ಭಾರತೀಯ ಚಿಲ್ಲರೆ ವ್ಯಾಪಾರ ವ್ಯವಸ್ಥೆಯ ಮೇಲೆ ಅಮೆಜಾನ್, ಫ್ಲಿಪ್‌ಕಾರ್ಟ್‌ನಂತರ ಇ-ಕಾಮರ್ಸ್ ದೈತ್ಯ ಸಂಸ್ಥೆಗಳು ಕರಿನೆರಳು ಆವರಿಸಿದೆ. ದೈತ್ಯ ಸಂಸ್ಥೆಗಳು ಚಿಲ್ಲರೆ ವ್ಯಾಪಾರವನ್ನು ನಾಶ ಮಾಡುತ್ತಿವೆ. ಚಿಲ್ಲರೆ ವ್ಯಾಪಾರ ಸಮೂಹ ನಾಮಾವಶೇಷವಾದಂತೆ ತಡೆಯಬೇಕು. ಅದಕ್ಕಾಗಿ, ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ), ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ), ಆಲ್ ಇಂಡಿಯಾ ಮೊಬೈಲ್ ರಿಟೇಲರ್ಸ್ಸ್ ಅಸೋಸಿಯೇಷನ್ (ಎಐಎಂಆರ್‌ಎ) ಬಿಡುಗಡೆ ಮಾಡಿರುವ ಸಮಗ್ರ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕು ಎಂದು ಎಐಎಂಆರ್‌ಎ ಒತ್ತಾಯಿಸಿದೆ.
ಶಿಫಾರಸ್ಸುಗಳನ್ನು ಪರಿಗಣಿಸಿ ಕಟ್ಟುನಿಟ್ಟಾದ ಇ-ಕಾಮರ್ಸ್ ನೀತಿಯಲ್ಲಿ ಜಾರಿಗೆ ತರಬೇಕೆಂದು ಆಗ್ರಹಿಸಿ ಎಐಎಂಆರ್‌ಎನ ರಾಜ್ಯಾಧ್ಯಕ್ಷ ರವಿ ಕುಮಾರ್, ಬೆಂಗಳೂರು ವಲಯ ಉಪಾಧ್ಯಕ್ಷ ಜಿ. ನಾಗರಾಜ ನಾಯ್ಡು ಕಾರ್ಯದರ್ಶಿ ಸುಹಾಸ್ ಕಿಣಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. “ದಸರಾ ಹಬ್ಬದ ಮಾರಾಟದಲ್ಲಿ ಇ-ಕಾಮರ್ಸ್‌ಗಳ ಒಟ್ಟು ಸರಾಸರಿ ವ್ಯಾಪಾರದಲ್ಲಿ ಶೇ.70ರಷ್ಟು ಮೊಬೈಲ್‌ಗಳೇ ಮಾರಾಟವಾಗಿವೆ. ಇದು, ರಿಟೇಲ್ ವ್ಯಾಪಾರಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ. ಚಿಲ್ಲರೆ ವ್ಯಾಪಾರ ವ್ಯವಸ್ಥೆಯನ್ನು ರಕ್ಷಿಸಬೇಕೆಂಬ ಸಂದೇಶ ನೀಡಿದೆ. ಚಿಲ್ಲರೆ ವ್ಯಾಪಾರ ಕ್ಷೇತ್ರ ಉಳಿಯಲು ಕಟ್ಟುನಿಟ್ಟಾದ ಇ-ಕಾಮರ್ಸ್ ನೀತಿಯನ್ನು ಜಾರಿಗೊಳಿಸಬೇಕು” ಎಂದು ಆಗ್ರಹಿಸಿದ್ದಾರೆ.
“ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ಒಂಬುಡ್ಸ್ ಮನ್ ವ್ಯವಸ್ಥೆಯನ್ನು ಅಳವಡಿಸಬೇಕು. ಬಿ2ಸಿ ಇ-ಕಾಮರ್ಸ್ ವಹಿವಾಟಿಗೆ ಜಿಎಸ್‌ಟಿ ಇನ್‌ಪುಟ್ ತೆರಿಗೆ ರದ್ದುಪಡಿಸಬೇಕು. ವಿಶೇಷವಾಗಿ, ಕ್ಯಾಶ್ ಬ್ಯಾಕ್ ಪ್ರೋತ್ಸಾಹ ಮತ್ತು ಹಬ್ಬಗಳ ಋತುವಿನ ವಿಶೇಷ ಮಾರಾಟ ಉತ್ಸವಗಳನ್ನು ರದ್ದುಪಡಿಸಿ ಇ-ಕಾಮರ್ಸ್ ಮೇಲೆ ವಿಲಾಸಿ ತೆರಿಗೆ ವಿಧಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ಭಾರತೀಯ ಚಿಲ್ಲರೆ ವಲಯದ ಮೇಲೆ ಇ-ಕಾಮರ್ಸ್ ದೈತ್ಯರಾದ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ನಿಂದ ವ್ಯಾಪಕ ಹಾನಿಕಾರಕ ಪರಿಣಾಮಗಳು ಉಂಟಾಗುತ್ತಿವೆ. ಇದನ್ನು ತಡೆಗಟ್ಟದಿದ್ದರೆ ಚಿಲ್ಲರೆ ವ್ಯಾಪಾರ ಕ್ಷೇತ್ರ ಕುಸಿದು ಬೀಳಲಿದೆ. ಈ ಎರಡೂ ದೊಡ್ಡ ಸಂಸ್ಥೆಗಳು ಎಲ್ಲ ವಲಯಗಳಲ್ಲೂ ತನ್ನ ಜಾಲವನ್ನು ವ್ಯಾಪಿಸಿಕೊಂಡಿವೆ. ಸ್ಪರ್ಧಾತ್ಮಕ ವ್ಯಾಪಾರ ವ್ಯವಸ್ಥೆಯನ್ನು ಹಾಳುಗೆಡವಿದೆ. ಎರಡೂ ವೇದಿಕೆಗಳು ವಿಶೇಷ ಉತ್ಪನ್ನಗಳ ಬಿಡುಗಡೆಗಳಿಗಾಗಿ ಸ್ಮಾರ್ಟ್ಫೋನ್ ಮತ್ತು ತಂತ್ರಜ್ಞಾನ ಕಂಪನಿಗಳೊಂದಿಗೆ ಪಾಲುದಾರಿಕೆ ಹೊಂದಿವೆ. ತಮ್ಮ ಆದ್ಯತೆಯ ಮಾರಾಟಗಾರರಿಗೆ ಆಳವಾದ ರಿಯಾಯಿತಿಗಳನ್ನು ನೀಡುತ್ತಿರುವುದರಿಂದ ಚಿಲ್ಲರೆ ಮಾರಾಟ ವಲಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ” ಎಂದಿದ್ದಾರೆ.
“ಈ ಸಂಸ್ಥೆಗಳು ಮಾರುಕಟ್ಟೆಯಲ್ಲಿ ಏಕಸ್ವಾಮ್ಯತೆ ಸಾಧಿಸಿವೆ. ವಸ್ತುಗಳ ದರ ನಿಗದಿ ಮಾಡುವಲ್ಲಿಯೂ ತನ್ನ ಪ್ರಭಾವ ಬೀರುತ್ತಿವೆ. ವಿದೇಶಿ ನೇರ ಬಂಡವಾಳ ಹೂಡಿಕೆ ನಿಯಮಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಪ್ರಮುಖ ಬ್ರ್ಯಾಂಡ್‌ಗಳ ಮತ್ತು ಇ-ಕಾಮರ್ಸ್ ವೇದಿಕೆಗಳ ನಡುವಿನ ಉನ್ನತ ಮಟ್ಟದ ಒಪ್ಪಂದಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ತಪ್ಪಿತಸ್ಥ ಕಂಪನಿಗಳು ಮತ್ತು ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ನ್ಯಾಯಯುತ ವ್ಯಾಪಾರ ಅಭ್ಯಾಸಗಳನ್ನು ಉತ್ತೇಜಿಸಬೇಕು” ಎಂದು ಆಗ್ರಹಿಸಿದ್ದಾರೆ.