ಬುದ್ಧ, ಬಸವ, ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅನುಸರಿಸಿಕೊಂಡು ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಲು ಎಲ್ಲರೂ ಶ್ರಮಿಸಬೇಕು ಎಂದು ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕದ ಅಧ್ಯಕ್ಷ ಅರ್ಜುನ ಗೊಳಸಂಗಿ ಹೇಳಿದರು.
ಭಾನುವಾರ ರಾಯಚೂರು ನಗರದ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಎರಡನೇ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ʼಯಾವುದೇ ಸಾಹಿತ್ಯ ಸಮ್ಮೇಳನ ಯಶಸ್ವಿ ಆಗಬೇಕಾದರೆ ಪ್ರತಿಯೊಬ್ಬರಿಗೂ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಲ್ಲಿ ಕಾರ್ಯಕ್ರಮವನ್ನು ಅಭೂತಪೂರ್ವ ಯಶಸ್ಸು ಕಾಣಲು ಸಾಧ್ಯʼ ಎಂದು ಹೇಳಿದರು.
ಸಮ್ಮೇಳನಕ್ಕಾಗಿ ಸ್ವಾಗತ ಸಮಿತಿ, ಮೆರವಣಿಗೆ ಸಮಿತಿ, ವೇದಿಕೆ ಸಮಿತಿ, ಆಹಾರ ಸಮಿತಿ, ಪ್ರಚಾರ ಸಮಿತಿ, ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿಗಳ ರಚನೆ ಸೇರಿದಂತೆ ಅಧ್ಯಕ್ಷರು ಮುಂದಿನ ದಿನಗಳಲ್ಲಿ ಉಪಾಧ್ಯಕ್ಷರನ್ನು, ಸದಸ್ಯರನ್ನು ನೇಮಿಸಿಕೊಂಡು ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಬೇಕುʼ ಎಂದರು.
ಇದೇ ಸಂದರ್ಭದಲ್ಲಿ ದಲಿತ ಸಾಹಿತ್ಯ ಪರಿಷತ್ ರಾಯಚೂರು ಜಿಲ್ಲಾಧ್ಯಕ್ಷ ತಾಯರಾಜ್ ಮರ್ಚಟಹಾಳ ಅವರನ್ನು ಸಮ್ಮೇಳನದ ಸಂಯೋಜರನ್ನಾಗಿ ಹಾಗೂ ಸಿಂಧನೂರು ತಾಲ್ಲೂಕಿನ ಡಾ.ಹುಸೇನಪ್ಪ ಅಮರಪೂರ್ ಅವರನ್ನು ಸಹ ಸಂಯೋಜಕರನ್ನಾಗಿ ನೇಮಿಸಲಾಯಿತು.
ಸಮ್ಮೇಳನದ ನೆನಪಿಗಾಗಿ ಸ್ಮರಣ ಸಂಚಿಕೆ, ರಾಯಚೂರು ಜಿಲ್ಲೆಯ ದಲಿತ ಕಾವ್ಯ ಪ್ರಾತಿನಿಧಿಕ ಕವನ ಸಂಕಲನ,ಜಿಲ್ಲೆಯ ಪ್ರಾತಿನಿಧಿಕ ಕಥಾ ಸಂಕಲನ, ವೈಚಾರಿಕ ಲೇಖನಗಳ ಕುರಿತಾದ ಒಂದು ಪುಸ್ತಕ ಹೊರತರುವುದಲ್ಲದೆ ವಿವಿಧ ಲೇಖಕ, ಕವಿಗಳ ಒಟ್ಟು 30 ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿಲಾಗುವುದು ಎಂದು ಸಭೆಯಲ್ಲಿ ಚರ್ಚಿಸಲಾಯಿತು.
ಪತ್ರಕರ್ತ ಚನ್ನಬಸವ ಪಿ.ಬಾಗಲವಾಡ ಮಾತನಾಡಿ, ʼಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವು ದೊಡ್ಡ ಮಟ್ಟದಲ್ಲಿ ಆಯೋಜಿಸುವ ಕಾರಣ ಹೆಚ್ಚಿನ ಖರ್ಚು ಆಗುತ್ತದೆ. ಹೀಗಾಗಿ ಸ್ವಾಗತ ಸಮಿತಿ ಸೇರಿದಂತೆ ಇನ್ನಿತರ ಜವಾಬ್ದಾರಿಗಳನ್ನು ಚುನಾಯಿತ ಜನಪ್ರತಿನಿಧಿಗಳಿಗೆ ಒಪ್ಪಿಸಿದರೆ ಆರ್ಥಿಕ ನಿರ್ವಹಣೆಗೆ ಸಹಕಾರಿಯಾಗುತ್ತದೆʼ ಎಂದು ಸಲಹೆ ನೀಡಿದರು.
ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರಿಗೂಳಿ ಮಾತನಾಡಿ, ʼಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳು ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಹಳ್ಳಿ-ಹಳ್ಳಿಗೆ ತಲುಪಿಸುವ ನಿಟ್ಟಿನಲ್ಲಿ ಇಂತಹ ವೈಚಾರಿಕ ಸಮ್ಮೇಳನಗಳು ಏರ್ಪಡಿಸುವುದು ತೀರಾ ಅಗತ್ಯವಾಗಿದೆʼ ಎಂದರು.
ರಾಯಚೂರು ತಾಲೂಕಾ ಕಸಾಪ ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಯುವ ಕವಿ ಕೋರೆನಲ್, ಶ್ರೀನಿವಾಸ ಮರಡಿ, ಜಯ ಕರ್ನಾಟಕ ಜಿಲ್ಲಾಧ್ಯಕ್ಷ ವೆಂಕಟೇಶ ಯಾದವ ಸೇರಿದಂತೆ ಇನ್ನಿತರರು ಅಭಿಪ್ರಾಯಗಳನ್ನು ಹೇಳಿದರು.
ಈ ಸುದ್ದಿ ಓದಿದ್ದೀರಾ? ಭಾರಿ ಮಳೆ: ಬೆಂಗಳೂರಿನ ಶಾಲೆಗಳಿಗೆ ಇಂದು ರಜೆ
ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಗೂ ಸಮ್ಮೇಳನದ ಸಂಯೋಜಕ ತಾಯರಾಜ್ ಮರ್ಚಟಹಾಳ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಧರ್ಮಾವತಿ ಎಸ್.ನಾಯಕ, ಡಾ.ಹುಸೇನಪ್ಪ ಅಮರಾಪುರ, ಸಂತೋಷ ನಂದಿನಿ, ಈರಣ್ಣ ಕೋಸಗಿ, ಆಂಜನೇಯ ಜಾಲಿಬೆಂಚಿ, ಮೂಕಪ್ಲ ಕಟ್ಟೀಮನಿ, ಹನುಮಂತಪ್ಪ, ತಿಪ್ಪಲ ದಿನ್ನಿ, ಮಲ್ಲೇಶ ಕೋಲಿಮಿ ಆರ್.ಕೆ.ಈರಣ್ಣ, ಅಮರೇಶ್ ವೆಂಕಟ ಪುರ, ನಾಗೇಶ್, ಬಸವರಾಜ್ ನಾಯಕ, ಈಶ್ವರ ಹಲಗಿ, ಅರುಣಾ ಕುಮಾರ , ರಾಮಣ್ಣ ಹಿರೇ ಬೇರಿಗಿ, ನರಸಿಂಹ ರಾಂಪುರ, ತಿಮ್ಮಪ್ಪ ಸ್ವಾಮಿ, ಷಣ್ಮುಖಪ್ಪ, ಕವಿತಾ ಕಾಂಬಲೆ, ವನಮಾಲ, ಲಕ್ಷ್ಮಿ, ಹೇಮರಾಜ್ ಅಸ್ಕಿಹಾಳ್,ರಂಗಮಿನಿ ದಾಸ್, ವಸಂತ ಕುಮಾರ್, ರವಿ ದಾದಾಸ ರಾಂಪುರ, ಪ್ರಸಾದ್ ಭಂಡಾರಿ, ಈರಪ್ಪ ಕೊಂಬಿನ್, ಏಚ್.ಭಂಡಾರಿ, ರಾಂಪುರ ಲಕ್ಷ್ಮಿ ರೆಡ್ಡಿ ಸೇರಿದಂತೆ ಅನೇಕ ಮುಖಂಡರು, ಪ್ರಗತಿಪರ ಚಿಂತಕರು,ಸಾಹಿತಿಗಳು ಭಾಗವಹಿಸಿದ್ದರು