ಶಿಕ್ಷಣ, ಸಂಘಟನೆ ಮತ್ತು ಹೋರಾಟಗಳ ಜೊತೆಗೆ ಧ್ವನಿ ಇಲ್ಲದವರಿಗೆ ಧ್ವನಿಯಾಗಿ ನಿಂತು ಎಲ್ಲರಿಗೂ ಸಮಾನವಾದ ಮತದಾನದ ಹಕ್ಕನ್ನು ನೀಡಿದ ಡಾ ಅಂಬೇಡ್ಕರ್ ಹಾಗೂ ಮೀಸಲಾತಿ ಜಾರಿಗೆ ತಂದ ಛತ್ರಪತಿ ಶಾಹೂ ಮಹಾರಾಜರ ಕೊಡುಗೆ ಅಪಾರವಾಗಿದ್ದು, ಸಾಮಾಜಿಕವಾಗಿ ಎಲ್ಲರೂ ಆರ್ಥಿಕವಾಗಿ ಸದೃಢರಾಗಬೇಕು ಎಂದು ಶಾಸಕ ಜೆ ಟಿ ಪಾಟೀಲ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಬೀಳಗಿ ನಗರದ ಸರ್ಕಾರಿ ಆಸ್ಪತ್ರೆ ಹತ್ತಿರದ ಅಂಜುಮನ್ ಶಾದಿ ಮಹಲ್‌ನಲ್ಲಿ ಭಾನುವಾರ ನಡೆದ ಸತ್ಯ ಶೋಧಕ ಸಂಘ ಕರ್ನಾಟಕ ಬೀಳಗಿ ತಾಲೂಕು ಘಟಕದಿಂದ ನಡೆದ ಶಾಹೂ ಅಂಬೇಡ್ಕರ್ ಪರ್ವ-2024, ಮೀಸಲಾತಿ ಜನಕ ಛತ್ರಪತಿ ಶಾಹೂ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಅಂಗವಾಗಿ ಮೀಸಲಾತಿ ಸಾಮಾಜಿಕ ಪ್ರಾತಿನಿಧ್ಯ ಮತ್ತು ಖಾಸಗೀಕರಣದ ಸವಾಲುಗಳು ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಪ್ರಸ್ತುತ ದಿನಗಳಲ್ಲಿ ನಡೆಯುತ್ತಿರುವ ಹೊಸ ಹೊಸ ನಿಯಮಗಳಂತೆ ಮೀಸಲಾತಿ ಮತ್ತು ಪ್ರಾತಿನಿಧ್ಯ ಬಗ್ಗೆ ಚಿಂತನೆ ಮಾಡಬೇಕಾಗಿದೆ. ಡಾ.ಅಂಬೇಡ್ಕರ್‌ವರ ಶಿಕ್ಷಣ ಸಂಘಟನೆ ಮತ್ತು ಹೋರಾಟಕ್ಕೆ ಆದ್ಯತೆ ನೀಡಬೇಕಾಗಿದೆ. ನಮ್ಮ ಬೇಡಿಕೆಗಳು ನ್ಯಾಯಸಮ್ಮತವಾಗಿದ್ದರೆ ಮಾತ್ರ ಅದಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತುಕೊಟ್ಟು ಮೀಸಲಾತಿ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಸತ್ಯ ಶೋಧಕ ಸಂಘಟನೆ ರಾಜ್ಯಾಧ್ಯಕ್ಷ ಪರಶುರಾಮ ಮಹಾರಾಜನವರ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.
