ಇ.ಡಿ ದುರ್ಬಳಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಮೈಸೂರು ಟೌನ್ ಹಾಲ್ ಬಳಿಯ ಡಾ ಅಂಬೇಡ್ಕರ್ ಪುತ್ಥಳಿ ಮುಂಭಾಗ ಪಂಜಿಡಿದು ಪ್ರತಿಭಟನೆ ನಡೆಸಿದರು.
ದಲಿತ ಮಹಾಸಭಾ ಅಧ್ಯಕ್ಷ ರಾಜೇಶ್ ಮಾತನಾಡಿ, “ಕೇಂದ್ರ ಸರ್ಕಾರ ಸಿದ್ದರಾಮಯ್ಯ ಅವರನ್ನು ಹಣಿಯಲು ಇಡಿ(ಜಾರಿ ನಿರ್ದೇಶನಾಲಯ) ಅಧಿಕಾರ ದುರ್ಬಳಕೆ ಮಾಡಿದೆ. ಇ.ಡಿ ಕೂಡಾ ಕೇಂದ್ರ ಸರ್ಕಾರದ ಕಗೊಂಬೆಯಾಗಿ ವರ್ತಿಸುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಇ.ಡಿ ಅಧಿಕಾರಿಗಳು ಸಿದ್ದರಾಮಯ್ಯನವರ ವಿರುದ್ಧ ಇಸಿಐಆರ್ ದೂರು ದಾಖಲು ಮಾಡಿರುವುದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಷಡ್ಯಂತ್ರ ಹಾಗೂ ಸಿದ್ದರಾಮಯ್ಯನವರನ್ನು ವಾಮಮಾರ್ಗದಿಂದ ಸಿಎಂ ಸ್ಥಾನದಿಂದ ಕೆಳಗಿಳಿಸಲು ಮಾಡಿರುವ ಸಂಚು. ಈ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಸ್ಥಿರಗೊಳಿಸಲು ಬಿಜೆಪಿ ಪಕ್ಷದಿಂದ ಕುತಂತ್ರ ನಡೆಯುತ್ತಿದೆ. ದೇಶದಲ್ಲಿ ವಿರೋಧ ಪಕ್ಷಗಳನ್ನು ಅಸ್ಥಿರಗೊಳಿಸಲು, ಜಾರ್ಖಾಂಡ್, ದೆಹಲಿ, ಮಹಾರಾಷ್ಟ್ರಗಳಲ್ಲಿ ಜನತಂತ್ರ ಸರ್ಕಾರವನ್ನು ಅತಂತ್ರಗೊಳಿಸುವಲ್ಲಿ ನಿರಂತರ ಪ್ರಯತ್ನ ನಡೆಯುತ್ತಿದೆ” ಎಂದು ಆರೋಪಿಸಿದರು.
ಅಹಿಂದ ಕೆ ಶಿವರಾಮು ಮಾತನಾಡಿ, “ಸಿದ್ದರಾಮಯ್ಯ ಕರ್ನಾಟಕ ರಾಜ್ಯದ ಅತ್ಯಂತ ಜನಪ್ರಿಯ, ಅಂತಃಕರಣ ಉಳ್ಳಂತಹ, ಸಮಾಜವಾದಿ ಹಿನ್ನೆಲೆಯ ನಾಯಕರಾಗಿ, ಅಹಿಂದ ವರ್ಗಗಳ ಹೋರಾಟದ ನೇತೃತ್ವ ವಹಿಸಿದವರು. ಆದರೆ, ಕೇಂದ್ರ ಸರ್ಕಾರ ತನ್ನ ದುಷ್ಟ ನಡೆಯಿಂದ ಇ.ಡಿ, ಸಿಬಿಐ ತನಿಖೆಗೆ ಒಳಪಡಿಸಿ, ಹೇಗಾದರೂ ಸರಿ ಮಾನಸಿಕವಾಗಿ ಕುಗ್ಗಿಸಲು ಹುನ್ನಾರ ನಡೆಸಿದೆ” ಎಂದು ಕಿಡಿಕಾರಿದರು.
ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಅಡಿಯಲ್ಲಿ ಈ ಪ್ರಕರಣ ಬರುವುದಿಲ್ಲ. ಸಿದ್ದರಾಮಯ್ಯರವರ ಪಾತ್ರ ಅಥವಾ ಯಾವುದೇ ಸಹಿಯುಳ್ಳ ಆದೇಶ ಇರುವುದಿಲ್ಲ. ಮುಡಾ ಪ್ರಕರಣದಲ್ಲಿ ಇವೆಲ್ಲವೂ ದುರುದ್ದೇಶಪೂರಿತ, ಶೋಷಿತ ಸಮುದಾಯದ ವ್ಯಕ್ತಿ ಸಿಎಂ ಸ್ಥಾನದಲ್ಲಿ ಮುಂದುವರೆಯಬಾರದೆಂದು ಪಿತೂರಿ ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಚಿತ್ತಾಪುರ | ಕಾಗಿಣಾ ನದಿಗೆ ಬಿದ್ದ ಕಾರು : ಚಾಲಕ ಸಾವು; ಇಬ್ಬರಿಗೆ ಗಾಯ
“ಇ.ಡಿ ಇಲಾಖೆ ಅಕ್ರಮ ಹಣ ವರ್ಗಾವಣೆ ಸಂಬಂಧಿಸಿದರೆ, ಇಡಿ ತನಿಖೆ ನಡೆಸಲು ಅವಕಾಶವಿರುತ್ತದೆ. ಆದರೆ ಭೂ ವಿಷಯಕ್ಕೆ ಸಂಬಂಧಿಸಿರುವುದು” ಎಂದರು.
ಲೋಕೇಶ್, ಯೋಗೇಶ್, ರವಿನಂದನ್, ಪ್ರಕಾಶ್, ರವಿ, ಸಿದ್ದರಾಜು, ಎಸ್ ಎ ರಹೀಂ, ಶಿವರುದ್ರ, ನಂಜಪ್ಪ, ರಾಮಣ್ಣ, ಮಹೇಶ್, ಭಾಸ್ಕರ್, ರಾಜಣ್ಣ, ಕೇಶವ, ಸುನಿಲ್, ನಾರಾಯಣ, ರವಿನಾಯಕ, ರಂಗಸ್ವಾಮಿ, ರಾಜಶೇಖರ್, ನರಸಿಂಹ ಮೂರ್ತಿ, ನಂಜುಂಡಸ್ವಾಮಿ ಸೇರಿದಂತೆ ಹಲವರು ಇದ್ದರು.