, ವಿಷಜಂತುಗಳು ಪಿಸಾಳೆ ಕಾಂಪೌಂಡ್ ಕಡೆಗೆ ಆಗಾಗ್ಗೆ ಬರುವುದು ಸಾಮಾನ್ಯವಾಗಿದೆ. ಮಳೆಯ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ಮತ್ತು ಇನ್ನಿತರ ವ್ಯವಸ್ಥೆಗಳನ್ನು ಇಲ್ಲಿ ಮಾಡಿಕೊಡಬೇಕು. ಆಹಾರ ಧಾನ್ಯಗಳು, ಸಾಮಗ್ರಿಗಳು ಎಲ್ಲ ನೀರುಪಾಲಾಗಿದ್ದು ಅಧಿಕಾರಿಗಳು ಪರಿಹಾರ ಮಾಡಿಕೊಡಬೇಕು” ಎಂದು ಒತ್ತಾಯಿಸಿದರು.

ನಿವಾಸಿ ರಾಹುಲ್ ಮಾತನಾಡಿ, “ಪೊಲೀಸ್ ವಸತಿ ಗೃಹಗಳ ನೀರು ಈ ಕಡೆಹೇ ಹರಿಯುವಂತೆ ಸಂಪರ್ಕ ಕಲ್ಪಿಸಿದ್ದು, ಮುಂಚೆ ಇದ್ದ ಒಳಚರಂಡಿ ಸಂಪರ್ಕವನ್ನು ಬದಲಾಯಿಸಿ ಬೇರೆಡೆಗೆ ತಿರುಗಿಸಿದ್ದಾರೆ. ಇದರಿಂದ ಕಾಮಗಾರಿ ಅವೈಜ್ಞಾನಿಕವಾಗಿದ್ದು, ನೀರು ಸರಾಗವಾಗಿ ಹೋಗದೆ ಚೇಂಬರ್‌ಗಳೂ ಕೂಡ ಮಳೆ ಬಂದಾಗ ಕಟ್ಟಿಕೊಂಡು ಆ ನೀರು ಮನೆಗಳ ಶೌಚಾಲಯಗಳ ಮೂಲಕ ಮನೆಯೊಳಗೆ ಬರುತ್ತಿದೆ. ಇದನ್ನು ಸಾಕಷ್ಟು ಬಾರಿ ಪಾಲಿಕೆ ಅಧಿಕಾರಿಗಳಿಗೆ, ನಗರಸಭೆ ಸದಸ್ಯರಿಗೆ ತಿಳಿಸಿದರೂ, ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಇದೇ ರೀತಿ ಮುಂದುವರೆದರೆ ನಿವಾಸಿಗಳು ನಗರಸಭಾ ಸದಸ್ಯರ ಮತ್ತು ಶಾಸಕರ ಮನೆಯ ಮುಂದೆ ಪ್ರತಿಭಟಿಸಬೇಕಾಗುತ್ತದೆ” ಎಂದು ಎಚ್ಚರಿಸಿದರು. 

“ಹಳೆಯ ಚರಂಡಿಯ ಸಂಪರ್ಕ ವ್ಯವಸ್ಥೆ ನೀರು ಸರಾಗವಾಗಿ ಹೋಗುವಂತಿತ್ತು. ಆಗ ಯಾವುದೇ ಸಮಸ್ಯೆ ಇರಲಿಲ್ಲ. ಈ ಸಮಸ್ಯೆ ಬಗೆಹರಿಸಲು ಹಳೆಯ ವ್ಯವಸ್ಥೆಯನ್ನೇ ಮತ್ತೆ ಮರು ಸಂಪರ್ಕ ಮಾಡಿಕೊಡಬೇಕಾಗಿ ಒತ್ತಾಯಿಸುತ್ತೇವೆ” ಎಂದು ತಿಳಿಸಿದರು. 

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಒಳಮೀಸಲಾತಿ ಜಾರಿಯಾಗುವವರಿಗೆ ನೇಮಕಾತಿ ಪ್ರಕ್ರಿಯೆ ತಡೆಗೆ ಆಗ್ರಹ; ಅ.23ರಂದು ಪ್ರತಿಭಟನೆ

ಈ ಬಗ್ಗೆ ದಾವಣಗೆರೆ ಮಹಾನಗರ ಪಾಲಿಕೆಯ  ಒಳಚರಂಡಿ ವ್ಯವಸ್ಥೆಯ ಸಹಾಯಕ ಅಭಿಯಂತರರಾದ ವಿ.ನಾಯಕ್ ಅವರನ್ನು ಮಾತನಾಡಿಸಿದಾಗ, “ಮಳೆಯಿಂದಾಗಿ ಅಲ್ಲಿ ನಿಂತಿದ್ದ ನೀರನ್ನು ಪಾಲಿಕೆಯ ಸಿಬ್ಬಂದಿ ಕ್ರಮ ಕೈಗೊಂಡು ನೀರು ಹರಿ ಹೋಗುವಂತೆ ಮಾಡಿದ್ದಾರೆ. ನಾವು ಸಾರ್ವಜನಿಕರಿಗೆ ಎಷ್ಟೇ ವಿನಂತಿಸಿದರೂ ಮಳೆಯ ನೀರಿನ ಪೈಪ್ ಅನ್ನು ನೇರವಾಗಿ ಯುಜಿಡಿ ಪೈಪ್ ಲೈನಿಗೆ ನೀರು ಹೋಗುವಂತೆ ಸಂಪರ್ಕ ಕಲ್ಪಿಸಿರುತ್ತಾರೆ. ಇದು ತಪ್ಪು ಮಳೆಯ ನೀರನ್ನು ಸರಿಯಾದ ವ್ಯವಸ್ಥೆ ಮಾಡಿ ಶೇಖರಿಸಬೇಕು. ಇಲ್ಲವೇ ರಸ್ತೆಯ ಅಥವಾ ಹೊರಗಿನ ಚರಂಡಿಗೆ, ರಾಜಕಾಲುವೆಗೆ ಬಿಡಬೇಕು.  ಅಲ್ಲಿ ಮಳೆ ನೀರಿನ ಸಮಸ್ಯೆಯಿಂದ ಈ ರೀತಿ ಆಗುತ್ತೆಂದರೆ ಮಳೆಯ ನೀರು ಸಂಪರ್ಕಗಳು ಕೆಲವು ಒಳಚರಂಡಿ ವ್ಯವಸ್ಥೆಗೆ ಸಂಪರ್ಕಗೊಂಡಿರುವ ಅನುಮಾನವಿದೆ. ಜೊತೆಗೆ ಪೊಲೀಸ್ ಕಾಂಪೌಂಡಿನ ನೀರು ನುಗ್ಗುವ ಸಮಸ್ಯೆ ಮತ್ತು ಅವೈಜ್ಞಾನಿಕ ಕಾಮಗಾರಿ ಇದ್ದರೆ, ಭೇಟಿ ನೀಡಿ ಸ್ಥಳೀಯರನ್ನು ಮಾತನಾಡಿಸಿ ಅಲ್ಲಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇವೆ” ಎಂದು ಪ್ರತಿಕ್ರಿಯಿಸಿದರು.

ನಗರಪಾಲಿಕೆ ಅಧಿಕಾರಿಗಳು, ಶಾಸಕರು ಮತ್ತು ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ವ್ಯವಸ್ಥೆ ಸರಿಪಡಿಸಿ ಸಮಸ್ಯೆಗೆ ಪರಿಹಾರ ನೀಡಬೇಕೆಂದು ಸ್ಥಳೀಯರು  ಒತ್ತಾಯಿಸಿದ್ದಾರೆ.

ವಿನಾಯಕ್
ವಿನಾಯಕ್ ಚಿಕ್ಕಂದವಾಡಿ
+ posts

ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವಿನಾಯಕ್ ಚಿಕ್ಕಂದವಾಡಿ
ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X