ನವೆಂಬರ್ 20ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ 99 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಿಸಲಾಗಿದೆ.
288 ಸ್ಥಾನಗಳಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಬಿಜೆಪಿ, ಶಿವಸೇನಾ (ಶಿಂದೆ ಬಣ) ಮತ್ತು ಎನ್ಸಿಪಿ (ಅಜಿತ್ ಪವಾರ್) ಪಕ್ಷಗಳು ಮಹಾಯುತಿ ಮೈತ್ರಿಕೂಟವಾಗಿ ಕಣಕ್ಕಿಳಿದಿವೆ. ಈ 288 ಸ್ಥಾನಗಳ ಪೈಕಿ 260 ಸ್ಥಾನಗಳಿಗೆ ಈ ಮೈತ್ರಿಕೂಟ ಪಕ್ಷಗಳ ಮಧ್ಯೆ ಸೀಟು ಹಂಚಿಕೆ ಆಗಿದೆ. ಉಳಿದ 28 ಸ್ಥಾನಗಳಿಗೆ ಮಾತುಕತೆ ನಡೆಯುತ್ತಿದೆ.
ಮೂಲಗಳ ಪ್ರಕಾರ 260 ಸ್ಥಾನಗಳಲ್ಲಿ ಬಿಜೆಪಿಗೆ 142 ಕ್ಷೇತ್ರಗಳು, ಶಿವಸೇನಾ ಮತ್ತು ಎನ್ಸಿಪಿ ಪಕ್ಷಗಳಿಗೆ ಕ್ರಮವಾಗಿ 66 ಮತ್ತು 52 ಕ್ಷೇತ್ರಗಳು ಸಿಕ್ಕಿವೆ ಎನ್ನಲಾಗಿದೆ. ಇನ್ನುಳಿದ 28 ಕ್ಷೇತ್ರಗಳನ್ನೂ ಶೀಘ್ರದಲ್ಲೇ ಹಂಚಿಕೆ ಮಾಡುವ ಸಾಧ್ಯತೆಯಿದೆ.
ಬಿಜೆಪಿ ಸದ್ಯ 99 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಈ ಪೈಕಿ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನಾಗಪುರ್ ನೈರುತ್ಯ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಮಹಾರಾಷ್ಟ್ರ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಶೇಖರ್ ಬವಾನ್ಕುಲೆ ಅವರು ಕಾಮಠಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಗೋಪಾಲ್ ಜೋಶಿ ಪ್ರಕರಣ ಮತ್ತು ಮಾರಿಕೊಂಡ ಮಾಧ್ಯಮಗಳು
ಸಚಿವರಾದ ಗಿರೀಶ್ ಮಹಾಜನ್ ಅವರಿಗೆ ಜಾಮ್ನರ್, ಸುಧೀರ್ ಮುಂಗಾಂತಿವಾರ್ ಅವರಿಗೆ ಬಲ್ಲಾರ್ಪುರ್, ಆಶೀಶ್ ಶೆಲಾರ್ ಅವರಿಗೆ ವಾಂದ್ರೆ ಪಶ್ಚಿಮ, ಮಂಗಲ್ ಪ್ರಭಾತ್ ಲೋಧಾ ಅವರಿಗೆ ಮಲಬಾರ್ ಹಿಲ್, ರಾಹುಲ್ ನರ್ವೇಕರ್ ಅವರಿಗೆ ಕೊಲಾಬ, ಛತ್ರಪತಿ ಶಿವೇಂದ್ರ ರಾಜೇ ಭೋಸಲೆ ಅವರಿಗೆ ಸತಾರ ಕ್ಷೇತ್ರದ ಟಿಕೆಟ್ ಸಿಕ್ಕಿದೆ.
ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳಿಗೆ ಒಟ್ಟಿಗೆ ಈ ಬಾರಿ ವಿಧಾನಸಭಾ ಚುನಾವಣೆಗಳಾಗುತ್ತಿವೆ. ಮಹಾರಾಷ್ಟ್ರದಲ್ಲಿ ನವೆಂಬರ್ 20ರಂದು ಒಂದೇ ಹಂತದಲ್ಲಿ ಮತದಾನವಾಗಲಿದೆ. ಜಾರ್ಖಂಡ್ನಲ್ಲಿ ನವೆಂಬರ್ 13 ಮತ್ತು 20, ಎರಡು ಹಂತದಲ್ಲಿ ಮತದಾನವಾಗುತ್ತಿದೆ. ನವೆಂಬರ್ 23ರಂದು ಎರಡೂ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
