ರಾಯಚೂರು ಜಿಲ್ಲೆಯಲ್ಲಿ ಕಳೆದ ಮೂರೂವರೆ ವರ್ಷದಲ್ಲಿ ಸಂಭವಿಸಿರುವ ಅಪಘಾತಗಳಲ್ಲಿ ಒಟ್ಟು 1,184 ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಯಚೂರು ಜಿಲ್ಲಾಡಳಿತ ಹೇಳಿದೆ.
ವಾಹನ ಸವಾರರು ರಸ್ತೆ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಇರುವುದು, ಸಂಚಾರ ನಿಯಮಗಳ ಉಲ್ಲಂಘನೆಗಳೇ ರಸ್ತೆ ಅಪಘಾತಕ್ಕೆ ಕಾರಣಎಂದು ಪೊಲೀಸರು ಹೇಳುತ್ತಿದ್ದಾರೆ. ಆದಾಗ್ಯೂ, ರಸ್ತೆಗಳು ಹಾಳಾಗಿರುವ ಕಾರಣದಿಂದಲೇ ಹೆಚ್ಚು ಅಪಘಾತಗಳು ಸಂಭವಿಸಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕಳೆದ ಮೂರೂವರೆ ವರ್ಷಗಳಿಗೆ ಹೋಲಿಸಿದರೆ, 2021ರಲ್ಲಿಯೇ ಹೆಚ್ಚು ಅಪಘಾತಗಳು ಸಂಭವಿಸಿವೆ. ಆ ವರ್ಷ, ಗರಿಷ್ಠ 335 ಮಂದಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇನ್ನು, 2022ರಲ್ಲಿ 330 ಮಂದಿ ಅಪಘಾತಗಳಿಗೆ ಬಲಿಯಾಗಿದ್ದಾರೆ. 2023ರಲ್ಲಿ 279 ಮಂದಿ ಸಾವನ್ನಪ್ಪಿದ್ದರೆ, ಈ ವರ್ಷದ 10 ತಿಂಗಳಲ್ಲಿ 240 ಮಂದಿ ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
“2021ರಿಂದ 2024 ಅಕ್ಟೋಬರ್‌ವರೆಗೆ ಒಟ್ಟು 2,509 ರಸ್ತೆ ಅಪಘಾತಗಳು ಸಂಭವಿಸಿವೆ. ಪರಿಣಾಮ, ಒಟ್ಟು 1,184 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, 3,365 ಮಂದಿ ಗಾಯಗೊಂಡಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ಚಾಲಕರ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವಾಗಿದೆ. ಸಂಚಾರ ನಿಯಮ ಹಾಗೂ ರಸ್ತೆ ಸುರಕ್ಷತೆಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ” ಎಂದು ರಾಯಚೂರು ಎಸ್‌ಪಿ ಎಂ ಪುಟ್ಟಮಾದಯ್ಯ ಹೇಳಿದ್ದಾರೆ.