ವಿವಿಧ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸುತ್ತಿರುವ ರಾಜ್ಯ ಸರ್ಕಾರವನ್ನು ಸುಪ್ರೀಂ ಕೋರ್ಟ್ ಸೋಮವಾರ ತರಾಟೆಗೆ ತೆಗೆದುಕೊಂಡಿದೆ. ಹಾಗೆಯೇ ಮುಂದಿನ ಆದೇಶದವರೆಗೆ 8, 9 ಮತ್ತು 10ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ (ಅರ್ಧವಾರ್ಷಿಕ ಪರೀಕ್ಷೆ) ಫಲಿತಾಂಶಗಳನ್ನು ಪ್ರಕಟಿಸದಂತೆ ನಿರ್ಬಂಧಿಸಿದೆ.
ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠ ಈ ಆದೇಶವನ್ನು ನೀಡಿದೆ.
ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, “ವಿದ್ಯಾರ್ಥಿಗಳಿಗೆ ಯಾಕೆ ಕಿರುಕುಳ ನೀಡುತ್ತಿದ್ದೀರಿ? ನೀವು ರಾಜ್ಯ ಸರ್ಕಾರವಾಗಿರುವಾಗ ಈ ರೀತಿ ವರ್ತಿಸಬಾರದು” ಎಂದು ಕರ್ನಾಟಕ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ದೇವದತ್ತ್ ಕಾಮತ್ ಅವರಿಗೆ ಪೀಠ ಹೇಳಿದೆ.
ಇದನ್ನು ಓದಿದ್ದೀರಾ? ರಾಜ್ಯದಲ್ಲಿ 5, 8, 9, 11ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲ್ಲ: ಸಚಿವ ಮಧು ಬಂಗಾರಪ್ಪ
“ಇದನ್ನು ನಿಮ್ಮ ಅಹಮ್ಮಿನ ಸಮಸ್ಯೆಯನ್ನಾಗಿಸಬೇಡಿ. ನಿಮಗೆ ನಿಜವಾಗಿಯೂ ವಿದ್ಯಾರ್ಥಿಗಳ ಹಿತದ ಬಗ್ಗೆ ಕಾಳಜಿ ಇದ್ದರೆ ದಯವಿಟ್ಟು ಒಳ್ಳೆಯ ಶಾಲೆಗಳನ್ನು ತೆರೆಯಿರಿ. ವಿದ್ಯಾರ್ಥಿಗಳ ಉಸಿರು ಕಟ್ಟಿಸುವಂತಹ ವ್ಯವಸ್ಥೆ ತರಬೇಡಿ” ಎಂದು ಸುಪ್ರೀಂ ಕೋರ್ಟ್ ಪೀಠ ತಿಳಿಸಿದೆ.
ಕರ್ನಾಟಕ ಸರ್ಕಾರ ಅನುಸರಿಸುತ್ತಿರುವ ಶಿಕ್ಷಣದ ಮಾದರಿಯನ್ನು ಬೇರೆ ಯಾವುದೇ ರಾಜ್ಯಗಳು ಅನುಸರಿಸುತ್ತಿಲ್ಲ ಎಂದು ಕೋರ್ಟ್ ಉಲ್ಲೇಖಿಸಿದೆ.
ಈ ವೇಳೆ ರಾಜ್ಯದ ಏಳು ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 5, 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಸುತ್ತೋಲೆಯನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಇತರ 24 ಜಿಲ್ಲೆಗಳಲ್ಲಿಯೂ ಪರೀಕ್ಷೆ ನಡೆಸಲಾಗಿದೆ ಎಂದು ಕಾಮತ್ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಬೋರ್ಡ್ ಪರೀಕ್ಷೆ | ಸಂವಿಧಾನದ ಮೂಲಭೂತ ಹಕ್ಕನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ: ನಿರಂಜನಾರಾಧ್ಯ ವಿ.ಪಿ
ಇನ್ನು ನಾಲ್ಕು ವಾರಗಳಲ್ಲಿ ಪರೀಕ್ಷೆಯ ನಿಖರವಾದ ವಿವರಗಳನ್ನು ಅಫಿಡವಿಟ್ ಮೂಲಕ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಇತ್ತೀಚೆಗೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಈ ಬಾರಿಯೂ 5, 8, 9 ಮತ್ತು 11ನೇ ತರಗತಿಗಳ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸದಿರಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
2023-24 ಶೈಕ್ಷಣಿಕ ವರ್ಷದಲ್ಲಿ ಮೌಲ್ಯಮಾಪನ-2 ಪರೀಕ್ಷೆ ಬದಲಾಗಿ ಬೋರ್ಡ್ ಪರೀಕ್ಷೆ ಪರಿಚಯಿಸಲಾಗಿತ್ತು. ಖಾಸಗಿ ಶಾಲಾ ಸಂಘಗಳ ವಿರೋಧದ ನಡುವೆಯೂ ಈ ತರಗತಿಗಳಿಗೆ ಈ ವರ್ಷದ ಮಾರ್ಚ್‌ನಲ್ಲಿ ಪರೀಕ್ಷೆಗಳನ್ನು ನಡೆಸಲಾಗಿತ್ತು. ಆದರೆ ಅಷ್ಟರಲ್ಲಿ 5, 8, 9 ಮತ್ತು 11ನೇ ತರಗತಿಗೆ ಬೋರ್ಡ್ ಪರೀಕ್ಷೆ ಆದೇಶದ ವಿರುದ್ದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.
ಇದನ್ನು ಓದಿದ್ದೀರಾ? 5, 8, 9ನೇ ತರಗತಿಗಳ ಬೋರ್ಡ್ ಪರೀಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ
ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್ 5, 8, 9 ಮತ್ತು 11ನೇ ತರಗತಿಗೆ ಬೋರ್ಡ್ ಪರೀಕ್ಷೆ ಆದೇಶವನ್ನು ರದ್ದು ಮಾಡಿತ್ತು. ಏಕ ನ್ಯಾಯಾಧೀಶರ ಪೀಠದ ಮಾರ್ಚ್ 6ರ ಆದೇಶವನ್ನು ತಳ್ಳಿಹಾಕಿ 2023-24ನೇ ಶೈಕ್ಷಣಿಕ ವರ್ಷಕ್ಕೆ ವಿವಿಧ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸಲು ಹೈಕೋರ್ಟ್‌ನ ವಿಭಾಗೀಯ ಪೀಠವು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿತ್ತು.
ಮಾರ್ಚ್ 22ರಂದು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ನೀಡಿದ ತೀರ್ಪಿನ ವಿರುದ್ಧ ಅನುದಾನರಹಿತ ಮಾನ್ಯತೆ ಪಡೆದ ಶಾಲೆಗಳ ಸಂಸ್ಥೆ ಸಲ್ಲಿಸಿದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಈ ವಿವಾದಗಳ ಬಳಿಕ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ರಾಜ್ಯ ಸರ್ಕಾರ ತಡೆಹಿಡಿದಿದೆ.