ಸತ್ಯ ಶೋಧಕ ಸಂಘಟನೆ ರಾಜ್ಯಾಧ್ಯಕ್ಷ ಪರಶುರಾಮ ಮಹಾರಾಜನವರ ಮಾತನಾಡಿ, “ಸಾಮಾಜಿಕ, ನ್ಯಾಯಸಮ್ಮತವಾದ ಮೀಸಲಾತಿ ಬೇಕಾಗಿದೆ. ಸಾಮಾಜಿಕ ಅಸಮಾನತೆ ಇನ್ನೂ ಜೀವಂತವಾಗಿದೆ. ಸಕಾರತ್ಮಕ ತಾರತಮ್ಯದ ಅಡಿಯಲ್ಲಿ ಸಾಗುವುದು ಅವಶ್ಯವಿದ್ದು, ಇಂದಿನ ಬದಲಾವಣೆ ಕಾಲ ಘಟ್ಟದಲ್ಲಿ ಬರುವ ದಿನಗಳಲ್ಲಿ ಮೀಸಲಾತಿ ಎನ್ನುವುದೇ ಇರುವುದಿಲ್ಲ. ಇದರ ಕುರಿತಾಗಿ ದೇಶದಲ್ಲಿ ದೊಡ್ಡ ಮಟ್ಟದ ಒಂದು ಹುನ್ನಾರ ನಡೆಯುತ್ತಿದೆ. ಇದರ ಬಗ್ಗೆ ಜಾಗೃತರಾಗಬೇಕಾಗಿದೆ. ಇನ್ನೂ ನಮ್ಮ ಕೆಳಮಟ್ಟದಲ್ಲಿ ಕಾಣುವ ಮನಸ್ಥಿತಿಗಳಿವೆ. ನಾವು ನಮ್ಮ ಉಳಿವಿಗೆ ಮತ್ತು ಸಂವಿಧಾನ ಉಳಿವಿಗಾಗಿ ಜಾಗೃತರಾಗಬೇಕಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಒಳಮೀಸಲಾತಿಗಾಗಿ ಮಾದಿಗ-ಛಲವಾದಿ ಸಮಾಜ ಒಗ್ಗೂಡಿ ಹೋರಾಟ; ರಾಜ್ಯಕ್ಕೆ ಮಾದರಿ
ವಿಶ್ರಾಂತ ಪ್ರಾಂಶುಪಾಲ ಡಾ. ಸಾಗರ ತೆಕ್ಕೆನ್ನವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಮೀಸಲಾತಿ ಪಡೆಯಲಾರದವರು ಈ ದೇಶದಲ್ಲಿ ಯಾರೂ ಇಲ್ಲ. ಜಾತಿ ಜಾತಿಯಲ್ಲಿ ದ್ವೇಷ ಬೆಳಸದೆ ಎಲ್ಲರೂ ಒಂದಾಗಿ ನಡೆಯಬೇಕಾಗಿದೆ” ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಣಮಂತ ಕಾಖಂಡಕಿ, ಮಾಜಿ ತಾಪಂ ಅಧ್ಯಕ್ಷ ಶ್ರೀಶೈಲ ಸೂಳಿಕೇರಿ, ಪಪಂ ಮಾಜಿ ಅಧ್ಯಕ್ಷ ಅನಿಲ ಗಚ್ಚಿನಮನಿ, ಮಾಜಿ ಜಿಪಂ ಸದಸ್ಯ ಯಮನಪ್ಪ ರೊಳ್ಳಿ, ಡಿಎಸ್‌ಎಸ್ ಮುಖಂಡ ಬಸವರಾಜ ಹಳ್ಳದಮನಿ, ಪಪಂ ಸದಸ್ಯ ಪಡಿಯಪ್ಪ ಕರಿಗಾರ, ಶ್ರೀಶೈಲ ಅಂಟಿನ, ಶಿವಾನಂದ ಮಾದರ, ಸಿದ್ದು ಸಾರಾವರಿ, ಕಾಶಿಂಅಲಿ ಗೋಡೆ, ಅಬುಶಮಾ ಖಾಜಿ, ರಫೀಕ ಮುಜಾವರ, ಡಿಗ್ರಿ ಕಾಲೇಜು ಪ್ರಾಂಶುಪಾಲ ಸುನಿಲ ನಾರಾಯಣಿ, ಆಶಾ ಬೀಳಗಿ, ಪಪಂಸದಸ್ಯ ಅಬೇದಾಜುಮನಾಳ, ರವಿನಾಗನಗೌಡರ ಸೇರಿದಂತೆ ಇತರರು ಇದ್ದರು.