ರಾಜ್ಯದ ಮೂರು ವಿಮಾನಗಳಿಗೆ ಭಾನುವಾರ ಬಾಂಬ್ ಬೆದರಿಕೆ ಬಂದಿದೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಆಗಮಿಸುತ್ತಿದ್ದ ಮತ್ತು ಬೆಂಗಳೂರು ವಿಮಾನ ನಿಲ್ದಾಣದಿಂದ ಹಾರಾಲಿದ್ದ ವಿಮಾನಗಳಿಗೆ ಬಾಂಬ್ ಬೆದರಿಕೆ ಬಂದಿದೆ. ಬೆಳಗಾವಿ ವಿಮಾನ ನಿಲ್ದಾಣದ ವಿಮಾನವೊಂದಕ್ಕೂ ಬಾಂಬ್ ಬೆದರಿಕೆ ಹಾಕಲಾಗಿದೆ.
ಎಲ್ಲಾ ಭದ್ರತಾ ತಪಾಸಣೆ ನಡೆಸಿದ ಬಳಿಕ ಇದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದುಬಂದಿದೆ. ಬೆಂಗಳೂರು ವಿಮಾನನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಲಿದ್ದ ಅಲಯನ್ಸ್ ಏರ್ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಮಧ್ಯಾಹ್ನ 1.15ರ ಸುಮಾರಿಗೆ ಬೆದರಿಕೆ ಕರೆ ಬಂದಿದೆ. ಈ ವಿಮಾನದಲ್ಲಿ 46 ಪ್ರಯಾಣಿಕರಿದ್ದರು ಎಂದು ವರದಿಯಾಗಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ವಿಮಾನ ಇಳಿದ ತಕ್ಷಣ ಶ್ವಾನದಳ ಮತ್ತು ಬಾಂಬ್ ಸ್ಕ್ವಾಡ್ ಸಿಬ್ಬಂದಿಗಳು ತಪಾಸಣೆ ನಡೆಸಿದ್ದಾರೆ. ಎಲ್ಲಾ ತಪಾಸಣೆ ಬಳಿಕ ಇದು ಹುಸಿ ಬಾಂಬ್ ಕರೆ ಎಂಬುದು ತಿಳಿದುಬಂದಿದೆ. ವಿಮಾನವು ವಿದ್ಯಾನಗರಕ್ಕೆ ತಲುಪಬೇಕಾಗಿತ್ತು. ಹುಸಿ ಬಾಂಬ್ ಬೆದರಿಕೆಯಿಂದಾಗಿ ವಿಮಾನ ಹಾರಾಟ ಸಮಯದಲ್ಲಿ ವ್ಯತ್ಯಯವಾಗಿದೆ.
ಇದನ್ನು ಓದಿದ್ದೀರಾ? ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ
ಇನ್ನು ಬೆಂಗಳೂರಿನಿಂದ ದೆಹಲಿಗೆ ಟೇಕ್ ಆಫ್ ಆಗಲಿದ್ದ ಇಂಡಿಗೋ ವಿಮಾನಕ್ಕೂ ಹುಸಿ ಬಾಂಬ್ ಬೆದರಿಕೆ ಬಂದಿದೆ. ಆಕಾಶ ಏರ್‌ನ ಕೆಐಎ ಮ್ಯಾನೇಜರ್ ಹರಿಬಾಬು ಬಂಡಿ ಅವರ ದೂರಿನ ಮೇರೆಗೆ ಕೆಐಎ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ವಿಮಾನಯಾನಕ್ಕೆ ಎಕ್ಸ್ ಮೂಲಕ ಬಾಂಬ್ ಬೆದರಿಕೆ ಬಂದಿದೆ ಎಂದು ಹೇಳಲಾಗಿದೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಭಾನುವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ವಿಮಾನ ನಿಲ್ದಾಣದಲ್ಲಿ ತೀವ್ರ ಭದ್ರತಾ ತಪಾಸಣೆ ನಡೆಸಲಾಗಿದ್ದು, ಹುಸಿ ಬಾಂಬ್ ಬೆದರಿಕೆ ಎಂದು ತಿಳಿದುಬಂದಿದೆ. ವಿಮಾನ ನಿಲ್ದಾಣದ ನಿರ್ದೇಶಕರಿಗೆ ಇಮೇಲ್ ಕಳುಹಿಸಲಾಗಿದೆ.
ಇದನ್ನು ಓದಿದ್ದೀರಾ? 24 ಗಂಟೆಗಳಲ್ಲಿ ಮೂರು ವಿಮಾನಗಳಿಗೆ ಬಾಂಬ್ ಬೆದರಿಕೆ; ವಾರದಲ್ಲಿ 35 ಹುಸಿ ಕರೆ!
ಬೆಳಗಾವಿ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆಯ ಕುರಿತು ಡಿಸಿಪಿ ರೋಹನ್ ಜಗದೀಶ್ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. “ಏನೂ ಸಿಕ್ಕಿಲ್ಲ. ಇಮೇಲ್ ಒಂದು ಸುಳ್ಳಾಗಿತ್ತು. ಈ ಇಮೇಲ್ ಕಳುಹಿಸಿದವರ ಗುರುತು ಪತ್ತೆಗೆ ತನಿಖೆ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ.
ಈ ನಡುವೆ ಬೆಂಗಳೂರು ವಿಮಾನ ನಿಲ್ದಾಣದ ಆರು ಇಂಡಿಗೋ ವಿಮಾನಗಳಿಗೆ ಒಟ್ಟು 12 ಬಾಂಬ್ ಬೆದರಿಕೆ ಬಂದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಬೆಂಗಳೂರು ವಿಮಾನ ನಿಲ್ದಾಣವು ಈ ವೈರಲ್ ಸಂದೇಶ ನಕಲಿ ಸುದ್ದಿ ಎಂದು ಸ್ಪಷ್ಟಪಡಿಸಿದೆ.
