- ಬಹುಮತ ನೀಡಿದ ನಾಡಿನ ಜನರಿಗೆ ನಮಿಸಿದ ಡಿಕೆಶಿ
- ನಮ್ಮ ಪಕ್ಷದ ಎಲ್ಲರ ಶ್ರಮಕ್ಕೆ ಸಿಕ್ಕ ಗೆಲುವು ಇದು
ನಾನು ಪಕ್ಷದ ವರಿಷ್ಠರಿಗೆ ನೀಡಿದ ಮಾತಿನಂತೆ ಪಕ್ಷವನ್ನು ಗೆಲುವಿನ ದಡ ಸೇರಿಸಿದ್ದೇನೆ. ಇದು ಪಕ್ಷದ ಎಲ್ಲರ ಗೆಲುವು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್, ನನ್ನ ಪಕ್ಷದ ಕಾರ್ಯಕರ್ತರು, ನಾಯಕರ ಒಗ್ಗಟ್ಟಿನ ಪರಿಶ್ರಮದಿಂದ ಈ ಗೆಲುವು ಸಾಧ್ಯವಾಗಿದೆ ಎಂದರು.
ನಾನು ಪಕ್ಷದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಹೇಳಿದ್ದೆ, ಜತೆಗೂಡುವುದು ಆರಂಭ, ಜತೆಗೂಡಿ ಯೋಚಿಸುವುದು ಪ್ರಗತಿ, ಜೊತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂದು. ಅದೇ ರೀತಿ ನಮ್ಮ ನಾಯಕರು ಹಾಗೂ ಕಾರ್ಯಕರ್ತರ ಒಗ್ಗಟ್ಟಿನ ಪರಿಶ್ರಮದಿಂದ ಪಕ್ಷಕ್ಕೆ ಈ ಯಶಸ್ಸು ಸಿಕ್ಕಿದೆ ಎಂದು ಅವರು ಹೇಳಿದರು.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೊಟ್ಟ ಮಾತಿನಂತೆ ನಾನು ಪಕ್ಷವನ್ನು ಗೆಲುವಿನ ದಡ ಸೇರಿಸಿದ್ದೇನೆ. ನನ್ನ ಮೇಲೆ ಬಿಜೆಪಿ ಷಡ್ಯಂತ್ರ ರೂಪಿಸಿ, ಬಿಜೆಪಿ ಸೇರಬೇಕು ಅಥವಾ ಜೈಲಿಗೆ ಹೋಗಬೇಕು ಎಂಬ ಆಯ್ಕೆ ಇಟ್ಟಾಗ ನಾನು ಜೈಲಿಗೆ ಹೋಗುವುದನ್ನು ಆರಿಸಿಕೊಂಡೆ. ಆಗ ಸೋನಿಯಾ ಗಾಂಧಿ ಅವರು ತಿಹಾರ್ ಜೈಲಿಗೆ ಬಂದು ನನ್ನನ್ನು ಭೇಟಿ ಮಾಡಿದ್ದರು. ಅವರು ನನ್ನ ಮೇಲೆ ಅಷ್ಟು ನಂಬಿಕೆ ಇಟ್ಟಿದ್ದರು ಎಂದು ಶಿವಕುಮಾರ್ ಹೇಳಿದರು.
ಈ ಸುದ್ದಿ ಓದಿದ್ದೀರಾ? :ಕಾಂಗ್ರೆಸ್‌ಗೆ ಭರ್ಜರಿ ಮುನ್ನಡೆ; ಜೈಲಿನಲ್ಲಿದ್ದ ಕಹಿ ಘಟನೆ ನೆನೆದು ಕಣ್ಣೀರಿಟ್ಟ ಡಿಕೆಶಿ
ಇದು ಒಬ್ಬನಿಂದ ಬಂದಿರುವ ಯಶಸ್ಸಲ್ಲ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಸೇರಿದಂತೆ ಕಾಂಗ್ರೆಸ್ ಶಾಸಕರುಗಳು, ಎಐಸಿಸಿ ಪದಾಧಿಕಾರಿಗಳು, ಉಸ್ತುವಾರಿಗಳು, ರಾಜ್ಯದ ನಾಯಕರುಗಳು, ಪಕ್ಷದ ಪದಾಧಿಕಾರಿಗಳು, ಬೂತ್ ಮಟ್ಟದಲ್ಲಿ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಿರುವ ಎಲ್ಲಾ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.