ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಕೊಡ್ಲಿವಾಡ ಮತ್ತು ಮುಗಳಿಹಾಳ ಗ್ರಾಮದ ರೈತರು ಬೆಳೆದ ಮೆಕ್ಕೆಜೋಳವು ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನಾಶವಾಗಿದ್ದು, ರೈತರು ಕಂಗಾಲಾಗಿದ್ದಾರೆ.
ಐದಾರು ತಿಂಗಳಿನಿಂದ ಬಿತ್ತಿ ಗೊಬ್ಬರ ಹಾಕಿ ನೀರು ಹಾಯಿಸಿ ಮೆಕ್ಕೆಜೋಳ ಬೆಳೆದಿದ್ದು, ಸದ್ಯ ಗೋವಿನಜೋಳದ ತೆನೆಯನ್ನು ಮುರಿದು ರಾಶಿ ಮಾಡಿ ಮಾರುಕಟ್ಟೆಗೆ ಸಾಗಿಸಬೇಕು ಎನ್ನುವ ಸಂದರ್ಭದಲ್ಲಿಯೇ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಗೋವಿನ ಜೋಳದ ತೆನೆಗಳು ಮಳೆನೀರಿನ ಪಾಲಾಗಿವೆ. ಲಕ್ಷಾಂತರ ರೂಪಾಯಿಗಳ ಗೋವಿನಜೋಳ ಬೆಳೆಯು ನಾಶವಾಗಿದ್ದು, ರೈತರಿಗೆ ದಿಕ್ಕೇ ತೊಚದಂತಾಗಿದೆ.
ಕೊಡ್ಲಿವಾಡ ಗ್ರಾಮದ ರೈತ ರಾಮಪ್ಪ ಹಾರುಗೊಪ್ಪ ಈ ಕುರಿತು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಎರಡು ಎಕರೆ ಭೂಮಿಯಲ್ಲಿ ಗೋವಿನ ಜೊಳ ಬೆಳೆದಿದ್ದು, ತೆನೆ ಮುರಿದು ತೋಟದಲ್ಲಿ ರಾಶಿ ಮಾಡಲು ಹಾಕಲಾಗಿತ್ತು. ಆದರೆ ಅನಿರೀಕ್ಷಿತವಾಗಿ ಮಳೆ ಬಂದಿದ್ದರಿಂದ ತೆನೆಗಳು ಮಳೆಗೆ ಸಿಲುಕಿ ಮೊಳಕೆ ಬಂದಿವೆ. ಇದರಿಂದ ಮಾರುಕಟ್ಟೆಯಲ್ಲಿ ಯಾರೂ ಇವುಗಳನ್ನು ಕೊಂಡುಕೊಳ್ಳುವದಿಲ್ಲ. ಐದಾರು ತಿಂಗಳಿಂದ ಬೆಳೆದ ಗೋವಿನ ಜೋಳದ ಬೆಳೆಯು ನಾಶವಾಗಿ ನಷ್ಟವಾಗಿದೆ. ಅಧಿಕಾರಿಗಳು ಗಮನಹರಿಸಿ ಪರಿಹಾರ ನೀಡಬೇಕು” ಎಂದು ಅವಲತ್ತುಕೊಂಡರು.

ಈ ಸುದ್ದಿ ಓದಿದ್ದೀರಾ? ಈ ದಿನ ಫಲಶೃತಿ | ಪಡಿತರ ಗೋದಾಮಿಗೆ ಗಜೇಂದ್ರಗಡ ಅಧಿಕಾರಿಗಳ ಭೇಟಿ; ಆಹಾರ ನಿಯಮ ಪಾಲನೆಗೆ ಸೂಚನೆ
ಈ ಕುರಿತು ಯರಗಟ್ಟಿ ತಾಲೂಕಿನ ಕೃಷಿ ಅಧಿಕಾರಿಗಳನ್ನು ಈ ದಿನ.ಕಾಮ್ ಸಂಪರ್ಕಿಸಿದಾಗ, “ಅಧಿಕಾರಿಗಳು ರೈತರ ತೋಟಗಳಿಗೆ ಭೇಟಿ ನೀಡಿ ಸಮಿಕ್ಷೆ ಮಾಡುತ್ತೆವೆ ಹಾಗೂ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ” ಎಂದು ಭರವಸೆ ನೀಡಿದ್ದಾರೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು