ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ದಂಡೋತಿ ಗ್ರಾಮದ ಸಮೀಪದ ಕಾಗಿಣಾ ನದಿಗೆ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಬಿದ್ದ ಪರಿಣಾಮ ಚಾಲಕ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಜರುಗಿದೆ.
ಚಿತ್ತಾಪುರದ ಬಾಹರಪೇಟ್ ನಿವಾಸಿ ನಿಂಗಪ್ಪ ಪೂಜಾರಿ (40) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಕೃಷ್ಣ ಸಂಗಪ್ಪ ಮತ್ತು ಉಮೇಶ್ ಬಸವರಾಜ ಅವರಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಭಾನುವಾರ ರಾತ್ರಿ 1 ಗಂಟೆ ಸುಮಾರಿಗೆ ಸೇಡಂನಿಂದ ಚಿತ್ತಾಪುರಕ್ಕೆ ಬರುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಪಿಎಸ್‍ಐ ಚೇತನ್ ಪೂಜಾರಿ ಭೇಟಿ ನೀಡಿದ್ದು, ಸೋಮವಾರ ಮಧ್ಯಾಹ್ನ ನದಿಗೆ ಬಿದ್ದ ಕಾರನ್ನು ಪೊಲೀಸರು ಜೆಸಿಬಿ ಯಂತ್ರದಿಂದ ಹೊರಕ್ಕೆ ತೆಗೆಸಿದ್ದಾರೆ.
ಈ ಸಂಬಂಧ ಮಾಡಬೂಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.